ಕಾರವಾರ: ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಬುಧವಾರ ಭಾರೀ ಗಾತ್ರದ ಅಲೆಗಳು ದಂಡೆಗೆ ಅಪ್ಪಳಿಸಿದವು. ಹೀಗಾಗಿ ಮೀನುಗಾರಿಕೆ ಸಾಧ್ಯವಾಗಲಿಲ್ಲ.
ಬೆಳಗ್ಗೆ ಹತ್ತು ಗಂಟೆ ಬಳಿಕ ಸಮುದ್ರದಲ್ಲಿ ಏಕಾಏಕಿ ಸುಮಾರು 4ರಿಂದ 5 ಮೀಟರ್‌ಗಿಂತ ಹೆಚ್ಚಿನ ಎತ್ತರದ ಅಲೆಗಳು ಎದ್ದು, ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಯಿತು. ಭಾರಿ ಪ್ರಮಾಣದಲ್ಲಿ ಅಲೆಗಳು ತೀರಕ್ಕೆ ಬಡಿಯುತ್ತಿದ್ದಂತೆ ಸಾಂಪ್ರದಾಯಿಕ ಮೀನುಗಾರರು ಕಡಲತೀರದ ಮೇಲೆ ನಿಲ್ಲಿಸಿಡಲಾಗಿದ್ದ ತಮ್ಮ ದೋಣಿ, ಬಲೆ, ಪರಿಕರಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು. ಮುನ್ನೆಚ್ಚರಿಕೆ ನಡುವೆಯೂ ಕೆಲ ಆಳ ಸಮುದ್ರ ಮೀನುಗಾರಿಕೆ ಬೋಟುಗಳು ಮೀನುಗಾರಿಕೆಗೆ ತೆರಳಿದ್ದವು. ರವೀಂದ್ರನಾಥ್ ಕಡಲತೀರದ ರಾಕ್‌ಗಾರ್ಡನ್, ದಿವೇಕರ ಕಾಲೇಜು ಹಾಗೂ ಮರೀನ್ ಬಯೋಲೊಜಿ ಹಿಂಬದಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕಡಲು ಉಕ್ಕೇರಿ ಭಾರಿ ಅಲೆಗಳು ದಂಡೆಗೆ ಅಪ್ಪಳಿಸಿದವು.
ಇಂಡೋನೇಷ್ಯಾದಲ್ಲಿ ಉಂಟಾದ ಭೂಕಂಪ ಹಾಗೂ ದೇಶದ ಪೂರ್ವ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಒತ್ತಡದಿಂದ ಪಶ್ಚಿಮ ಹಾಗೂ ಪೂರ್ವ ಕರಾವಳಿಯಲ್ಲಿ ಭಾರಿ ಮಳೆ, ಬಿರುಗಾಳಿ ಹಾಗೂ ಸುನಾಮಿಯಂತಹ ಅಲೆಗಳು ಏಳುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಇತ್ತೀಚೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಬುಧವಾರ ಕರ್ನಾಟಕದ ಕರಾವಳಿಯ ಮಂಗಳೂರು, ಕೇರಳ ಹಾಗೂ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ವಾಯುಭಾರ ಕುಸಿತದ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ. ಜಿಲ್ಲೆಯಲ್ಲಿ ಸಾಧಾರಣವಾಗಿ ಅಲೆಗಳ ಆರ್ಭಟ ಬಿಟ್ಟರೆ, ಹೆಚ್ಚಿನ ಪರಿಣಾಮ ಆಗಿಲ್ಲ. ಜಿಲ್ಲೆಯ ಅರಬ್ಬಿ ಸಮುದ್ರದ ಆಳದಲ್ಲಿ ಕಡಲ ಅಲೆಗಳ ಅಧ್ಯಯನಕ್ಕಾಗಿ ಅಳವಡಿಸಲಾಗಿರುವ ಪ್ಯಾರಗೋಲ್‌ನ ಎಂಟೆನಾ ಕಟ್ ಆಗಿರುವುದರಿಂದ ಸರಿಯಾದ ಮಾಹಿತಿ ಲಭ್ಯವಿಲ್ಲವಾಗಿತ್ತು. ಈಗ ಅದರ ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ರಾಠೊಡ್ ಮಾಹಿತಿ ನೀಡಿದರು.
ಗುರುವಾರ ಕೂಡ 8 ಮೀಟರ್‌ಗಿಂತ ಹೆಚ್ಚಿನ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಭಾರಿ ಗಾಳಿಯು ದಕ್ಷಿಣದಿಂದ ಉತ್ತರದ ಕಡೆಗೆ ಚಲಿಸಲಿದೆ. ಇದು ಅಲೆಗಳ ಎತ್ತರಕ್ಕೆ ಮತ್ತಷ್ಟು ಕಾರಣವಾಗಲಿದೆ. ಈ ಬಗ್ಗೆ ಹೈದ್ರಾಬಾದ್ ಕೇಂದ್ರೀತ ಹವಾಮಾನ ಕೇಂದ್ರವು ಮೀನುಗಾರರಿಗೆ ಮುನ್ನೆಚ್ಚರಿಕೆ ಸಂದೇಶ ಕಳುಹಿಸಿದೆ.
ಡಾ.ಜೆ.ಎಲ್.ರಾಠೊಡ್, ಮೆರೀನ್
ಬಯೋಲಾಜಿ ಪ್ರಾಧ್ಯಾಪಕ, ಕಾರವಾರ