ನವದೆಹಲಿ/ದ್ರಾಸ್: ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ಸೈನಿಕರ ವಿರುದ್ಧದ ಯುದ್ಧದಲ್ಲಿ ಭಾರತ ಜಯ ಸಾಧಿಸಿ 23 ವರ್ಷಗಳು ಕಳೆದ ಹಿನ್ನೆಲೆ ದೇಶಾದ್ಯಂತ ಮಂಗಳವಾರ ಕಾರ್ಗಿಲ್ ವಿಜಯ ದಿವಸ ಆಚರಿಸಲಾಗಿದೆ. ಉಧಂಪುರ, ಜಮ್ಮುವಿನ ಟೈಗರ್ ವಿಭಾಗ, ರಜೌರಿ, ದೋಡಾಗಳಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಸೇನೆಯ ಹಿರಿಯ ಅಧಿಕಾರಿಗಳೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹುತಾತ್ಮರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.
ಜಮ್ಮುವಿನಲ್ಲಿ ಸಾರ್ವಜನಿಕರು 10 ಕಿ.ಮೀ.ಗಳ ಮ್ಯಾರಾಥಾನ್ ಮಾಡಿ ಯೋಧರಿಗೆ ನಮನ ಸಲ್ಲಿಸಿದ್ದಾರೆ. ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುಷ್ಪಗುತ್ಛ ಇರಿಸಿ ಗೌರವ ಸಲ್ಲಿಸಿದ್ದಾರೆ.
“ಯೋಧರು ತಮ್ಮ ತಾಯ್ನಾಡಿಗಾಗಿ ಅತ್ಯಂತ ಕಷ್ಟದ ಸನ್ನಿವೇಶದಲ್ಲಿ ಹೋರಾಡಿ, ದೇಶವನ್ನುಳಿಸಿದ್ದಾರೆ. ಅವರ ಶೌರ್ಯಕ್ಕೆ ದೇಶವು ತಲೆ ಬಾಗುತ್ತದೆ’ ಎಂದು ರಕ್ಷಣಾ ಸಚಿವರು ಬರೆದುಕೊಂಡಿದ್ದಾರೆ.
ಕಾರ್ಗಿಲ್ ವಿಜಯ ದಿನವು ನಮ್ಮ ವೀರ ಯೋಧರ ಸಾಮರ್ಥ್ಯದ ಸಂಕೇತ. ದೇಶಕ್ಕಾಗಿ ಪ್ರಾಣ ಕೊಟ್ಟ ಎಲ್ಲ ಯೋಧರಿಗೆ ನಾನು ತಲೆಬಾಗುತ್ತೇನೆ.
-ದ್ರೌಪದಿ ಮುರ್ಮು, ರಾಷ್ಟ್ರಪತಿ
ಕಾರ್ಗಿಲ್ ವಿಜಯ ದಿವಸದಂದು ನಮ್ಮ ದೇಶದ ರಕ್ಷಣೆಗಾಗಿ ಅಚಲ ಧೈರ್ಯ ತೋರಿದ ಯೋಧರಿಗೆ ನನ್ನ ಗೌರವಾರ್ಪಣೆ. ಅವರ ತ್ಯಾಗಕ್ಕೆ ದೇಶವು ಎಂದೆಂದಿಗೂ ಋಣಿ.
– ವೆಂಕಯ್ಯ ನಾಯ್ಡು, ಉಪ ರಾಷ್ಟ್ರಪತಿ
ಕಾರ್ಗಿಲ್ ವಿಜಯ ದಿನವು ಭಾರತದ ಹೆಮ್ಮೆಯ ಮತ್ತು ಭಾರತ ಮಾತೆಯ ವೈಭವದ ಸಂಕೇತ. ದೇಶದ ರಕ್ಷಣೆಯಲ್ಲಿ ಪರಾಕ್ರಮದ ಉತ್ತುಂಗ ತಲುಪಿದ ಎಲ್ಲ ಯೋಧರಿಗೆ ನಮನವನ್ನು ಸಲ್ಲಿಸುತ್ತೇನೆ.
– ನರೇಂದ್ರ ಮೋದಿ, ಪ್ರಧಾನ ಮಂತ್ರಿ