Advertisement

ಕರಾಯ ಪ್ರೌಢಶಾಲೆ: ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರಿಗೆ ಸಮಸ್ಯೆ

07:31 PM Dec 11, 2019 | mahesh |

ಉಪ್ಪಿನಂಗಡಿ: ಬೆಳ್ತಂಗಡಿ ತಾ| ಕರಾಯ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸುಸಜ್ಜಿತ ಶೌಚಾಲಯ ವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

8ರಿಂದ 10ನೇ ತರಗತಿ ತನಕ ಇಲ್ಲಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಈ ಪೈಕಿ 93 ಮಂದಿ ವಿದ್ಯಾರ್ಥಿನಿಯರೇ ಆಗಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ತಮ್ಮ ಕ್ಷೇತ್ರದ ಸರಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಮನಗಂಡು, ಸ್ಪಂದಿಸುವಂತೆ ಮಂಗಳೂರಿನ ಎಂಆರ್‌ಪಿಎಲ್‌ ಸಂಸ್ಥೆಗೆ ಮನವಿ ಮಾಡಿದ್ದರುಚ. ಅದರಂತೆ ಸಂಸ್ಥೆ ತಾಲೂಕಿನ ಹಲವು ಶಾಲೆಗಳಲ್ಲಿ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಡಲು ಮುಂದಾಗಿದೆ. ಕಾಮಗಾರಿಯೂ ಪ್ರಗತಿಯಲ್ಲಿದೆ. ಆದರೆ, ಈ ಪ್ರೌಢಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇರುವ ಕುರಿತು ಶಾಸಕರಿಗೆ ಸಂಬಂಧಿಸಿದವರು ಮಾಹಿತಿ ನೀಡದ ಕಾರಣ ಈ ಶಾಲೆ ಪಟ್ಟಿಯಲ್ಲಿ ಸೇರಿಲ್ಲ.

ಇತ್ತೀಚೆಗೆ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ ಅವರು ಅನ್ಯ ಕಾರ್ಯ ನಿಮಿತ್ತ ಶಾಲೆಗೆ ಭೇಟಿ ನೀಡಿದ್ದಾಗ, ಇಲ್ಲಿನ ಶಿಕ್ಷಕರೋರ್ವರು ಶೌಚಾಲಯ ಸಮಸ್ಯೆ ಇರುವುದನ್ನು ಗಮನಕ್ಕೆ ತಂದಿದ್ದರು. ಶಾಸಕರು ಪ್ರತಿ ಗ್ರಾಮ ಮಟ್ಟದಲ್ಲಿ ಶಾಲೆಗಳಿಗೆ ಶೌಚಾಲಯ ನಿರ್ಮಿಸಿಕೊಡುತ್ತಿದ್ದು, ಈ ಪ್ರೌಢಶಾಲೆ ಯಿಂದ ಏಕೆ ವರದಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದ್ದರು.

ಬಳಿಕ ಮುಖ್ಯ ಶಿಕ್ಷಕರು ಶಾಸಕರಿಗೆ ಮನವಿ ಮಾಡಿದ್ದರು. ಎಲ್ಲ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿದ ಬಳಿಕ ಮನವಿ ಸಲ್ಲಿಸಿದ್ದೀರಿ ಎಂಬ ಉತ್ತರ ಶಾಸಕರ ಕಚೇರಿಯಿಂದ ಬಂದಿದೆ.
ಎಸ್‌ಡಿಎಂಸಿ ಹಾಗೂ ಶಿಕ್ಷಕರು ಮುತುವರ್ಜಿ ವಹಿಸಿ, ವಿದ್ಯಾರ್ಥಿಗಳಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next