ಕಂಪ್ಲಿ: ಸಮೀಪದ ಬುಕ್ಕಸಾಗರ ಗ್ರಾಮದಲ್ಲಿ ಕರಿಸಿದ್ದೇಶ್ವರ ಸಂಸ್ಥಾನ ಮಠದ ಲಿಂ| ಕರಿಸಿದ್ದೇಶ್ವರ ಶಿವಯೋಗಿಗಳ ಮಹಾರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ಲಿಂ| ಕರಿಸಿದ್ದೇಶ್ವರ ಶಿವಯೋಗಿಗಳ ಕರ್ತೃ ಗದ್ದುಗೆ ಮಹಾರುದ್ರಾಭಿಷೇಕ, ರುದ್ರಹೋಮ, ರಾಜೋಪಚಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಹೆಬ್ಟಾಳದ ಶಿಪ್ರಕಾಶ ಶರಣರು, ಶಾನವಾಸಪುರದ ಮಲ್ಲಿಕಾರ್ಜುನ ಶ್ರೀಗಳು, ಕಾರಟಗಿಯ ವೀರಭದ್ರ ಶರಣರು ಮತ್ತು ಶ್ರೀಮಠದ ಪೀಠಾಧಿಪತಿ ವಿಶ್ವಾರಾಧ್ಯ ಕರಿಸಿದ್ದೇಶ್ವರ ಶ್ರೀಗಳು ಜಂಟಿಯಾಗಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥವು ತೇರಿನ ಮನೆಯಿಂದ ಆರಂಭಗೊಂಡು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಗ್ರಾಪಂ ಎದುರು ಬಸವಣ್ಣನ ಪಾದಗಟ್ಟೆವರೆಗೆ ಸಾಗಿತು. ನಂತರ ಪುನಃ ತೇರಿನ ಮನೆಯ ಬಳಿ ಸಮಾವೇಶಗೊಂಡಿತು.
ರಥದ ಕಳಸಕ್ಕೆ ಸದ್ಭಕ್ತರು ಉತ್ತತ್ತಿ, ಹೂ, ಪತ್ರಿ ಎಸೆದು ತಮ್ಮ ಸದ್ಭಕ್ತಿ ಅರ್ಪಿಸಿದರು. ರಥೋತ್ಸವದಲ್ಲಿ ಮಂಗಳ ವಾದ್ಯಗಳು, ನಂದಿಕೋಲು ಕುಣಿತ, ಡೊಳ್ಳು ಕುಣಿತ ಸೇರಿ ಜನಪದ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಕಂಪ್ಲಿ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಸದ್ಭಕ್ತರು ಅಜ್ಜನ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ನಂತರ ಧರ್ಮ ಜಾಗೃತಿ ಕಾರ್ಯಕ್ರಮ, ದಾನಿಗಳಿಗೆ ಸನ್ಮಾನ, ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿದವು.
ಸಂಚಾರ ವ್ಯತ್ಯಯ: ಲಿಂ| ಕರಿಸಿದ್ದೇಶ್ವರರ ಮಹಾರಥೋತ್ಸವ ಕಂಪ್ಲಿ-ಹೊಸಪೇಟೆ ಮುಖ್ಯರಸ್ತೆಯಲ್ಲಿಯೇ ಸಾಗುವುದರಿಂದ ಕಂಪ್ಲಿಯಿಂದ ಹೊಸಪೇಟೆ, ಹೊಸಪೇಟೆಯಿಂದ ಕಂಪ್ಲಿಗೆ ತೆರಳುವ ಸಾರಿಗೆ ಬಸ್ ಸೇರಿದಂತೆ ಖಾಸಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಪಡುವಂತಾಗಿತ್ತು. ಸುಮಾರು 3-4 ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಸಂಜೆ 7ಗಂಟೆಯ ನಂತರ ವಾಹನ ಸಂಚಾರ ಸುಗಮವಾಯಿತು.