ಗದಗ: ಇಲ್ಲಿನ ಕರಿಯಮ್ಮಕಲ್ಲ ಬಡಾವಣೆಯ ಕರಿಯಮ್ಮದೇವಿಯ 90ನೇ ಜಾತ್ರಾ ಮಹೋತ್ಸವ ಏ.5 ರಿಂದ 7ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಕರಿಯಮ್ಮ ಕಲ್ಲ ಬಡಾವಣೆಯ ಸುಧಾರಣಾ ಸಮಿತಿ ಗೌರವಾಧ್ಯಕ್ಷ ಎಲ್.ಡಿ. ಚಂದಾವರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.5ರಂದು ಕರಿಯಮ್ಮದೇವಿ ಬೆಳ್ಳಿ ಉತ್ಸವ ಮೂರ್ತಿ ದರ್ಶನ ನಡೆಯಲಿದೆ. ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ರಂಗೋಲಿ, 11ಕ್ಕೆ ಚಿತ್ರಕಲೆ ಹಾಗೂ 11.30ಕ್ಕೆ ವಚನ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.
ಏ.5 ರಂದು ಸಂಜೆ 6ಕ್ಕೆ ಜಾತ್ರಾ ಮಹೋತ್ಸವ ಪ್ರಾರಂಭೋತ್ಸವ ಜರುಗಲಿದ್ದು, ಹರ್ಲಾಪೂರ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಡಾ. ಸುಭಾಶಚಂದ್ರ ಅಂಗಡಿ, ಸಹಕಾರಿ ಧುರೀಣ ಎಚ್.ಜಿ. ಹಿರೇಗೌಡ್ರ ಪಾಲ್ಗೊಳ್ಳುವರು ಎಂದು ಹೇಳಿದರು.
ಏ.6ರಂದು ಸಂಜೆ 5.30ಕ್ಕೆ ಸಕಲ ಮಂಗಳ ವಾದ್ಯಗಳೊಂದಿಗೆ ಮಹಾರಥೋತ್ಸವ ಜರುಗಲಿದೆ. ಸಂಜೆ 7ಕ್ಕೆ ನರಗುಂದ ತಾಲೂಕು ಕೊಣ್ಣೂರಿನ ಚಕ್ರ ಮಹಿಳಾ ಕಲಾ ತಂಡ ಹಾಗೂ ಕುರ್ತಕೋಟಿಯ ವಿರೂಪಾಕ್ಷ ಗೂರನವರ ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಜಾತ್ರಾ ಸಮಿತಿ ಅಧ್ಯಕ್ಷ ಐ.ಬಿ. ಮೈದರಗಿ ಅಧ್ಯಕ್ಷತೆ ವಹಿಸುವರು. ವರ್ತಕ ಸಿ.ಸಿ. ಬಡ್ನಿ, ಎಂ.ಸಿ. ಐಲಿ, ಕೆ.ಕೆ. ಪಟೇಲ ಪಾಲ್ಗೊಳ್ಳುವರು ಎಂದು ಹೇಳಿದರು.
ಏ. 7ರಂದು ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಕಡುಬಿನ ಕಾಳಗ, ಸಂಜೆ 7ಕ್ಕೆ ಜಂತ್ಲಿ- ಶಿರೂರಿನ ಜಾನಪದ ಕಲಾವಿದ ಗವಿಸಿದ್ಧಯ್ನಾ ಹಳ್ಳಿಕೇರಿಮಠ, ಬೆಳಹೊಡ ಗ್ರಾಮದ ಸಾವಿತ್ರಿಬಾಯಿ ಪುಲೆ ಜಾನಪದ ಕಲಾಮೇಳ, ಕರಿಯಮ್ಮದೇವಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಕರಿಯಮ್ಮಕಲ್ಲ ಬಡಾವಣೆ ಹಾಗೂ ವಿವೇಕಾನಂದ ಬಡಾವಣೆ ಸಹೋದರಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸಮಿತಿ ಕಾಯಾಧ್ಯಕ್ಷ ಸಿ.ಕೆ. ಮಾಳಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಿ.ಜಿ. ಬಿರಾದಾರ, ಬಸವರಾಜ ಬಿಂಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಕರಿಯಮ್ಮದೇವಿ ಜಾತ್ರಾ ಸಮಿತಿ ಅಧ್ಯಕ್ಷ ಐ.ಬಿ. ಮೈದರಗಿ, ಸುಧಾರಣಾ ಸಮಿತಿ ಕಾರ್ಯಾಧ್ಯಕ್ಷ ಸಿ.ಕೆ. ಮಾಳಶೆಟ್ಟಿ, ಪದಾಧಿ ಕಾರಿಗಳಾದ ಆರ್.ಬಿ. ಕುಲಕರ್ಣಿ, ಜಿ.ಕೆ. ತಮ್ಮಣ್ಣವರ ಸುದ್ದಿಗೋಷ್ಠಿಯಲ್ಲಿದ್ದರು.