Advertisement

ಅವೈಜ್ಞಾನಿಕ ಮೀನುಗಾರಿಕೆಯಿಂದ ಕ್ಷಾಮ

03:43 PM Feb 13, 2020 | Naveen |

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಕ್ಷಾಮದಿಂದ ಮೀನುಗಾರಿಕೆಗೆ ತೆರಳಿದ ಪರ್ಶಿನ್‌ ಹಾಗೂ ಟ್ರಾಲರ್‌ ಬೋಟ್‌ಗಳು ಖಾಲಿ ಬಲೆಯೊಂದಿಗೆ ಹಿಂದಿರುಗಿವೆ. ಬೈತಖೋಲ್‌ ಮೀನುಗಾರಿಕಾ ಬಂದರಿನಲ್ಲಿ ಬೋಟ್‌ ಗಳು ಲಂಗುರ ಹಾಕಿವೆ. ಸಮುದ್ರ ಬೆಳೆಯಿಲ್ಲದೇ ಮೀನುಗಾರರು ಆತಂಕ ಪಡುವಂತಾಗಿದೆ.

Advertisement

ಅವೈಜ್ಞಾನಿಕ ಮತ್ತು ಕಾನೂನುಬಾಹಿರವಾಗಿ ಲೈಟ್‌ ಫಿಶಿಂಗ್‌, ಬುಲ್‌ ಟ್ರಾಲ್‌ ಮೀನುಗಾರಿಕೆ ಮತ್ತು ಮೀನು ಹಿಡಿಯಲು ಆಳ ಸಮುದ್ರದಲ್ಲಿ ಕ್ಯಾಸುರಿನಾ ಗಿಡಗಳನ್ನು ಬೆಳಸುತ್ತಿರುವ ವಿಧಾನಗಳು ಮೀನು ಕ್ಷಾಮಕ್ಕೆ ಕಾರಣವಾಗಿವೆ ಎಂದು ಮೀನುಗಾರರು ಆರೋಪಿಸಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆ ಸಾಗರಮಾಲಾ ಯೋಜನೆಯಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಹದಿಮೂರು ದಿನಗಳ ಕಾಲ ಮೀನುಗಾರಿಕೆ ಚಟುವಟಿಕೆಗಳನ್ನು ಮೀನುಗಾರರು ಸಂಪೂರ್ಣ ಸ್ಥಗಿತ ಮಾಡಿದ್ದರು. ಈಗ ಸಮುದ್ರದಲ್ಲಿ ಮೀನು ಬೇಟೆ ಯಶಸ್ವಿಯಾಗದೇ ಖಾಲಿ ಬೋಟ್‌ಗಳಲ್ಲಿ ಮರಳುತ್ತಿದ್ದಾರೆ ಎಂದು ಮೀನುಗಾರರು ತಿಳಿಸಿದ್ದಾರೆ.

ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ 24 ನಾಟಿಕಲ್‌ ಮೈಲಿ ಮೀರಿದ ಮೀನುಗಾರಿಕೆ ಚಟುವಟಿಕೆ ನಿಷೇಧಿಸಲಾಗಿದೆ. ಆದರೆ ಗೋವಾ ಮತ್ತು ಕರ್ನಾಟಕದಲ್ಲಿ ಇದಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಇತರ ರಾಜ್ಯಗಳ ಮೀನುಗಾರರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹೊರ ರಾಜ್ಯದವರು ನಿರಾತಂಕದಿಂದ ರಾಜ್ಯದ ಸಮುದ್ರ ಗಡಿಯೊಳಗಿನ ಆಳ ಸಮುದ್ರದ ಮಧ್ಯದಲ್ಲಿ ಅಪಾರ ಪ್ರಮಾಣದ ಮೀನುಗಳನ್ನು ಹಿಡಿಯುತ್ತಿದ್ದಾರೆ.

ಇದಲ್ಲದೇ ಹಗ್ಗಗಳನ್ನು ಕಟ್ಟಿ ಕ್ಯಾಸುರಿನಾ ಗಿಡಗಳನ್ನು ಸಮುದ್ರ ಮಧ್ಯದಲ್ಲಿ ಎಸೆದು ಕೊಳೆಯಲು ಬಿಡಲಾಗುತ್ತದೆ. ಇದು ಅಪಾರ ಪ್ರಮಾಣದ ಮೀನುಗಳನ್ನು ಆಕರ್ಷಿಸುತ್ತದೆ. ನಂತರ ಹೊರ ರಾಜ್ಯದವರು ಅದರ ಸುತ್ತಲೂ ಬಲೆ ಹರಡಿ ಮೀನು ಹಿಡಿಯುತ್ತಾರೆ. ಆದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿಕೊಂಡಿದೆ ಎಂದು ಮೀನುಗಾರ ಯುವ ಮುಖಂಡ ವಿನಾಯಕ ಹರಿಕಂತ್ರ ಆರೋಪಿಸಿದ್ದಾರೆ.

Advertisement

ನಾವು ಅದನ್ನು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಏನೂ ಪ್ರಯೋಜನವಾಗಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಳ ಸಮುದ್ರದಲ್ಲಿ ಇತರೆ ರಾಜ್ಯದವರ ಅವೈಜ್ಞಾನಿಕ ಮೀನುಗಾರಿಕೆಯಿಂದ ಇದರ ದುಷ್ಪರಿಣಾಮಗಳಿಂದ ಸಮುದ್ರದಲ್ಲಿ ಮೀನು ಸಿಗುತ್ತಿಲ್ಲ. ಮೀನುಗಾರರಿಗೆ ಇದು ಮತ್ಸ್ಯ ಬೇಟೆ ಸಮಯವಾಗಿದ್ದು, ಮೀನುಗಾರಿಕೆಯಿಂದ ಹಣ ಸಂಪಾದಿಸುವ ಕಾಲವಾಗಿದೆ.ಆದರೆ ಈಗ ನಮ್ಮ ಸಾಂಪ್ರದಾಯಿಕ ದೋಣಿಗಳು ಹಾಗೂ ಆಳ ಸಮುದ್ರ ಮೀನುಗಾರಿಕೆಯ ಯಾಂತ್ರಿಕೃತ ಬೋಟ್‌ಗಳು ಮೀನು ಇಲ್ಲದೇ ಖಾಲಿ ಮರಳುತ್ತಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಅಕ್ರಮ ಮೀನುಗಾರಿಕೆ ನಿಷೇಧಿಸಬೇಕು. ರಾಜ್ಯದ ಸಾಗರ ಗಡಿಯೊಳಗೆ ಬಂದು ಕಾನೂನು ಬಾಹಿರವಾಗಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ತಮಿಳುನಾಡು, ಕೇರಳ ಮೀನುಗಾರಿಕಾ ಬೋಟ್‌ಗಳನ್ನು ನಿರ್ಬಂಧಿಸಬೇಕು ಎಂದು ಇಲ್ಲಿನ ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next