ಕಾರ್ಗಿಲ್ ಕಾರ್ಯಾಚರಣೆ, ದೇಶದ ಪ್ರತಿ ಯೋಧನ ಮನಸ್ಸಿನಲ್ಲಿ ಅಚ್ಚಳಿಯದೆ ನೆನಪಲ್ಲಿ ಉಳಿಯುವ ಕಾರ್ಯಾಚರಣೆ. 1999ರ ಮೇ 3ರಿಂದ ಜು.26ರ ವರೆಗೆ ನಡೆದ ಕಾರ್ಯಾಚರಣೆಯೇ ಅತ್ಯಂತ ರೋಚಕವಾದದ್ದು. ನನ್ನ 4 ದಶಕಗಳ ಸೇನಾ ಜೀವನದಲ್ಲಿ ಅದೊಂದು ಹೆಮ್ಮೆಯ ಮತ್ತು ಸ್ಮರಣೀಯ ಕಾರ್ಯಾಚರಣೆ ಎಂದು ಭಾವಿಸುವೆ.
ಸೇನಾ ಜೀವನದ 28 ತಿಂಗಳ ಕಾಲ ಅಲ್ಲಿ ನಾನು ಕಾರ್ಯ ನಿರ್ವಹಿಸಿದ್ದೆ. ಈ ಸಂದರ್ಭದಲ್ಲಿ ಕಾರ್ಗಿಲ್ ಕಾರ್ಯಾಚರಣೆಯೂ ಒಂದು. ಅಲ್ಲಿ ಮೈಕೊರೆಯುವಂಥ ಚಳಿ. ತಾಪಮಾನ ಎಷ್ಟು ಕನಿಷ್ಠಕ್ಕೆ ಎಂದರೆ-50 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಯಬಹುದು. ದ್ರಾಸ್, ಟೈಗರ್‌ಹಿಲ್ಸ್, ತೊಲೊಲಿಂಗ್ ಪರ್ವತ ಶ್ರೇಣಿಗಳಲ್ಲಿ ನನಗೆ ಕಾರ್ಯ ನಿರ್ವಹಿಸಬೇಕಾಗಿ ಬಂದಿತ್ತು.
ನಾನು ಮುಂಚೂಣಿ ನೆಲೆಯಲ್ಲಿ ನಿಂತು ಯುದ್ಧ ಮಾಡದೇ ಇದ್ದರೂ, ಪಾಕಿಸ್ಥಾನ ಸೇನೆಯ ಗುಂಡಿನಿಂದ ಗಾಯಗೊಂಡ ನಮ್ಮ ಯೋಧರಿಗೆ ಚಿಕಿತ್ಸೆ ನೀಡುವ ಪವಿತ್ರ ಕೆಲಸದಲ್ಲಿ ನಮ್ಮ ಸಿಬಂದಿಯ ಜತೆಗೆ ನಿರತನಾಗಿದ್ದೆ. ಅದು ನನಗೊಂದು ಹೆಮ್ಮೆಯ ವಿಚಾರವೇ ಸರಿ. ನಾನು ದ್ರಾಸ್ ಪರ್ವತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮೈಕೊರೆಯುವ ಚಳಿಯಲ್ಲಿ ಕೆಲಸ ಮಾಡುವ ಯೋಧರು ಮತ್ತು ಹಿರಿಯ ಅಧಿಕಾರಿಗಳಿಗೆ ಚಿಕಿತ್ಸೆ ನೀಡುವ ತಂಡ ವೈದ್ಯನಾಗಿದ್ದೆ.
ನಾನು ಕೆಲಸ ಮಾಡುತ್ತಿದ್ದ ಯೋಧರ ತಂಡ ಗಡಿ ನಿಯಂತ್ರಣ ರೇಖೆ ಮತ್ತು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಸಮೀಪ ಇರುವ ಸ್ಥಳದಲ್ಲಿ ಕಾವಲು ಕಾಯುವ ಕೆಲಸ ಮಾಡುತ್ತಿತ್ತು. ಆ 2 ತಿಂಗಳ ಅವಧಿಯಲ್ಲಿ ನಮ್ಮ ವೀರ ಯೋಧರಿಗೆ ಶತ್ರುಗಳನ್ನು ಮಟ್ಟ ಹಾಕಲು ಎಷ್ಟು ಕಷ್ಟ ಮತ್ತು ಸವಾಲಿನ ಕೆಲಸವಾಗಿತ್ತೋ, ಅಷ್ಟೇ ಸವಾಲಿನ ಕೆಲಸ ಸೇನೆಯ ವೈದ್ಯಾಧಿಕಾರಿಯಾಗಿ ನನಗೂ ನನ್ನ ತಂಡಕ್ಕೂ ಇತ್ತು. ಗುಂಡಿನ ಚಕಮಕಿಯ ನಡುವೆಯೇ ಗಾಯಗೊಂಡವರನ್ನು ಸಮರಾಂಗಣದಿಂದ ಸುರಕ್ಷಿತವಾಗಿ ಕರೆತಂದು ಅವರಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ನನ್ನ ಹಾಗೂ ತಂಡಕ್ಕೆ ಇತ್ತು.
ಕಾರ್ಗಿಲ್‌ನಿಂದ ಲೇಹ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಆಕ್ರಮಿಸಿಕೊಂಡು ಸಂಪರ್ಕ ಕಡಿದುಹಾಕಿ ಕುತ್ಸಿತ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಅವರು ಹೊಂದಿದ್ದರು. ಆದರೆ ಆ ಸಂಚನ್ನು ಮುಂಚೂಣಿ ನೆಲೆಯಲ್ಲಿ ನಿಂತು ಹೋರಾಟ ಮಾಡಿದ್ದ ನಮ್ಮ ಯೋಧರು ವಿಫಲಗೊಳಿಸಿದ್ದರು. ಪಾಕ್ ಸೈನಿಕರು ಮತ್ತು ನಮ್ಮ ಯೋಧರ ನಡುವಿನ ಭೀಕರ ಗುಂಡಿನ ಕಾಳಗ ನಡೆಯುತ್ತಿತ್ತು. ಆಗ ನಮ್ಮ ಯೋಧರು ನೀಡುವ ರಕ್ಷಣೆಯೊಂದಿಗೆ ಗಾಯಗೊಂಡಿರುವ ನಮ್ಮ ಯೋಧರಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗಿತ್ತು.
ಅವರಿಗೆ ಮತ್ತಷ್ಟು ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದರೆ ಉಧಂಪುರ, ಶ್ರೀನಗರ, ಚಂಡೀಗಢ, ಹೊಸದಿಲ್ಲಿಯ ಆಸ್ಪತ್ರೆಗಳಿಗೆ ಯೋಧರನ್ನು ಕಳುಹಿಸುವ ವ್ಯವಸ್ಥೆಯನ್ನು ನಾವು ಮಾಡಬೇಕಾಗುತ್ತಿತ್ತು. ಮುಂಚೂಣಿ ನೆಲೆಯಲ್ಲಿ ಯೋಧರು ಹೋರಾಡಿ, ಕಾರ್ಗಿಲ್, ತೊಲೊಲಿಂಗ್, ಟೈಗರ್ ಹಿಲ್ಸ್, ದ್ರಾಸ್‌ಗಳಲ್ಲಿ ಗಾಯಗೊಂಡಿದ್ದ ಯೋಧರಿಗೆ ನಾವು ಚಿಕಿತ್ಸೆ ನೀಡಿ ಬದುಕಿಸಿದ್ದೇವೆ. ಕೋವಿ ಹಿಡಿದು ಯುದ್ಧರಂಗದಲ್ಲಿ ಯೋಧರು ಹೇಗೆ ಹೋರಾಡುತ್ತಾರೋ, ಸೇನೆಯಲ್ಲಿನ ವೈದ್ಯ ಕೂಡ ಅವರಿಗೆ ಬೆಂಬಲವಾಗಿ ಪರೋಕ್ಷವಾಗಿ ದೇಶವನ್ನು ಕಾಯುತ್ತಾನೆ.
ಕಾರ್ಗಿಲ್ ಯುದ್ಧ ಮುಕ್ತಾಯಗೊಂಡು 25 ವರ್ಷಗಳು ಪೂರ್ತಿಗೊಂಡಿವೆ. ಆ ಜಯ ಯಾವತ್ತಿದ್ದರೂ, ನಮ್ಮ ದೇಶದ ಯೋಧರಿಗೂ, ನನಗೂ ಹೆಮ್ಮೆಯ ನೆನಪು. ಆದರೆ, ನಾವೆಲ್ಲರೂ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ವಿಚಾರವೇನೆಂದರೆ, ಯೋಧರು ಕಾವಲು ಕಾಯುವ ಗಡಿ ಪ್ರದೇಶ ಯಾವತ್ತೂ ಅವರು ಜಾಗರೂಕರಾಗಿಯೇ ಇರಬೇಕಾಗುತ್ತದೆ ಎಂದು ತಿಳಿದುಕೊಳ್ಳಬೇಕು.
■ ಲೆ| ಜ| (ನಿ)ಬಿ.ಎನ್.ಬಿ.ಎಂ ಪ್ರಸಾದ್