ಹೊಸದಿಲ್ಲಿ : ಛೋಟೆ ನವಾಬ್ ಬೇಗಂ ಎಂದೇ ಖ್ಯಾತಳಾಗಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತನ್ನ ನವಜಾತ ಪುತ್ರನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಿರುವುದು ವ್ಯಾಪಕ ಗೊಂದಲ, ಟೀಕೆ, ಚರ್ಚೆ, ವಾದ, ವಿವಾದಕ್ಕೆ ಗುರಿಯಾಗಿತ್ತು. ಅದಕ್ಕೆಲ್ಲ ಆಕೆಯೀಗ ಸರಿಯಾದ ಉತ್ತರ ನೀಡುವ ಮೂಲಕ ಸಮಗ್ರ ಗೊಂದಲ – ವಿವಾದಗಳಿಗೆ ತೆರೆ ಎಳೆದಿದ್ದಾಳೆ.
ತನ್ನ ಬಾಣಂತನವನ್ನು ಪೂರೈಸಿ ಕಳೆದ ವಾರವಷ್ಟೇ ಲ್ಯಾಕ್‌ವೆು ಫ್ಯಾಶನ್ ವೀಕ್ ಸಮ್ಮರ್ ರಿಸಾರ್ಟ್ 2017 ಕಾರ್ಯಕ್ರಮದಲ್ಲಿ ವಸ್ತ್ರ ವಿನ್ಯಾಸಕಿ ಅನಿತಾ ಡೋಂಗ್ರೆ ಗಾಗಿ ramp ಮೇಲೆ ನಡೆದು ತನ್ನ ಹಾಗಿನ ಎಲ್ಲ ವರ್ಗದ ಮಹಿಳೆಯರು ಹುಬ್ಬೇರುವಂತೆ ಮಾಡಿದ್ದ ಕರೀನಾ ಕಪೂರ್, ಅವರಿಗೆಲ್ಲ ಮಾದರಿಯಾಗಿದ್ದಾಳೆ.
ಅಂದ ಹಾಗೆ ಪತಿ ಸೈಫ್ ಅಲಿ ಖಾನ್ ಮತ್ತು ಪತ್ನಿ ಕರೀನಾ ಕಪೂರ್ ಖಾನ್ ಈಚೆಗೆ ತಮ್ಮ ನವಜಾತ ಗಂಡು ಮಗುವಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದರಷ್ಟೇ ? ಮಗುವಿಗೆ ಅವರು ಆ ಹೆಸರನ್ನು ಇಟ್ಟ ಸುದ್ದಿ ತಿಳಯುತ್ತಲೇ ಹಲವರು, “ಇದೇನು ಕರೀನಾ – ಸೈಫ್ ತಮ್ಮ ಮಗನಿಗೆ ಮಂಗೋಲಿಯದ ಆಕ್ರಮಣಕಾರಿ ದೊರೆ ತೈಮೂರನ ಹೆಸರು ಇಟ್ಟಿದ್ದಾರೆ’ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಿದ್ದರು. ಅಂತೆಯೇ ಹೆಸರು ವ್ಯಾಪಕ ಚರ್ಚೆ, ಟೀಕೆ, ಗೊಂದಲಕ್ಕೆ ಕಾರಣವಾಗಿತ್ತು.
ಬಾಣಂತನ ಮುಗಿಸಿ ಬಂದಿರುವ ಕರೀನಾಗೆ ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಕೇಳಿದಾಗ ಆಕೆ ನೀಡಿದ ಉತ್ತರ ಇದು :
“ತೈಮೂರ ಎನ್ನುವ ಅರೇಬಿಕ್ ಪದದ ಅರ್ಥ ಕಬ್ಬಿಣ (iron) ಎಂದು. ನಮ್ಮ ಮಗ ಕಬ್ಬಿಣದಷ್ಟು ಬಲಶಾಲಿಯಾಗುತ್ತಾನೆ ಎಂಬ ಅರ್ಥದಲ್ಲಿ ನಾವು ಆ ಹೆಸರನ್ನು ಆತನಿಗೆ ಇಟ್ಟೆವೇ ಹೊರತು ಆ ಹೆಸರು ಮಂಗೋಲಿಯದ ಆಕ್ರಮಣಕಾರಿ ದೊರೆಯದ್ದೆಂದು ನಾವು ತಿಳಿದಿರಲಿಲ್ಲ. ಒಟ್ಟಿನಲ್ಲಿ ತೈಮೂರ ಪದದ ಅರ್ಥ ನಮ್ಮಿಬ್ಬರನ್ನು ತುಂಬಾ ಅಕರ್ಷಿಸಿತು. ಹಾಗಾಗಿ ನಾವು ಆ ಹೆಸರನ್ನೇ ಮಗುವಿಗೆ ಇಟ್ಟೆವು. ಆ ಹೆಸರು ಜೀವಂತವಿರುವ ಅಥವಾ ಇಲ್ಲದಿರುವ ಯಾವುದೇ ವ್ಯಕ್ತಿಗೂ ಸಂಬಂಧಿಸಿದ್ದಲ್ಲ ಎಂದಷ್ಟೇ ನಾವು ಹೇಳಬಯಸುತ್ತೇವೆ; ಇಷ್ಟಕ್ಕೂ ಜನರು ಹೆಸರಿಗೆ ಸಂಬಂಧಪಟ್ಟ ತೀರ ಖಾಸಗಿ ವಿಚಾರದಲ್ಲಿ ಯಾಕಿಷ್ಟು ತಲೆ ಕೆಡಿಸಿಕೊಳ್ಳುತ್ತಾರೆ ಎಂದೇ ಅರ್ಥವಾಗುವುದಿಲ್ಲ’.
ಹಾಗಿದ್ದರೂ ಕರೀನಾ ಈ ಸಂದರ್ಭದಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ, ಕುಟುಂಬದವರು, ಸ್ನೇಹಿತರು ಮತ್ತೆ ಅಭಿಮಾನಿಗಳಿಗೂ ಕೃತಜ್ಞತೆ ಅರ್ಪಿಸಲು ಮರೆಯಲಿಲ್ಲ.