ಕಾರವಾರ ; ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರವಾರದ ಮಹಿಳೆ (71) ಗುರುವಾರ ಮೃತಪಟ್ಟಿದ್ದಾರೆ.
ವಯೋವೃದ್ಧೆ ಮಂಗಳೂರಿಗೆ ಚಿಕಿತ್ಸೆಗೆ ಹೋಗಿ ಬಂದಿದ್ದರು. ಇದನ್ನು ಅವರು ಮುಚ್ಚಿಟ್ಟು , ಕಾರವಾರ ಕ್ರಿಮ್ಸ ಆಸ್ಪತ್ರೆ ಸಮಾನ್ಯ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೂತ್ರಪಿಂಡದ ಸಮಸ್ಯೆಯಿಂದಾಗಿ ಕ್ರಿಮ್ಸ ಅಧೀನ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ದಾಖಲಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಯನ್ನು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ಈಕೆ ಮಂಗಳೂರಿಗೆ ಹೋಗಿ ಬಂದಿದ್ದು ಹಾಗೂ ಜ್ವರ ಇರುವುದನ್ನು ಕುಟುಂಬಸ್ಥರು ಮುಚ್ಚಿಟ್ಟಿದ್ದರು. ಆದರೆ, ಐಸಿಯುಗೆ ದಾಖಲಿಸಿದ ಬಳಿಕ ತಪಾಸಣೆ ನಡೆಸಿದಾಗ ಜ್ವರವಿದ್ದ ಕಾರಣ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಸೋಂಕು ದೃಢಪಟ್ಟಿರುವುದಾಗಿ ನಿನ್ನೆ ವರದಿ ಬಂದಿತ್ತು. ತೀವ್ರ ಅನಾರೋಗ್ಯ ಸ್ಥಿತಿಯಲ್ಲಿದ್ದ ಈಕೆಯನ್ನು ಕೊವಿಡ್ ಸೋಂಕು ದೃಢಪಟ್ಟ ನಂತರ ಕೋವಿಡ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ಆದರೆ, ಗುರುವಾರ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದರಿಂದ ವೆಂಟಿಲೇಟರ್ ವ್ಯವಸ್ಥೆಯಡಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವೃದ್ಧೆಯ ದೇಹ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈಕೆ ಪರೀಕ್ಷೆಗೊಳಪಟ್ಟಿದ್ದ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯ ಹಾಗೂ ಸ್ಯ್ಕಾನ್ ಸೆಂಟರ್ ನ ಸಿಬ್ಬಂದಿಗೂ ಇಂದು ಸೋಂಕು ದೃಢಪಟ್ಟಿತ್ತು.
ಶವ ಸುಡಲು ವಿರೋಧ :
ಈಕೆಯ ಶವ ಸುಡಲು ಗುಡ್ಡಳ್ಳಿ ದಾರಿಯ ಹೈಚರ್ಚ್ ಬಳಿ ಸ್ಮಾಶನಕ್ಕೆ ಹೋದಾಗ ಸ್ಥಳೀಯರು ವಿರೋಧಿಸಿದರು. ಲಾಟಿ ಚಾರ್ಜ್ ಮೂಲಕ ಜನರನ್ನು ಚದುರಿಸಿ, ಶವ ಸುಡಲಾಗಿದೆ. ಸ್ಥಳದಲ್ಲಿ ಪೋಲೀಸ್ ಕಾವಲು ಹಾಕಲಾಗಿದೆ.