Advertisement
Related Articles
Advertisement
ಹೇಗೆ ನಡೆಯುತ್ತದೆ ಮತ್ಸ್ಯಬೇಟೆ ಹಬ್ಬ?ಮೊನ್ನೆ ಕಿನ್ನರದ ಸುತ್ತಮುತ್ತಲಿನ ಜನರು ಗ್ರಾಮದ ಬಳಿಯ ಕಾಳಿ ನದಿ ಹಿನ್ನೀರಿನಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಏತಕ್ಕೆ ಎಂದರೆ ಮತ್ಸ್ಯಬೇಟೆಗೆ. ಕಿನ್ನರದಲ್ಲಿ ಗಿಂಡಿ ಮಹಾದೇವಿ ದೇವಸ್ಥಾನವಿದೆ. ಅಲ್ಲಿದ್ದ ಜನರು ದೇವರಿಗೆ ಪೂಜೆ ಆಗುವುದನ್ನೇ ಕಾಯುತ್ತಿದ್ದರು. ಬೆಳಗಿನ 9ರ ಸಮಯ. ಮಹಾದೇವಿಗೆ ಮೊದಲ ಪೂಜೆ ನಡೆಯುತಿದ್ದಂತೆ ದೇವಸ್ಥಾನದ ಪಕ್ಕದ ನದಿಯ ಹಿನ್ನೀರ ಬಳಿ ಸೇರಿದ್ದ ಜನ ನದಿ ಒಡಲಿಗೆ ಇಳಿದು ಮತ್ಸ್ಯಬೇಟೆ ಪ್ರಾರಂಭಿಸಿದರು. ಮನೆಯಿಂದ ತಂದಿದ್ದ ಸಣ್ಣ ಸಣ್ಣ ಬಿದಿರಿನ ಎರಡು ಪುಟ್ಟ ಪುಟ್ಟ ದಿಂಡಿಗೆ ಚಿಕ್ಕ ಚಿಕ್ಕ ಬಲೆಯನ್ನು ಜೋಡಿಸಿ, ನದಿಯ ಹಿನ್ನೀರಿನ ಆಳಕ್ಕೆ ಇಳಿದರು. ಎದೆಯ ಮಟ್ಟದ ನೀರಿನಲ್ಲಿ ಬಲೆಯನ್ನು ಮುಳುಗಿಸಿ ಮೀನುಗಳಿಗಾಗಿ ಹುಡುಕಾಡಿದರು. ನದಿಯಿಂದ ಗ್ರಾಮದ ಸಿಹಿ ನೀರಿಗೆ ನುಗ್ಗದಂತೆ ಕಟ್ಟಿದ ಸಣ್ಣ ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿರುವ ಕಾರಣ, ಸಂಗ್ರಹವಾಗಿದ್ದ ನೀರಲ್ಲಿ ಪೊಗದಸ್ತಾಗಿ ಬೆಳೆದ ಮೀನುಗಳು ಬೇಟೆಗೆ ಇಳಿದವರ ಕಾಲನ್ನು ಮುದ್ದಿಸಿ ತಪ್ಪಿಸಿಕೊಳ್ಳುತ್ತಿದ್ದವು. ಕೈಗೆ ಸಿಕ್ಕು ಜಾರುವ ನೊಗಲಿ, ಮಡ್ಲೆ,ಕುರುಡೆ,ತಾಂಬುಸ್, ಸೀಗಡಿ, ಭುರಾಟೆ, ಕಾಗಳಸಿ, ಗೊಳಸು ಮೀನುಗಳನ್ನು ಹಿಡಿಯುತ್ತಿದ್ದರು. ಬಲೆಗೆ ಬಿದ್ದಿದ್ದ ಮೀನುಗಳನ್ನು ಮೇಲೆತ್ತಿ ಚೀಲಕ್ಕೆ ತುಂಬುತ್ತಾರಲ್ಲ; ಆ ದೃಶ್ಯವನ್ನು ನೋಡುವುದೇ ಸೊಗಸು. ನಂತರ ನಿಧಾನಕ್ಕೆ ಹಿನ್ನೀರು ಕಿರು ಬ್ಯಾರೇಜ್‌ನ ಗೇಟ್‌ಗಳಿಂದ ಹೊರ ಜಾರುತ್ತಿರುತ್ತದೆ. ನೀರು ಕಡಿಮೆಯಾಗುತ್ತಿದ್ದಂತೆ ಮೀನು ಹಿಡಿಯುವ ಭರಾಟೆಯೂ ಜೋರಾಗುತ್ತದೆ. ಸುಮಾರು 5 ಎಕರೆಯಷ್ಟು ವಿಸ್ತಾರ ಹೊಂದಿರುವ ಹಿನ್ನೀರಿನಲ್ಲಿ 3 ತಾಸು ನಡೆಯುವ ಮತ್ಸ್ಯಬೇಟೆಯ ಹಬ್ಬದಲ್ಲಿ ನೂರಾರು ಜನರು ಭಾಗಿಯಾಗಿ ಸಂಭ್ರಮಿಸುವುದು ಚೈತನ್ಯದ ಕ್ರೀಡೆ. ದೇವಸ್ಥಾನದ ಪ್ರದೇಶದಲ್ಲಿ ತುಂಬಿಕೊಂಡಿದ್ದ ಹಿನ್ನೀರನ್ನು ಕಿಂಡಿ ಅಣೆಕಟ್ಟಿನಿಂದ ನಿಧಾನಕ್ಕೆ ಖಾಲಿ ಮಾಡುವ ಮುನ್ನ ಬಲೆ ಹಾಗೂ ಸಾಂಪ್ರದಾಯಿಕ ಬುಟ್ಟಿಗಳನ್ನು ಬಳಸಿ ಮತ್ಸ್ಯಬೇಟೆ ನಡೆಯುತ್ತದೆ. ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದನೂರಾರು ಜನರು ಆಗಮಿಸಿರುತ್ತಾ¤ರೆ. ಎಲ್ಲರೂ ಮತ್ಸé ಬೇಟೆಯ ಸಂದರ್ಭವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ನಂತರ, ಬೇಟೆಯಾಡಿದ ಮೀನುಗಳನ್ನು ಕೊಂಡು ಮನೆಗೆ ತೆರಳಿ, ವಿಶಿಷ್ಟ ಅಡುಗೆ ತಯಾರಿಸಿ ಹಬ್ಬದೂಟ ಸವಿಯುತ್ತಾರೆ. ಭಿನ್ನ ಸಮುದಾಯಗಳ, ಸಂಸ್ಕೃತಿಗಳ ಸಮ್ಮಿಲನ
ಕಿನ್ನರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ವಿಶಿಷ್ಟ ಸಂಸ್ಕೃತಿಯ ಜನಾಂಗಗಳಾದ ಪಡ್ತಿ, ಗುನಗಿ, ಭಂಡಾರಿ, ಕೋಮಾರಪಂಥ, ದೇವಳಿ, ಕೊಂಕಣ್ ಮರಾಠ ಸೇರಿದಂತೆ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಜನರು , ಸುತ್ತಮುತ್ತಲಿನ ಗ್ರಾಮಗಳ ಯುವಕರು, ಮಹಿಳೆಯರು, ಮಕ್ಕಳು, ಹಿರಿಯರು ಹೀಗೆ ಎಲ್ಲ ವಯೋಮಾನದವರೂ ಮೀನು ಹಿಡಿದು ಸಂಭ್ರಮಿಸುವುದು ವಾಡಿಕೆ. ಸುಮಾರು 5 ಎಕರೆ ಪ್ರದೇಶದ ಹಿನ್ನೀರಿನಲ್ಲಿ 3 ಗಂಟೆಗಳ ಕಾಲ ನಡೆದ ಮತ್ಸ್ಯಬೇಟೆ ನಡೆಯುತ್ತದೆ. ಇಲ್ಲಿ ಪಾರಂಪರಿಕವಾಗಿ ಮೀನು ಹಿಡಿಯುವ ವೃತ್ತಿಯ ಮೀನುಗಾರ ಸಮುದಾಯದ ಪಡ್ತಿ ಸಮಾಜವಲ್ಲದೇ ಇತರೆ ಸಮುದಾಯದವರು ಸಣ್ಣ ಎಂಡಿ, ದಾಂಡಿಬಲೆ, ಕಟಾಳೆ ಬಲೆಗಳ ಮೂಲಕ ಮೀನುಗಳನ್ನು ಬೇಟೆಯಾಡಿ ಸಂಗ್ರಹಿಸುತ್ತಾರೆ. ಎಲ್ಲರೂ ಅತ್ಯಂತ ಉತ್ಸಾಹದಿಂದ ಮೀನು ಹಿಡಿಯಲು ಮುಂದಾಗುತ್ತಾರೆ. ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಈ ಮತ್ಸ್ಯಬೇಟೆಯಲ್ಲಿ ಕ್ವಿಂಟಲ್ ಪ್ರಮಾಣದಲ್ಲಿ ಮೀನು ಹಿಡಿಯಲಾಗುತ್ತದೆ. ನಂತರ ಇದನ್ನು ಮಾರಾಟ ಮಾಡುತ್ತಾರೆ. ಇಡೀ ಮತ್ಸೋéತ್ಸವವನ್ನು ಗಿಂಡಿ ಮಹಾದೇವಿ ದೇವಸ್ಥಾನದ ವತಿಯಿಂದ ನಡೆಸಲಾಗುತ್ತದೆ. ಸಂಗ್ರಹವಾದ ಮೀನುಗಳನ್ನು ಗ್ರಾಮಸ್ಥರು, ಪಕ್ಕದ ಊರಿನವರು ಹಾಗೂ ಕಾರವಾರದ ಮೀನು ಖರೀದಿಸುತ್ತಾರೆ. ಮಳೆಗಾಲದ ಅವಧಿಯಲ್ಲಿ ಸಹಜವಾಗಿ ನದಿ ತುಂಬಿ ಹರಿಯುತ್ತದೆ. ಮಳೆಗಾಲ ಮುಗಿದು ಅಕ್ಟೋಬರ್ ಬರುತ್ತಿದ್ದಂತೆ ಇಲ್ಲಿ ಮೀನುಬೇಟೆಗೆ ನಿಷೇಧ ಹೇರಲಾಗುತ್ತದೆ. ಅಂದರೆ ಅಕ್ಟೋಬರ್ ನಿಂದ ಏಪ್ರಿಲ್ ತನಕ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ನಂತರ ಮೇ ತಿಂಗಳಿನಲ್ಲಿ ಒಂದು ದಿನವನ್ನು ಮೀನು ಬೇಟೆಗೆ ದಿನ ಗುರುತಿಸಲಾಗುತ್ತದೆ. ಗ್ರಾಮದ ಹಿರಿಯರ ಈ ಸಂಪ್ರದಾಯವನ್ನು ಯಾರೂ ಮೀರುವುದಿಲ್ಲ. ವರ್ಷಕ್ಕೆ ಒಮ್ಮೆ ನದಿಯ ಹಿನ್ನೀರಿನಲ್ಲಿ ನಡೆವ ಮತ್ಸ್ಯಬೇಟೆ ನೋಡಲೆಂದೇ ಹಲವರು ಕಿನ್ನರ ಗ್ರಾಮಕ್ಕೆ ಆಗಮಿಸುತ್ತಾರೆ. ಆಳೆತ್ತರದ ನೀರಲ್ಲಿ ಕೆಲವರು ಮುಳುಗಿ ಮೀನನ್ನು ಹಿಡಿದು ದಡದಲ್ಲಿ ನಿಂತವರಿಗೆ ತೋರಿಸಿ ಸಂಭ್ರಮಿಸುವುದುಂಟು. ವರ್ಷದ ಬಹುತೇಕ ದಿನ ಸಮುದ್ರದ ನೀರಲ್ಲಿ ಬೆಳೆದ ಮೀನನ್ನು ತಿನ್ನುವ ಜನರು, ನದಿಯ ಸಿಹಿ ನೀರಿನಲ್ಲಿ ಬೆಳೆವ ವಿಶಿಷ್ಟ ಬಗೆಯ ಮೀನುಗಳ ಖರೀದಿಗೆಂದೇ ಆಗಮಿಸಿರುತ್ತಾರೆ. ನದಿಯ ನೀರಿನ ಮೀನಿಗೆ ವಿಶಿಷ್ಟ ರುಚಿಯನ್ನು ಅರಿತವರು ವರ್ಷವಿಡೀ ಕಾದು ಕಿನ್ನರ ಗ್ರಾಮದ ಮತ್ಸ್ಯಬೇಟೆ ನೋಡಲು ಆಗಮಿಸಿರುತ್ತಾರೆ. ಹೀಗೆ ಮನೆಗೆ ಮರಳುವಾಗ ಕನಿಷ್ಠ ಒಂದು ಅಥವಾ ಎರಡು ಕೆ.ಜಿಯಷ್ಟು ಮೀನನ್ನು ಕೊಳ್ಳುವುದು ವಾಡಿಕೆ. ದೇವರಿಗೆ ಒಂದು ಪಾಲು
ಮತ್ಸ್ಯಬೇಟೆಯಲ್ಲಿ ದೊರೆತ ಎಲ್ಲಾ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋಗಬಾರದು ಎಂಬ ನಿಯಮ ಸಹ ಇಲ್ಲಿ ಜಾರಿಯಲ್ಲಿದೆ. ಇದರಲ್ಲಿ ದೊರೆತ ಮೀನಿನಲ್ಲಿ ಒಂದು ಪಾಲನ್ನು ದೇವರಿಗೆ ಅರ್ಪಿಸಲಾಗುತ್ತದೆ. ದೇವಸ್ಥಾನ ಕಮಿಟಿಯವರು ನೇಮಿಸಿದ ಸದಸ್ಯರು ಮುಂದೆ ನಿಂತು ಸಾರ್ವಜನಿಕರು ಬೇಟೆಯಾಡಿದ ಮೀನಿನಲ್ಲಿ ಒಂದು ಪಾಲನ್ನು ಪಡೆಯುತ್ತಾರೆ. ಉಳಿದ ಮೀನುಗಳನ್ನು ಮನೆಗೆ ತೆಗೆದುಕೊಂಡ ಹೋಗಿ ಬಗೆ ಬಗೆಯ ಖಾದ್ಯ ತಯಾರಿಸಿ ಸವಿಯುತ್ತಾರೆ. ದೇವಸ್ಥಾನಕ್ಕೆ ಕೊಟ್ಟ ಮೀನಿನ ಪಾಲನ್ನು ದೇವಸ್ಥಾನ ಸಮಿತಿ ಹರಾಜು ಹಾಕುತ್ತದೆ. ನಾಗರಾಜ್ ಹರಪನಹಳ್ಳಿ