ಕಾರವಾರ: ಜಿಲ್ಲಾಡಳಿತ, ಜಿಪಂ ಜಿಲ್ಲಾ ಆಯುಷ್, ಆರೋಗ್ಯ ಶಿಕ್ಷಣ ಇಲಾಖೆ, ಜಿಲ್ಲಾ ನೌಕರರ ಸಂಘ ಹಾಗೂ ಇತರೆ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಇಂದಿರಾಕಾಂತ ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಕೆ. ಕಾರ್ಯಕ್ರಮ ಉದ್ಘಾಟಿಸಿ, ಯುವ ಜನತೆ ಏನಾದರೂ ಸಾಧಿಸಬೇಕೆನ್ನುವ ಉತ್ಸಾಹದಲ್ಲಿ ಆರೋಗ್ಯ ನಿರ್ಲಕ್ಷಿಸಬಾರದು. ಮಾನಸಿಕ ಮತ್ತು ದೈಹಿಕ ಆರೋಗ್ಯದ ನಡುವೆ ಸಮತೋಲನ ಇರಬೇಕು. ಅದಕ್ಕೆ ಯೋಗ ಸಹಕಾರಿಯಾಗಿದೆ. ಯೋಗ ನಮ್ಮ ದೇಶದ ಪಾರಂಪರಿಕ ಕೊಡುಗೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಿ, ಯೋಗಾಭ್ಯಾಸ ಮಾಡುವುದನ್ನು ಕೇವಲ ಯೋಗದಿನಾಚರಣೆಗೆ ಸೀಮಿತಗೊಳಿಸದೇ ಪ್ರತಿದಿನದ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರೂ ಸಂಪತ್ತು ಗಳಿಕೆ ಹಿಂದೆ ಓಡುತ್ತಿದ್ದಾರೆ. ಆದರೆ ಆರೋಗ್ಯ ಸಂಪತ್ತು ಕಾಪಾಡಿಕೊಂಡು ಹೋಗುವುದು ಕೂಡಾ ಅಷ್ಟೇ ಮಹತ್ವದ್ದಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಡಿವೈಎಸ್ಪಿ ಶಂಕರ ಮಾರಿಹಾಳ ಸಶಸ್ತ್ರ ಮೀಸಲು ಪಡೆಯ ಸಿಪಿಐ ಸಚಿನ್ ಲಾರೆನ್ಸ್, ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಕೆ. ಮಂಜುನಾಥ, ಜಿಲ್ಲಾ ಆಯುಷ್ ಅಧಿಕಾರಿ ಡಾ| ಲಲಿತಾ ಯು.ಎಚ್., ಆಯುಷ್ ಇಲಾಖೆ ವೈದ್ಯ ಡಾ| ಜಗದೀಶ ಯಾಜಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯೋಗ ಪ್ರಾತ್ಯಕ್ಷಿಕೆ: ತಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ದಂಡಾಸನ, ಭದ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂದಿ ಆಸನ, ಉತ್ತಾನಪಾದಾಸನ, ಅರ್ಧ ಹಾಲಾಸನ, ಪವನ ಮುಕ್ತಿ ಆಸನ, ಶವಾಸನ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು.
ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಶಾಲಾ, ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಜಿಲ್ಲಾಸ್ಪತ್ರೆ ಯೋಗ ವೈದ್ಯ ಡಾ| ಎ.ಜೆ. ಪ್ರಕಾಶ ಹಾಗೂ ರೇಣುಕಾ ಅವರು ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿಕೊಟ್ಟರು.
ಮೈನವಿರೇಳಿಸಿದ ಮಕ್ಕಳ ಯೋಗ: ಮಹಿಳೆಯರು ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗಾಸನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.