Advertisement

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

12:51 PM Jan 07, 2025 | Team Udayavani |

ಪುಂಜಾಲಕಟ್ಟೆ: ಕಾವಳ ಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಾಗುವ ಗುಡ್ಡದ ದಾರಿಯಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಅಳವಡಿಸಿರುವ ವಿದ್ಯುತ್‌ ಕಂಬಗಳು ಶಿಥಿಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಇವುಗಳನ್ನು ತೆರವುಗೊಳಿಸಿ ನೂತನ ಕಂಬಗಳನ್ನು ಅಳವಡಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.

Advertisement

ಕಾರಿಂಜ ಕ್ಷೇತ್ರ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿದ್ದು, ಬೃಹತ್‌ ಬಂಡೆಯ ಮೇಲಿರುವ ದೇವಸ್ಥಾನದಲ್ಲಿ ಶಿವ, ಪಾರ್ವತಿಯರ ಆರಾಧನ ಕ್ಷೇತ್ರವಾಗಿದೆ. ಇಲ್ಲಿಗೆ ಭಕ್ತರಲ್ಲದೆ ಪ್ರವಾಸಿಗರು ಪ್ರಕೃತಿ ವೀಕ್ಷಿಸಲು ಬರುತ್ತಾರೆ.

ಸುಮಾರು 60 ವರ್ಷಗಳ ಹಿಂದೆ ವಿದ್ಯುತ್‌ ಸಂಪರ್ಕದ ದಾರಿದೀಪದ ವ್ಯವಸ್ಥೆಯಾಗಿದ್ದು,ಈಗಲೂ ಹಳೆಯದಾದ ಏಣಿ ಸಹಿತ ಕಬ್ಬಿಣದ ವಿದ್ಯುತ್‌ ಕಂಬಗಳೇ ಇವೆ. ಬಂಡೆಕಲ್ಲುಗಳ ಮೇಲೆ ಹತ್ತುವಾಗಲು ಇಂತಹ ವಿದ್ಯುತ್‌ ಕಂಬಗಳು ಇದ್ದು, ನಿರ್ವಹಣೆ ಇಲ್ಲದೆ ಸೊರಗಿವೆ. ವಿದ್ಯುತ್‌ ಕಂಬದಲ್ಲಿ ಪುಟ್ಟ ದೀಪಗಳು ನೇತಾಡುತ್ತದೆ. ಇದರಿಂದ ಕಂಬದ ಬುಡಕ್ಕೆ ಬೆಳಕು ಬರುವುದಿಲ್ಲ. ನಗರದಲ್ಲಿ ಸಾಲು ಸಾಲಾಗಿ ಬೀದಿ ದೀಪಗಳು ಪ್ರಜ್ವಲಿಸುತ್ತಿದ್ದರೂ ಕ್ಷೇತ್ರದ ಗುಡ್ಡಪ್ರದೇಶದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಾಗಿದೆ.

ಕಬ್ಬಿಣದ ವಿದ್ಯುತ್‌ ಕಂಬಗಳು ತುಕ್ಕು ಹಿಡಿದಿದೆ. ವಾಲಿದ ವಿದ್ಯುತ್‌ ಕಂಬಕ್ಕೆ ಇನ್ನೊಂದು ಕಬ್ಬಣದ ಕಂಬವನ್ನು ಆಸರೆಯಾಗಿ ಜೋಡಿಸಲಾಗಿದೆ. ಅದೂ ಬೀಳುವ ಸ್ಥಿತಿಯಲ್ಲಿದೆ. ಇನ್ನು ಕೆಲವೊಂದು ಕಂಬಗಳು ಬೀಳದಂತೆ ಪಟ್ಟಿಗಳನ್ನು ಜೋಡಿಸಲಾಗಿದೆ.

ಪಾರ್ವತಿ ಕ್ಷೇತ್ರದಿಂದ ಈಶ್ವರ ದೇವರ ಸನ್ನಿಧಾನಕ್ಕೆ ತೆರಳುವ ಕೊನೆ ಭಾಗ‌ದಲ್ಲಿ ಸೋಲಾರ್‌ ಚಾರ್ಜರ್‌ ಲೈಟ್‌ ಅಳವಡಿಸಲಾಗಿದೆ. ಆದರೆ ಕ್ಷೇತ್ರದಲ್ಲಿ ಮಂಗಗಳ ಆಟದಿಂದ ಸೋಲಾರ್‌ ರಿಚಾರ್ಜ್‌ ಮಾಡುವ ಪ್ಯಾನಲ್‌ಬೋರ್ಡಿಗೆ ಹಾನಿಯಾಗಿದೆ.

Advertisement

ಜೋತಾಡುವ ತಂತಿ
ವಿದ್ಯುತ್‌ ಕಂಬಗಳಂತೆ ವಿದ್ಯುತ್‌ ತಂತಿಗಳೂ ಹಳೆಯದಾಗಿದೆ. ಅದರ ನಿರ್ವಹಣೆ ಮಾಡದಿರುವ ಕಾರಣ ತಂತಿಗಳು ಜೋತಾಡುತ್ತಿವೆ. ಮೂಲ ಸೌಕರ್ಯಗಳಲ್ಲೊಂದಾದ ವಿದ್ಯುತ್‌ ಸಂಪರ್ಕದ ವ್ಯವಸ್ಥೆ ಮಾಡಿದರೆ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆ ಗಮನ ಹರಿಸಬೇಕೆಂಬುದು ಭಕ್ತರ ಆಗ್ರಹವಾಗಿದೆ.

ಕಾರಿಂಜ ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿ ವಿದ್ಯುತ್‌ ಕಂಬಗಳು ಅಪಾಯದ ಸ್ಥಿತಿಯಲ್ಲಿದೆ. ಈ ಬಗ್ಗೆ ಕ್ಷೇತ್ರದಿಂದ ಮೆಸ್ಕಾಂಗೆ ಪತ್ರ ಬರೆದಿದ್ದು, ದುರಸ್ತಿಯಾಗಿಲ್ಲ. ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಮುಂದಿನ ಶಿವರಾತ್ರಿ ಜಾತ್ರೆ ವೇಳೆಗೆ ದುರಸ್ತಿಗೊಳಿಸಲು ಪ್ರಯತ್ನಿಸಲಾಗುವುದು.
– ಸಚಿನ್‌ ಕುಮಾರ್‌, ಆಡಳಿತಾಧಿಕಾರಿ, ಶ್ರೀ ಕಾರಿಂಜೇಶ್ವರ ಕ್ಷೇತ್ರ, ಕಾರಿಂಜ

ವಿದ್ಯುತ್‌ ಕಂಬಗಳ ಅಪಾಯದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ಮನವಿ ನೀಡಿದರೂ ಭರವಸೆ ಮಾತ್ರ ನೀಡಿರುತ್ತಾರೆ.ಜಾತ್ರಾ ಸಮಯದಲ್ಲಿ ಲಕ್ಷಗಟ್ಟಲೆ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.ಆದಷ್ಟು ಬೇಗ ಹಳೆಯ ಕಬ್ಬಿಣದ ವಿದ್ಯುತ್‌ ಕಂಬಗಳನ್ನು ಬದಲಾಯಿಸಿ,ಹೊಸ ವಿದ್ಯುತ್‌ ಕಂಬಗಳನ್ನು ಅಳವಡಿಸಿ, ನಗರದಲ್ಲಿರುವಂತೆ ಹೆಚ್ಚು ಬೆಳಕಿರುವ ವಿದ್ಯುತ್‌ ದೀಪಗಳ ಅಳವಡಿಕೆಯಾಗಬೇಕು.
– ಚಂದ್ರಶೇಖರ ಶೆಟ್ಟಿ ಪುಳಿಮಜಲು, ಮಾಜಿ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next