ಕಾರವಾರ: ಆಗಸ್ಟ್ ಆರಂಭದಿಂದಲೂ ಮೀನುಗಾರಿಕೆ ಕುಂಟುತ್ತಿದ್ದು, ಹವಾಮಾನ, ವಿಪರೀತ ಮಳೆ ಗಾಳಿಗೆ ಮೀನುಗಾರಿಕೆ ನಲುಗಿಹೋಗಿದೆ.
ಆಗಸ್ಟ್ 1 ರಿಂದ ಕಡಲಿಗೆ ಮೀನುಗಾರಿಕಾ ಯಾಂತ್ರಿಕದೋಣಿಗಳು ಇಳಿದವು. ಆರಂಭದ ಎರಡ್ಮೂರು ದಿನ ಮಾತ್ರ ಆಶಾದಾಯಕ ಮೀನುಗಳು ಬಲೆಗೆ ಬಿದ್ದವು. ನಂತರ ಆ.5 ರಿಂದ ಆ.10ರವರೆಗೆ ಸುರಿದ ಭಾರೀ ಮಳೆ ಗಾಳಿಗೆ ಕಡಲಿಗೆ ಟ್ರಾಲರ್ ಮತ್ತು ಪರ್ಶಿಯನ್ ಬೋಟ್‌ಗಳು ಇಳಿಯಲು ಸಾಧ್ಯವಾಗಲಿಲ್ಲ.
ಆ.15 ರವರೆಗೆ ಸಮುದ್ರದಲ್ಲಿ ಭಾರೀ ಅಲೆಯ ಕಾರಣ ಕಡಲಿಗೆ ಬೋಟ್ ಇಳಿಸಬಾರದೆಂದು ಹವಾಮಾನ ಇಲಾಖೆ ಹಾಗೂ ಮೀನುಗಾರಿಕಾ ಇಲಾಖೆಗಳು ಮೀನುಗಾರರಿಗೆ ಸೂಚನೆ ನೀಡುತ್ತಲೇ ಇದ್ದವು. ಆಗಸ್ಟ್ ಮೂರನೇ ವಾರದಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಯಿತಾದರೂ ಹೇಳಿಕೊಳ್ಳುವಂತಹ ಮೀನು ಬಲೆಗೆ ದಕ್ಕಿಲ್ಲ. ನಾಡದೋಣಿ ಮತ್ತು ದಡದ ಮೀನುಗಾರಿಕೆಯಾದ ಸಂಪ್ರದಾಯಿಕ ಮೀನುಗಾರಿಕೆ ಮಾತ್ರ ಅಲ್ಪ ಪ್ರಮಾಣದಲ್ಲಿ ನಡೆದಿದ್ದು, ಅವರಿಗೆ ಸಹ ಭರಪೂರ ಮೀನು ದಕ್ಕಿಲ್ಲ.
ಮತ್ತೆ ಹವಾಮಾನ ವೈಪರಿತ್ಯ: ಆಳ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತವೆ ಎಂಬ ಮಾಹಿತಿ ಹವಾಮಾನ ಇಲಾಖೆಯಿಂದ ಮೀನುಗಾರಿಕಾ ಇಲಾಖೆಗೆ ರವಾನೆಯಾದ ಪರಿಣಾಮ ಕಳೆದ ನಾಲ್ಕು ದಿನಗಳಿಂದ ಕಾರವಾರ ಬಂದರು ಸೇರಿದಂತೆ ಜಿಲ್ಲೆಯ ವಿವಿಧ ಮೀನುಗಾರಿಕಾ ಬಂದರುಗಳಲ್ಲಿ ಯಾಂತ್ರೀಕೃತ ಬೋಟ್‌ಗಳು ಕಡಲಿಗೆ ಇಳಿದಿಲ್ಲ. ಆ.29ರ ಮಾಹಿತಿ ಬುಧವಾರ ರಾತ್ರಿ ಬರಲಿದ್ದು, ಅದರ ಮಾಹಿತಿ ಪಡೆದ ನಂತರವೇ ಕಡಲಿಗೆ ಇಳಿಯಲು ಯಾಂತ್ರೀಕೃತ ಬೋಟ್‌ಗಳಿಗೆ ಅನುಮತಿ ನೀಡಲಾಗುವುದು ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರು ಹೇಳಿದ್ದಾರೆ.
ಹೊರ ರಾಜ್ಯದ ಬೋಟ್‌ಗಳು ಇಲ್ಲೇ ಲಂಗುರ: ಆಳ ಸಮುದ್ರ ಮೀನುಗಾರಿಕೆ ಮಾಡುತ್ತಿದ್ದ ತಮಿಳುನಾಡು, ಗೋವಾ ರಾಜ್ಯದ ಬೋಟ್‌ಗಳು ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಎದ್ದ ಪರಿಣಾಮ ಕಾರವಾರ ಮೀನುಗಾರಿಕಾ ಹಾಗೂ ವಾಣಿಜ್ಯ ಬಂದರು ಸಮೀಪ ಲಂಗುರ ಹಾಕಿವೆ. ಕಳೆದೆರಡು ದಿನಗಳಿಂದ ಪರ್ಶಿಯನ್ ಮತ್ತು ಟ್ರಾಲ್ ಬೋಟ್‌ಗಳು ಸಮುದ್ರದ ದಡದಲ್ಲಿ ಲಂಗುರ ಹಾಕಿವೆ. ಹೊರ ರಾಜ್ಯದ ಬೋಟ್ ಕಾರ್ಮಿಕರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ಸ್ಥಳೀಯ ಮೀನುಗಾರಿಕಾ ಇಲಾಖೆಯ ನೆರವು ಪಡೆದಿದ್ದಾರೆ.
ಸಮುದ್ರದ ಆರ್ಭಟ ಎಂಬುದು ಮೀನುಗಾರರನ್ನು ಕಂಗಾಲಾಗಿಸಿದೆ. ಆಗಸ್ಟ್ ನಲ್ಲಿ ಭಾರೀ ಪ್ರಮಾಣದಲ್ಲಿ ಮೀನು ಬಲೆಗೆ ಬಿದ್ದು ರಫ್ತಾಗುತ್ತಿತ್ತು. ಈ ವರ್ಷ ಪ್ರಕೃತಿಯ ವೈಪರಿತ್ಯಕ್ಕೆ ತುತ್ತಾಗಿದೆ. ಇನ್ನು ಸೆಪ್ಟಂಬರ್‌ನಲ್ಲಾದರೂ ಮೀನು ಬಲೆಗೆ ಬಿದ್ದೀತೇ ಎಂದು ಕಡಲಮಕ್ಕಳು ಕಾಯುವಂತಾಗಿದೆ.
ದಡದಲ್ಲಿ ನಿಂತು ನೋಡಿದರೆ ಸಮುದ್ರ ಶಾಂತಾವಾಗಿದೆ. ಆದರೆ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕ ವಾತಾವರಣ ಇಲ್ಲ. ಸಮುದ್ರ ರಫ್ ಆಗಿದೆ. ಹವಾಮಾನ ಇಲಾಖೆ ಸೂಚನೆ ಮೀರಿ ಯಾಂತ್ರಿಕ ಬೋಟ್‌ಗಳು ಕಡಲಿಗೆ ಇಳಿದರೆ ಅನಾಹುತ ತಪ್ಪಿದ್ದಲ್ಲ. ಹಾಗಾಗಿ ಸ್ಥಳೀಯರ ಬೋಟ್ ಸೇರಿದಂತೆ ಹೊರರಾಜ್ಯದ ಬೊಟ್‌ಗಳು ಸಹ ಲಂಗುರ ಹಾಕಿವೆ.
•
ಪಿ.ನಾಗರಾಜು,
ಉಪ ನಿರ್ದೇಶಕರು
ಮೀನುಗಾರಿಕಾ ಇಲಾಖೆ. ಕಾರವಾರ.