Advertisement

ಅಕಾಲಿಕ ಮಳೆಗೆ ಅಪಾರ ಹಾನಿ : ಮನೆಗೆ ನುಗ್ಗಿದ ಗಟಾರ ನೀರು

04:21 PM Jan 09, 2021 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆ ಅಪಾರ ಹಾನಿ ತಂದಿದೆ. ರೈತರ ಮೊಗದಲ್ಲಿದ್ದ ನಗುವನ್ನು ಕಸಿದು
ಹಾಕಿದೆ. ಕರಾವಳಿಯಲ್ಲಿ ಹಾಗೂ ಘಟ್ಟದ ಮೇಲೆ ಮಳೆ ಸಣ್ಣಕೆ ಹಾಗೂ ಘಟ್ಟದ ಮೇಲೆ ಗುಡುಗು ಸಿಡಿಲು ಮಿಂಚು ಸಹಿತ
ಮಳೆಯಾಗಿದೆ.

Advertisement

ಜನೆವರಿ ಮೊದಲ ವಾರದಲ್ಲಿ ಬೀಳುತ್ತಿರುವ ಮಳೆಯಿಂದ ಅಡಕೆ, ಭತ್ತ ಹಾಗೂ ಮಾವಿನ ಬೆಳೆಗೆ ಅಪಾರ ಹಾನಿಯಾಗಿದೆ.
ಕೊಯ್ಲಿಗೆ ಬಂದ ಭತ್ತ ಉಳಿಸಿಕೊಳ್ಳುವುದಕ್ಕೆ ರೈತರು ಹೋರಾಡುವಂತಾಗಿದೆ. ಬನವಾಸಿ, ಶಿವಳ್ಳಿ, ಹೊಸಳ್ಳಿಯಲ್ಲಿ ಕೊಯ್ದಿಟ್ಟ ಭತ್ತದ ಪೈರು ಮಳೆ ನೀರಿಗೆ ಸಂಪೂರ್ಣ ಹಾನಿಯಾಗಿದೆ. ಕೈಗೆ ಬಂದ ಭತ್ತ ರೈತರ ಮನೆ ತುಂಬುವ ಮುನ್ನವೇ ನಷ್ಟ ಅನುಭವಿಸಿದೆ.

ಮುಂಡಗೋಡ ಪಾಳ ಭಾಗದ ರೈತುರು ಮಾವಿನ ಬೆಳೆ ಬರುವ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ನವೆಂಬರ್‌, ಡಿಸೆಂಬರ್‌ನಲ್ಲಿ ಹೂ ಕಟ್ಟಿದ್ದ ಮಾವಿನ ಮರದ ಹೂ ಉದುರುತ್ತಿದೆ. ಇದರಿಂದ ಮಾವು ಬೆಳೆ ನಂಬಿದ್ದ ರೈತರು ಕಣ್ಣೀರು ಸುರಿಸುವಂತಾಗಿದೆ. 1062 ಹೆಕ್ಟೇರ್‌ ಪ್ರದೇಶ ಮಾವು ಈಗ ಆತಂಕ ಎದುರಿಸುತ್ತಿದೆ.

ಇದನ್ನೂ ಓದಿ:ಲಡಾಖ್ ನ ಚುಶುಲ್ ಸೆಕ್ಟರ್ ಗಡಿಯಲ್ಲಿ ಚೀನಾ ಸೈನಿಕ ಭಾರತೀಯ ಸೇನೆಯ ವಶಕ್ಕೆ, ವಿಚಾರಣೆ

ಇಲ್ಲಿ ಮಾವಿನ ಮರಗಳನ್ನು ಬೆಳೆಸಿ, ಅವುಗಳನ್ನು ಶಿಗ್ಗಾವಿ, ಹಾನಗಲ್ಲ, ಶಿರಸಿ, ಸವಣೂರು ಭಾಗದ ವ್ಯಾಪಾರಿಗಳಿಗೆ ಗುತ್ತಿಗೆ ಕೊಡಲಾಗಿತ್ತು. ಆದರೆ ಮಾವು ಬೆಳೆ ಬರುವುದೇ ಎಂಬ ಅನುಮಾನ ಹುಟ್ಟಿದೆ. ಶಿರಸಿಯಲ್ಲಿ ರಸ್ತೆಯ ಮೇಲೆ ನೀರು ಹರಿಯುವಷ್ಟು ರಭಸದ ಮಳೆ ಬಿದ್ದಿದೆ. ಮನೆ ಹಾಗೂ ಅಂಗಡಿಯ ಮೇಲ್ಛಾವಣಿ ಸಹ ಕುಸಿದಿದೆ. ಹಳಿಯಾಳದಲ್ಲಿ ಶುಕ್ರವಾರ ಸಂಜೆ ಜಿಟಿಜಿಟಿ ಮಳೆ ಆರಂಭವಾಗಿದೆ. ಈ ತಾಲೂಕಿನ ರೈತರಲ್ಲಿ ಸಹ ಆತಂಕ ಮನೆ ಮಾಡಿದೆ.

Advertisement

ಸಿದ್ದಾಪುರ ತಾಲೂಕಿನಲ್ಲಿ ಗುಡುಗು, ಮಿಂಚು ಪ್ರಾರಂಭವಾಗಿದ್ದು, ಸಣ್ಣ ಪ್ರಮಾಣದಲ್ಲಿ ಮಳೆ ಜಿನುಗುತ್ತಿದೆ. ಭಟ್ಕಳ ತಾಲೂಕಿನಲ್ಲಿ ಅಕಾಲಿಕವಾಗಿ ಬಿದ್ದ ಮಳೆಯಿಂದ ತೆಂಗಿನಗುಂಡಿ ಭಾಗದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಶಿರಾಲಿ, ಬೇಂಗ್ರೆ ಭಾಗದಲ್ಲಿ ಬೆಳೆದ ಶೇಂಗಾ ಬೆಳೆಗೆ ಹಾನಿಯಾಗಿದೆ. ಅಡಕೆ, ಮಾವು, ಗೇರು ಬೆಳೆಗೂ ಹಾನಿಯಾಗಿದೆ. ಮಲ್ಲಿಗೆ ಬೆಳೆಗಾರರು ಸಹ ಅತಂಕದ ಜೊತೆ ನಷ್ಟ ಅನುಭವಿಸುವಂತಾಗಿದೆ.

ಕಿರವತ್ತಿಯಲ್ಲಿ ಹತ್ತು ಸೆಂಟಿ ಮೀಟರ್‌ ಮಳೆ ಸುರಿದಿದೆ. ಕಾರವಾರದಲ್ಲಿ ಸಹ ಗುರುವಾರ ರಾತ್ರಿ, ಶುಕ್ರವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಇದು ಇಲ್ಲಿನ ಕಲ್ಲಂಗಡಿ ಬೆಳೆಗೆ, ಭತ್ತದ ಬೆಳೆಗೆ ಸ್ವಲ್ಪ ಹಾನಿ ತಂದಿದೆ. ಅಂಕೋಲಾ ತಾಲೂಕಿನ ಮಾವು
ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ.

ಪರಿಹಾರಕ್ಕೆ ಆಗ್ರಹ: ಜಿಲ್ಲಾಡಳಿತ ಅಕಾಲಿಕ ಮಳೆಗೆ ವಿವಿಧ ತಾಲೂಕುಗಳಲ್ಲಿ ರೈತರ ವಿವಿಧ ಬೆಳೆಗಳಿಗೆ ಆದ ಹಾನಿಯ ಸಮೀಕ್ಷೆ ಮಾಡಿಸಿ, ಪರಿಹಾರ ನೀಡಲು ಮುಂದಾಗಬೇಕೆಂದು ರೈತರು, ರೈತ ಮುಖಂಡರು ಆಗ್ರಹಿಸಿದ್ದಾರೆ. ಕೃಷಿ ಇಲಾಖೆ ಹಾಗೂ ಸರ್ಕಾರ ತಕ್ಷಣ ರೈತರ ಬೆಳೆಗೆ ಹಾದ ಹಾನಿಯ ಸಮೀಕ್ಷೆ ಮಾಡಿಸಿ ಪರಿಹಾರಕ್ಕೆ ಮುಂದಾಗಬೇಕೆಂಬುದು ರೈತರ ಆಶಯವಾಗಿದೆ.

ಮನೆಗೆ ನುಗ್ಗಿದ ಗಟಾರ ನೀರು
ದಾಂಡೇಲಿ: ನಗರದಲ್ಲಿ ಹಠತ್ತನೇ ಸುರಿದ ಭೀಕರ ಮಳೆಗೆ ನಗರದ ಲೆನಿನ್‌ ರಸ್ತೆಯ ಬಹುತೇಕ ಮಳಿಗೆಗಳೊಳಗೆ ಮಳೆ ನೀರು ನುಗ್ಗಿ ನಷ್ಟ ಉಂಟಾಗಿದ್ದರೆ, ಹಳಿಯಾಳ ರಸ್ತೆಯ ಅಲೈಡ್‌ ಪ್ರದೇಶದಲ್ಲಿ ಮನೆಯೊಳಗಡೆ ಗಟಾರ ನೀರು ನುಗ್ಗಿ ಅಪಾರ ಹಾನಿಯಾಗಿದೆ.

ಹಳೆದಾಂಡೇಲಿಯಲ್ಲಿಯೂ ಮುಖ್ಯ ರಸ್ತೆಯಲ್ಲಿರುವ ಬಹುತೇಕ ಮನೆಗಳಿಗೆ ನೀರು ನುಗಿದೆ. ಹಳಿಯಾಳ ರಸ್ತೆ ಹಾಗೂ ಅಲೈಡ್‌ ಪ್ರದೇಶದಲ್ಲಿ ಮತ್ತು ಹಳೆದಾಂಡೇಲಿಯಲ್ಲಿ ಗಟಾರ ಸರಿಯಾಗಿ ಸ್ವತ್ಛವಾಗದ ಹಿನ್ನೆಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲಾಗದೇ ಹತ್ತಿರದ ಮನೆಯೊಳಗಡೆ ನುಗ್ಗಿದ್ದು, ನಗರಸಭೆ ನಿರ್ಲಕ್ಷéವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಲಿಂಕ್‌ ರಸ್ತೆಯಲ್ಲಿಯೂ ಮಳೆ ನೀರಿನಿಂದ ಗಟಾರ ತುಂಬಿ ಹೋಗಿ ನೀರೆಲ್ಲ ಹತ್ತಿರದ ಅಂಗಡಿಗಳಿಗೆ ನುಗ್ಗಿದೆ. ಕಾಲಕಾಲಕ್ಕೆ ಗಟಾರಗಳ ಸ್ವತ್ಛತೆಗೆ ವಿಶೇಷ ಮುತುವರ್ಜಿ ವಹಿಸಿ ನಗರಸಭೆ ಕಾರ್ಯನಿರ್ವಹಿಸಬೇಕಾಗಿದೆ. ತುಕಾರಾಮ ನಾರ್ವೇಕರ ಅವರ ಮನೆಗೆ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜು ನಂದ್ಯಾಳ್ಕರ, ಸ್ಥಳೀಯ ನಗರಸಭಾ ಸದಸ್ಯೆ ಪ್ರೀತಿ ನಾಯರ್‌, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next