ಕಾರವಾರ: ಕಾಳಿ ನದಿ ಅಳಿವೆ ದಂಡೆಯಲ್ಲಿ ಬೃಹತ್ ಗಾತ್ರದ ಹಸಿರಾಮೆ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಕಾಳಿ ನದಿ ದಂಡೆಯ ಹೋಂಸ್ಟೇ ಬಳಿ ಮೃತ ಸ್ಥಿತಿಯಲ್ಲಿದ್ದ ಹಸಿರಾಮೆಯನ್ನು ಕಡಲಜೀವಶಾಸ್ತ್ರದ ಸಂಶೋಧಕ ವಿದ್ಯಾರ್ಥಿ ಸೂರಜ್ ಪೂಜಾರ್ ಪತ್ತೆ ಹಚ್ಚಿದ್ದಾರೆ .
ಹಸಿರಾಮೆಯು 3.5 ಅಡಿ ಉದ್ದ ಮತ್ತು ಸುಮಾರು 2-5 ಅಡಿ ಅಗಲವಿದೆ. ಮೃತ ಆಮೆಯು ಉತ್ತಮ ಸ್ಥಿತಿಯಲ್ಲಿದ್ದು, ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದೆ ಎಂದು ಕಂಡುಬಂದಿದೆ. ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ತಿಳಿಸಲಾಗಿದೆ ಮತ್ತು ನಾವು ಅದನ್ನು ಸಂರಕ್ಷಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ. ಸದ್ಯಕ್ಕೆ ಆಮೆಗೆ ಕೆಲವು ರಾಸಾಯನಿಕ ಚಿಕಿತ್ಸೆಗೆ ಒಳಪಡಿಸಲಾಗಿದೆ ಮತ್ತು ಸಂರಕ್ಷಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲು 10 ದಿನಗಳು ಬೇಕು ಎಂದು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಾಹಿತಿ ನೀಡಿದರು.
ಕಾರವಾರ ಹಾಗೂ ಜಿಲ್ಲೆಯ ವಿವಿಧೆಡೆ ಹಸಿರು ಆಮೆಗಳು ದಡಕ್ಕೆ ಆಗಾಗ ಮೃತ ಸ್ಥಿತಿಯಲ್ಲಿ ಸಿಕ್ಕಿವೆ. ಆದಾಗ್ಯೂ ಇದುವರೆಗೆ ಜೀವಂತ ಆಮೆ ಅಥವಾ ಅದರ ನೆಲೆ ಇರುವ ಬಗ್ಗೆ ಕಂಡುಬಂದಿಲ್ಲ.
ಇದೇ ವರ್ಷ ಮಹಾರಾಷ್ಟ್ರದಿಂದ ಹಸಿರು ಆಮೆ ಕಡಲ ತೀರದಲ್ಲಿ ಗೂಡುಕಟ್ಟುವಿಕೆಯ ಮೊದಲ ಸುದ್ದಿ ವರದಿಯಾಗಿದೆ. ಅಂಡಮಾನ್ ದ್ವೀಪಗಳು ಹಸಿರಾಮೆಯ ಆಮೆಯ ಸಂತಾನೋತ್ಪತ್ತಿ ಕೇಂದ್ರವಾಗಿದೆ.
ಆಮೆಗಳಲ್ಲಿ ಹಸಿರು ಆಮೆಗಳು ಅತಿ ದೊಡ್ಡ ಗಾತ್ರದವು. ಅವು ಕಡಲ ಹುಲ್ಲು ಮತ್ತು ಪಾಚಿಯನ್ನು ಆಹಾರವಾಗಿ ಬಳಸುತ್ತಿವೆ. ಕಡಲತೀರಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಪ್ರೌಢ ಆಮೆಗಳು ಹೆಚ್ಚಾಗಿ ಆಳವಿಲ್ಲದ ನೀರಿನಲ್ಲಿ ಕಂಡುಬರುತ್ತವೆ.