ಮುಂಬಯಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಪಾಲಿಗೆ 2019 ಬಹಳ ಅದೃಷ್ಟದ ವರ್ಷವೆಂದೇ ಹೆಳಬಹುದು. ಮೊನ್ನೆ ತಾನೆ ಬಿಡುಗಡೆಯಾದ ‘ಗುಡ್ ನ್ಯೂಸ್’ ಸಹಿತ ಅಕ್ಕಿ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷ ಬಿಡುಗಡೆಯಾದ ಪ್ರಥಮ ವಾರದಲ್ಲೇ 50 ಕೋಟಿ ಕಲೆಕ್ಷನ್ ಮಾಡಿರುವ ದಾಖಲೆಗೆ ಪಾತ್ರವಾಗಿವೆ.
ಡಿಸೆಂಬರ್ 26ಕ್ಕೆ ಬಿಡುಗಡೆಯಾಗಿರುವ ‘ಗುಡ್ ನ್ಯೂಸ್’ ಚಿತ್ರ ಇದೀಗ ಎಲ್ಲಾ ಕಡೆ ಭಾರೀ ಸದ್ದು ಮಾಡುತ್ತಿದೆ. ಕೃತಕ ಗರ್ಭದಾರಣೆಗೆ ಸಂಬಂಧಿಸಿದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಯಾಗಿ ಕರೀನಾ ಕಪೂರ್ ನಟಿಸಿದ್ದಾರೆ.
ಈ ಚಿತ್ರ ಗಳಿಕೆಯಲ್ಲಿ ಭರ್ಜರಿ ದಾಖಲೆಯನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ. ಶುಕ್ರವಾರ ಮತ್ತು ಶನಿವಾರ ಈ ಚಿತ್ರ 17.56 ಮತ್ತು 27.78 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದ್ದರೆ ಆದಿತ್ಯವಾರ ಈ ಚಿತ್ರದ ಕಲೆಕ್ಷನ್ ನಲ್ಲಿ ಭಾರೀ ಏರಿಕೆ ಕಂಡಿದೆ. ಈ ದಿನ 26.65 ಕೋಟಿ ರೂಪಾಯಿಗಳನ್ನು ಈ ಚಿತ್ರ ಬಾಚಿಕೊಂಡಿದೆ. ಅಲ್ಲಿಗೆ ಮೂರು ದಿನಗಳಲ್ಲಿ ಈ ಚಿತ್ರದ ಗಳಿಕೆ 65.99 ಕೋಟಿ ರೂಪಾಯಿಗಳಾಗಿವೆ.
ಇದರೊಂದಿಗೆ ಅಕ್ಷಯ್ ಕುಮಾರ್ ಅಭಿನಯದ ಒಟ್ಟು ನಾಲ್ಕು ಚಿತ್ರಗಳು ಈ ವರ್ಷ ಪ್ರಥಮ ವಾರದಲ್ಲೇ 50 ಕೋಟಿ ಗಳಿಕೆ ಮಾಡಿದ ಸಾಧನೆಯನ್ನು ಮಾಡಿವೆ.
ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ಸ್ವಾತಂತ್ರ್ಯಪೂರ್ವದ ಸಿಖ್ ಯೋಧರ ಸಾಹಸ ಕಥೆಯನ್ನು ಹೊಂದಿದ್ದ ‘ಕೇಸರಿ’ ಚಿತ್ರ ಹೋಳಿ ಸಂದರ್ಭದಲ್ಲಿ ಬಿಡುಗಡೆಗೊಂಡಿತ್ತು ಮತ್ತು ಈ ಚಿತ್ರ ಬಿಡುಗಡೆಯಾದ ಪ್ರಥಮ ವಾರದಲ್ಲಿ 78.07 ಕೋಟಿ ಗಳಿಸಿದ ಸಾಧನೆಯನ್ನು ಮಾಡಿತ್ತು. ಮತ್ತು ಕೇಸರಿ ಚಿತ್ರ 200 ಕೋಟಿ ಕ್ಲಬ್ ಗೆ ಸೇರ್ಪಡೆಯಾಗಿತ್ತು.
ಬಳಿಕ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿದ್ದ ‘ಮಿಷನ್ ಮಂಗಲ್’ ಚಿತ್ರವೂ ಸಹ ಮೊದಲ ವಾರದಲ್ಲಿ 97.56 ಕೋಟಿ ಗಳಿಸಿ ಹೊಸ ದಾಖಲೆಯನ್ನೇ ನಿರ್ಮಿಸಿತ್ತು. ಈ ಚಿತ್ರ ಒಟ್ಟಾರೆ 290 ಕೋಟಿ ರೂಪಾಯಿಗಳನ್ನು ಗಳಿಸಿತ್ತು.
ನಂತರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಕಂಡ ‘ಹೌಸ್ ಫುಲ್ 4’ ಚಿತ್ರದ ಗಳಿಕೆ ಪ್ರಥಮ ವಾರದಲ್ಲೇ 65.99 ಕೋಟಿ ರೂಪಾಯಿಗಳನ್ನು ದಾಟಿತ್ತು. ಇದೀಗ ‘ಗುಡ್ ನ್ಯೂಸ್’ ಸಹ ಬಿಡುಗಡೆಯ ಪ್ರಥಮ ವಾರದಲ್ಲಿ 66 ಕೋಟಿ ರೂಪಾಯಿಗಳ ಗಳಿಕೆಯನ್ನು ದಾಖಲಿಸುವ ಮೂಲಕ ಅಕ್ಷಯ್ ಕುಮಾರ್ ಅವರನ್ನು ಬಾಲಿವುಡ್ ನ ಹೊಸ ಬಾಕ್ಸ್ ಆಫೀಸ್ ಕಲೆಕ್ಷನ್ ಕಿಂಗ್ ಆಗಿ ಹೊರಹೊಮ್ಮುವಂತೆ ಮಾಡಿದೆ.