Advertisement
ಭಾರತದ ಬ್ಯಾಂಕಿಂಗ್ ಇತಿಹಾಸ ಕಂಡ ಅತೀ ದೊಡ್ಡ ಕನಸುಗಾರರಲ್ಲಿ ಟಿ.ಎ.ಪೈ ಒಬ್ಬರು. ಯೋಗ್ಯರನ್ನೂ ಕ್ರಿಯಾಶೀಲರನ್ನೂ ತಕ್ಕ ಕಾಲದಲ್ಲಿ ಗುರುತಿಸಿ ತಮ್ಮ ಕನಸಿನ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸಿಬಿಡುವ ಅವರ ಚಾಣಾ ಕ್ಷತನ ಇವತ್ತೊಂದು ದಂತಕಥೆ. ಆ ದಂತಕಥೆಯ ಬಹುಶ್ರುತ ಅಧ್ಯಾಯದಂತಿರುವ ಕೆ.ಎಂ.ಉಡುಪರ ಮುಖಾಂತರ ಟಿ.ಎ.ಪೈಗಳು ಭಾರತೀಯ ಬ್ಯಾಂಕಿಂಗಿಗೆ ಹೇಳಿಕೊಟ್ಟದ್ದು ಕೃಷಿಗೂ ಸಾಲ ಕೊಡಬಹುದು ಎನ್ನುವುದನ್ನು ಮಾತ್ರವಲ್ಲ; ಪರಿವೀಕ್ಷಿತ ಕೃಷಿ ಅಭಿವೃದ್ಧಿ’ ಎಂಬ ಉದಾತ್ತ ಚಿಂತನೆಯನ್ನು ಕೂಡ. ಕೃಷಿಕರಿಗೆ ಸಾಲ ಕೊಟ್ಟರೆ ಸಾಲದು, ಅವರಿಗೆ ಪರ್ಯಾಯ ಕೃಷಿ ಪದ್ಧತಿಗಳ, ಕೃಷಿಗೆ ಪೂರಕವಾದ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಕೊಡಬೇಕು ಎನ್ನುವುದನ್ನು ಉಡುಪರು ಅರ್ಥೈಸಿಕೊಂಡಿದ್ದರು.
Related Articles
Advertisement
1972ರಲ್ಲಿ ಕೊಳೆಯುವ ಜೈವಿಕ ವಸ್ತುವಿನಿಂದ ಉತ್ಪನ್ನವಾಗುವ ಮಿಥೇನ್ ಅನಿಲವನ್ನು ಅಡು ಗೆಯ ಗ್ಯಾಸ್ ಆಗಿ ಬಳಸುವ ಯೋಜನೆ ಮತ್ತದಕ್ಕೆ ಬ್ಯಾಂಕ್ ಆರ್ಥಿಕ ನೆರವಿನ ಯೋಚನೆಗಳ ಕುರಿತು ಕೆ. ಕೆ. ಪೈಯವರ ನಿರ್ದೇಶನದ ಮೇರೆಗೆ ಉಡುಪರು ತಯಾರಿಸಿದ “ಬಯೋಗ್ಯಾಸ್ ಯೋಜನೆ’ಗೆ ರಿಸರ್ವ್ ಬ್ಯಾಂಕ್‌ನ ಅನುಮತಿ ಸಿಗದೇ ಹೋದಾಗ ಉಡುಪರು ಟಿ.ಎ. ಪೈಯವರ ಮೂಲಕ ಅದನ್ನು ಅನುಷ್ಠಾನಕ್ಕೆ ತಂದರು. ಉಡುಪರ ಪರಿಕಲ್ಪನೆಯ ಆಧಾರದ ಮೇಲೇ 1980ರಲ್ಲಿ ರಾಷ್ಟ್ರಮಟ್ಟದ ಬಯೋಗ್ಯಾಸ್ ಪ್ರಾಜೆಕ್ಟ್ ಅಸ್ತಿತ್ವಕ್ಕೆ ಬಂತು.
1992-94ರ ಅವಧಿಯಲ್ಲಿ ಮಲಪ್ರಭಾ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾಗ ಉಡು ಪರು ಅಥಣಿ ತಾಲೂಕಿನ ಪುಟ್ಟ ಹಳ್ಳಿ ಮೋಳೆಯ ಒಣಭೂಮಿಗೆ 9-10 ಕಿ.ಮೀ. ದೂರದ ಕೃಷ್ಣಾ ನದಿಯಿಂದ ನೀರು ತಂದು, ಒಂದೂ ಬೆಳೆ ಬೆಳೆಯಲಾಗದ ಭೂಮಿಯಲ್ಲಿ 2-3 ಬೆಳೆ ಬೆಳೆಯಲು ಸಾಧ್ಯವಾಗುವ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದರು.
ತಮ್ಮ ಅಧಿಕಾರಾವಧಿಯಲ್ಲಿ ಮಲಪ್ರಭಾ ಗ್ರಾಮೀಣ ಬ್ಯಾಂಕ್ ಸೋಲಾರ್ ಘಟಕಗಳಿಗೆ ಸಾಲಕೊಟ್ಟ ಪ್ರಪಂಚದ ಮೊದಲ ಬ್ಯಾಂಕ್ ಎಂದೂ ಖ್ಯಾತವಾಯಿತು. ಉಡುಪರ ದೂರದೃಷ್ಟಿಗೆ ಇನ್ನೊಂದು ಉದಾಹರಣೆ 2007 -08ರಲ್ಲಿ ಆಶಾ ಕಾರ್ಯಕರ್ತೆಯರಿಗೆ ಭಾರತೀಯ ವಿಕಾಸ್ ಟ್ರಸ್ಟ್‌ನ ಮೂಲಕ ಏರ್ಪಡಿಸಿದ ಸರಣಿ ತರಬೇತಿ ಕಾರ್ಯಕ್ರಮಗಳು. ಮುಂದೊಂದು ದಿನ ಆಶಾ ಕಾರ್ಯಕರ್ತೆಯರು ಸಮಾಜದ ಮುಂಚೂಣಿಯಲ್ಲಿ ನಿಂತು ಮಾಡಬಹುದಾದ ಕೆಲಸಗಳ ಬಗ್ಗೆ ಉಡುಪರು ಚರ್ಚಿಸುತ್ತಿದ್ದರು. ಹನ್ನೆರಡು ವರ್ಷಗಳ ಅನಂತರ ಕೋವಿಡ್-19ರ ಸಂದರ್ಭದಲ್ಲಿ ಉಡುಪರ “ಶಕುನ’ದಂತಹ ಮಾತುಗಳು ಸತ್ಯವಾಗಿಬಿಟ್ಟವು.
ಮೂರು ವರ್ಷಗಳ ಹಿಂದೆ ಅಂದರೆ 2019ರ ಜುಲೈ 27ರಂದು ಉಡುಪರು ಕೀರ್ತಿಶೇಷರಾದರು.”ಸಾರ್ವಜನಿಕರ ನೆನಪು ಅಲ್ಪಕಾಲೀನ’ ಎಂಬ ಮಾತಿದೆ. ಸಾಮಾಜಿಕ ಮಹತ್ವದ ಉಡುಪರ ಕಾರ್ಯ ಹಾಗೆ ಜನರ ಮರೆವಿಗೆ ಜಾರಬಾರದು. ಹಾಗೆಂದೇ ಉಡುಪರ ಜೀವನಾದರ್ಶಗಳನ್ನು ಚಿರಸ್ಥಾಯಿಯಾಗಿ ಉಳಿಸಲು ಉಡುಪರ ಮಕ್ಕಳು ಕೆ.ಎಂ. ಉಡುಪರ ಸಂಸ್ಮರಣಾರ್ಥವಾಗಿ ಟ್ರಸ್ಟ್ ಒಂದನ್ನು ರಚಿಸಿದ್ದು, ಪ್ರತೀ ವರ್ಷ ಆದರ್ಶಪ್ರಾಯವಾದ ಕೆಲಸ ಮಾಡುತ್ತಿರುವ ಒಂದು ಗ್ರಾಮ ಪಂಚಾಯತ್ ಅನ್ನು ಗುರುತಿಸಿ ಒಂದು ಲಕ್ಷ ರೂಪಾಯಿಯ ಗೌರವ ಪುರಸ್ಕಾರ ಮತ್ತು ಪ್ರಶಸ್ತಿಯನ್ನು ನೀಡುವ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಪ್ರಸಕ್ತ ವರ್ಷ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾ. ಪಂ. ಈ ಪುರಸ್ಕಾರಕ್ಕೆ ಆಯ್ಕೆ ಯಾಗಿದ್ದು, ಎಪ್ರಿಲ್ 24 ರಂದು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರಗಲಿರುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ.
-ಬೆಳಗೋಡು ರಮೇಶ ಭಟ್