Advertisement

ಕರಾಯ ಶಾಲೆಗೆ ದೊರೆಯದ ದುರಸ್ತಿ  ಭಾಗ್ಯ

08:51 PM Sep 16, 2021 | Team Udayavani |

ಉಪ್ಪಿನಂಗಡಿ: ರಾಜ್ಯದ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ದಿನ ನಿಗದಿಯಾದರೂ ಕರಾಯ ಸರಕಾರಿ ಉನ್ನತೀಕರಿಸಿದ ಶಾಲೆಗೆ ದುರಸ್ತಿ ಭಾಗ್ಯ ಇನ್ನೂ ಲಭಿಸಿಲ್ಲ.

Advertisement

ಸುಮಾರು 80 ವರ್ಷಗಳ ಇತಿಹಾಸ ಇರುವ ಈ ಶಾಲೆಯ ಸೂರು, ಗೋಡೆ ಶಿಥಿಲಗೊಂಡಿದೆ. ಹಲವು ಕಡೆ ಗೆದ್ದಲು ಆವರಿಸಿದೆ. ಹಂಚುಗಳು ಒಡೆದಿವೆ.

ನೂತನ ಸುಸಜ್ಜಿತ ಕೊಠಡಿಗಳ ಬೇಡಿಕೆಗಾಗಿ ಶಾಲೆ ಮುಖ್ಯ ಶಿಕ್ಷಕರು ಶಾಸಕರಿಂದ ಹಿಡಿದು ಶಿಕ್ಷಣ ಇಲಾಖೆ, ಗ್ರಾಮ, ತಾಲೂಕು, ಜಿಲ್ಲಾ  ಜನ ಪ್ರತಿನಿಧಿಗಳ ಮೊರೆ ಹೋದರೂ ಪ್ರಯೋಜನವಾಗಿಲ್ಲ. ಶಾಲೆ ಅಭಿವೃದ್ಧಿ ಸಮಿತಿಯವರು ಸೂರಿಗೆ ಪ್ಲಾಸ್ಟಿಕ್‌ ಹೊದಿಕೆ ಹಾಸಿ ಶಾಲೆ ಉಳಿಸಲು ಹರ ಸಾಹಸ ಮಾಡುತ್ತಿದ್ದಾರೆ. ಮಾಡು ಯಾವ ಕ್ಷಣದಲ್ಲೂ ಕುಸಿಯುವ ಭೀತಿ ಇದೆ. ಸದ್ಯ ಒಂದೂವರೆ ವರ್ಷದಿಂದ ಶಾಲೆ ಮುಚ್ಚಿದ್ದರಿಂದ ಮಕ್ಕಳ ಸ್ಥಿತಿಯ ಬಗ್ಗೆ ಶಿಕ್ಷಕರು ಒಂದಷ್ಟು ನಿರಾಳರಾಗಿದ್ದರಾದರೂ ಈಗ ಶಾಲೆ ಆರಂಭ ಎಂದಾಕ್ಷಣ ಅವರ ಆತಂಕವೂ ದ್ವಿಗುಣಗೊಂಡಿದೆ.

ಈ ಸರಕಾರಿ ಶಾಲೆಗೆ ತನ್ನದೇ ಹೆಸರಿನಲ್ಲಿ ವಿಶಾಲವಾದ ಭೂಮಿ ಇದ್ದು ಇದರಲ್ಲಿ ವನಮಹೋತ್ಸವ ಸಮಯ ದಲ್ಲಿ ನೆಟ್ಟ ಗಿಡಗಳು ಮರವಾಗಿ ಬೆಳೆದು ನಿಂತಿವೆ. ಅವುಗಳಲ್ಲಿ ಕೆಲವು ಆಯುಷ್ಯ ಮುಗಿದ ಮರಗಳೂ ಇವೆ. ಐದು ವರ್ಷಗಳ ಹಿಂದೆ ಅವುಗಳನ್ನು ಕಡಿದು ಬಂದ ಆದಾಯದಲ್ಲಿ ಸಣ್ಣ ಪ್ರಮಾಣದಲ್ಲಿ ಶಾಲೆ ದುರಸ್ತಿಗೆ ಮುಂದಡಿ ಇಡಲಾಗಿತ್ತು. ಮರ ಕಡಿದು ಏಲಂಗೆ ಅಣಿಯಾಗುತ್ತಿದ್ದಂತೆ ಅರಣ್ಯ ಇಲಾಖೆ ತಡೆ ಒಡ್ಡಿ ಅದು ಶಾಲೆಯ ಉಪಯೋಗಕ್ಕೆ ಬಾರದೆ ವಿವಾದಕ್ಕೆ ಕಾರಣವಾಯಿತು. ಕಟ್ಟಡದ ಹಿಂಭಾಗದಲ್ಲಿ ಮಣ್ಣು ಕರಗಿ ಅಡಿಪಾಯ ಎದ್ದು ಕಾಣುತ್ತಿದೆ. ಮಾಡಿನ ಸ್ಥಿತಿಯಿಂದಾಗಿ ಕೊಠಡಿಗಳ ಒಳ ಪ್ರವೇಶಕ್ಕೆ  ಶಿಕ್ಷಕರು ಧೈರ್ಯ ಕಳೆದುಕೊಂಡಿದ್ದಾರೆ.

ರಂಗಭೂಮಿ ಕಾಮಗಾರಿ ಜಿಲ್ಲಾ ಪಂಚಾಯತ್‌ ಅನುದಾನದಲ್ಲಿ ಆರಂಭಗೊಂಡರೂ ಬಳಿಕ ವಿವಿಧ ಕಾರಣಗಳಿಂದ ಛಾವಣಿ ಇಲ್ಲದೆ ಅರ್ಧಕ್ಕೆ ನಿಂತಿದೆ. ಈಗ ಒಟ್ಟು 117 ಮಕ್ಕಳಿದ್ದು ಶಾಲೆಯ ಈಗಿನ ಸ್ಥಿತಿಯಿಂದ ಹೆತ್ತವರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುವಂತಾಗಿದೆ.

Advertisement

ಗಂಡು ಹಾಗೂ ಹೆಣ್ಣು ಮಕ್ಕಳಿಗೆ ತಲಾ ಒಂದೊಂದು ಗತಕಾಲದ ಶೌಚಾಲಯವಿದ್ದು ಅಭಿವೃದ್ಧಿ ಸಮಿತಿ ಸದಸ್ಯರು ಮಾಡಿದ ನಿರ್ವಹಣೆಯಿಂದ ಉಳಿದುಕೊಂಡಿದೆ ಅಷ್ಟೆ. ಈ ಶಾಲೆಗೆ ಸರಕಾರದಿಂದ ಬಿಸಿಯೂಟದ ಕಟ್ಟಡ ಈ ತನಕ ಬಂದಿಲ್ಲ. ಶಿಕ್ಷಕರ ಸಂಖ್ಯೆ ಸಮಾಧಾನಕರ ರೀತಿಯಲ್ಲಿ ಇದ್ದರೂ ಶಾಲೆ ಕಟ್ಟಡ ಕಂಡಾಗ ಹೆದರುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಎಲ್ಲ ಜನಪ್ರತಿನಿಧಿಗಳ ಸಹಿತ ಸರಕಾರಕ್ಕೆ ಮನವಿಯನ್ನು ಕಳುಹಿಸಿಕೊಡಲಾಗಿದೆ. ಈ ತನಕ ಯಾವುದೇ ಅನುದಾನ ಬಂದಿಲ್ಲ. ಶಾಲಾಭಿವೃದ್ಧಿ ಸಮಿತಿಯಿಂಲೇ ಅನುದಾನ ಕ್ರೋಢೀಕರಿಸಿ ಈ ತನಕ ಕಟ್ಟಡ ಉಳಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತರಗತಿಗಳನ್ನು ಯಾವ ಧೈರ್ಯದಿಂದ ನಡೆಸಬೇಕು ಎಂಬುದು ಯಕ್ಷಪ್ರಶ್ನೆಯಾಗಿದೆ. ಶಶಿಧರ್‌,  ಅಧ್ಯಕ್ಷ ರು, ಶಾಲಾಭಿವೃದ್ಧಿ ಸಮಿತಿ

ಸರಕಾರಿ ಶಾಲೆಯ ಪರಿಸ್ಥಿತಿ ಮನವರಿಕೆಯಾಗಿದೆ. ಗ್ರಾ.ಪಂ.ನಲ್ಲಿ ಸಾಕಷ್ಟು ಆದಾಯ ಇಲ್ಲದಿರುವುದರಿಂದ ಸರಕಾರದ ಮಟ್ಟದಲ್ಲಿ ನೂತನ ಕಟ್ಟಡ ಮಂಜೂರಾತಿ ಆಗಬೇಕಾಗಿದೆ.ಫಾತಿಮಾ ಇಶ್ರತ್‌, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರು

ಗ್ರಾಮದ ಕನ್ನಡ ಮಾಧ್ಯಮ ಏಕೈಕ ಶಾಲೆ ಇದಾಗಿದ್ದು ಅಭಿವೃದ್ಧಿ ಪಡಿಸಲು ಸರಕಾರ ಅನುದಾನಕ್ಕಾಗಿ ಕಾಯಬೇಕಾದ ಅನಿವಾರ್ಯ ಮೂಡಿದೆ.ಗರಡಿ ಜಯರಾಮ ಆಚಾರಿ , ಹಳೆ ವಿದ್ಯಾರ್ಥಿ ಸಂಘದ ಸದಸ್ಯ

ಎಂ.ಎಸ್‌.ಭಟ್‌ ಉಪ್ಪಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next