ನಟ ತಬಲನಾಣಿ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಬಳಿಕ ಮತ್ತೆ ಅದೇ ನಿರ್ದೇಶಕ ಕುಮಾರ್ ಜೊತೆ ಹೊಸದೊಂದು ಚಿತ್ರ ಮಾಡುತ್ತಾರೆ ಎಂಬ ಬಗ್ಗೆ ಸುದ್ದಿಯಾಗಿತ್ತು. ಈಗ ಆ ಚಿತ್ರ ಪೂರ್ಣಗೊಂಡಿದ್ದು, ಬಿಡುಗಡೆಗೆ ತಯಾರು ಮಾಡಿಕೊಳ್ಳುತ್ತಿದೆ. ಹೌದು, ನಿರ್ದೇಶಕ ಕುಮಾರ್, “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಬಳಿಕ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು “ಕ್ರಿಟಿಕಲ್ ಕೀರ್ತನೆಗಳು’ ಚಿತ್ರ ಮಾಡಿದ್ದಾರೆ. ಈ ಬಾರಿಯೂ ವಿಶೇಷ ಕಥಾವಸ್ತು ಹಿಡಿದು ಬಂದಿದ್ದಾರೆ.
“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿದ್ದ ತಬಲನಾಣಿ, ಸುಚೇಂದ್ರ ಪ್ರಸಾದ್, ಅಪೂರ್ವ ಅವರ ಕಾಂಬಿನೇಷನ್ ಇಲ್ಲೂ ಮುಂದುವರೆದಿದೆ. ಅಂದಹಾಗೆ, ಇದೊಂದು ಕಾಮಿಡಿ ಡ್ರಾಮ. ಐಪಿಎಲ್ ಕುರಿತ ಕಥೆ ಇಲ್ಲಿದೆ. ಪ್ರತಿ ಐಪಿಎಲ್ ಶುರುವಾದಾಗ ಸುಮಾರು 120 ಕ್ಕೂ ಹೆಚ್ಚು ಮಂದಿ ಸಾಯುತ್ತಾರೆ. ಆದರೆ, ಆ ಬಗ್ಗೆ ಯಾರಿಗೂ ಗೊತ್ತಿಲ್ಲ. ಬೆಟ್ಟಿಂಗ್ ದಂಧೆ, ಗೊಂದಲ, ಭಯ ಇತ್ಯಾದಿ ವಿಷಯಗಳು ಇಲ್ಲಿವೆ. ಅದನ್ನು ಕಾಮಿಕ್ ಆಗಿಯೇ ಪ್ರಸೆಂಟ್ ಮಾಡಲಾಗಿದೆ.
“ಕರಿಯಪ್ಪ’ ಸಿನಿಮಾ ದಲ್ಲಿದ್ದಂತೆಯೇ ಇಲ್ಲೂ ನಾಲ್ಕು ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಕೋರ್ಟ್ ಕೇಸ್ ಅಂಶಗಳು ಇಲ್ಲೂ ಹೈಲೈಟ್ ಆಗಿವೆ ಎಂಬುದು ನಿರ್ದೇಶಕ ಕುಮಾರ್ ಮಾತು. ಚಿತ್ರದಲ್ಲಿ ರಾಜೇಶ್ ನಟರಂಗ, ತರಂಗ ವಿಶ್ವ, ಧರ್ಮ, ಯಶಸ್ ಅಭಿ, ಯಶವಂತ್ ಶೆಟ್ಟಿ, ಅರುಣ್ ಬಾಲರಾಜ್, ಮಹೇಂದ್ರ, ಪುಟ್ಟರಾಜು ಇತರರು ನಟಿಸಿದ್ದಾರೆ. ಬೆಂಗಳೂರು, ಮಂಡ್ಯ, ಬೆಳಗಾವಿ, ಕುಂದಾಪುರ ಸಮೀಪ ಚಿತ್ರೀಕರಣ ಮಾಡಲಾಗಿದೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದಾರೆ. ಶಿವಸೀನ ಮತ್ತು ಶಿವ ಶಂಕರ್ ಛಾಯಾಗ್ರಹಣವಿದೆ. ಕುಮಾರ್ ಹಾಗು ಗೆಳೆಯರು ಚಿತ್ರವನ್ನು ನಿರ್ಮಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಐಪಿಎಲ್ ಕೂಡ ಆ ಸಂದರ್ಭದಲ್ಲೇ ಶುರು ವಾಗು ವುದರಿಂದ ಅದೇ ವೇಳೆ ಬಿಡುಗಡೆ ಮಾಡ ಬೇಕು ಎಂಬ ಯೋಚನೆ ಚಿತ್ರತಂಡದ್ದು.