“ಇದೊಂದು ಮುಗ್ಧ ಮನಸುಗಳ ನಡುವಿನ ಪ್ರೀತಿಯ ಕಥೆ. ಈ ಚಿತ್ರಕ್ಕಾಗಿ ವರ್ಷಗಟ್ಟಲೆ ಕಾದು, ಅದ್ಭುತ ತಾಣಗಳಲ್ಲೇ ಚಿತ್ರೀಕರಿಸಿದ್ದೇನೆ. ನನ್ನ ಕನಸು ಇದೀಗ ಪರದೆ ಮೇಲೆ ನನಸಾಗುತ್ತಿದೆ…’
– ಹೀಗೆ ಹೇಳಿಕೊಂಡರು ನಿರ್ದೇಶಕ ಕಮ್ ನಿರ್ಮಾಪಕ ದೇವರಾಜ್ ಪೂಜಾರಿ. ಅವರು ಹೇಳಿದ್ದು, ಈ ವಾರ ತೆರೆಗೆ ಬರುತ್ತಿರುವ “ಕಿನಾರೆ’ ಚಿತ್ರ ಕುರಿತು. ವರ್ಷದ ಹಿಂದೆ ಮಾಧ್ಯಮ ಮುಂದೆ ಬಂದಿದ್ದ ದೇವರಾಜ್ ಪೂಜಾರಿ, ತಮ್ಮ ತಂಡದೊಂದಿಗೆ ಚಿತ್ರ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ಮೊದಲು ಅವರೇ ಮಾತಿಗೆ ನಿಂತರು. “ಇಲ್ಲಿ ನಿರ್ಮಾಪಕರ್ಯಾರೂ ಇಲ್ಲ. ಎಲ್ಲರೂ ಸೇರಿ ಸಿನಿಮಾ ಮಾಡಿದ್ದೇವೆ. ಸುಮ್ಮನೆ ಏನೋ ಮಾಡಬೇಕು ಅಂತ ಮಾಡಿಲ್ಲ. ಗುಣಮಟ್ಟದ ಚಿತ್ರ ಕೊಡಬೇಕು, ಕಥೆಯಲ್ಲಿ ಗಟ್ಟಿತನ ಇರಬೇಕು ಅಂದುಕೊಂಡೇ “ಕಿನಾರೆ’ ರೂಪಿಸಿದ್ದೇವೆ. ಇಲ್ಲಿ ಹೊಸಕಥೆ, ಹೊಸ ವಿಚಾರ, ಹೊಸ ಪ್ರಯೋಗ ಮೇಳೈಸಿದೆ. ಚಿತ್ರ ನೋಡಿದವರಿಗೊಂದು ಬಾಲ್ಯದ ನೆನಪು, ಪ್ರೀತಿಯ ಅನುಭವ ಕಟ್ಟಿಕೊಡುತ್ತದೆ. ಇಲ್ಲಿ ಕಥೆಯೇ ಹೀರೋ. ವಿಭಿನ್ನ ಪಾತ್ರಗಳದ್ದೇ ಕಾರುಬಾರು. ಕಲಾತ್ಮಕತೆಯ ಜತೆಗೆ ಮನರಂಜನೆಯನ್ನೂ ಕಟ್ಟಿಕೊಡಲಿದೆ. ಒಬ್ಬ ಮುಗ್ಧ ಹುಡುಗನ ನಡುವೆ ಪ್ರೀತಿ ಚಿಗುರಿದಾಗ, ಏನೆಲ್ಲಾ ಆಗಿಹೋಗುತ್ತವೆ ಎಂಬುದು ಕಥೆ. ಮಾತುಗಳಿಗಿಂತ ಭಾವನೆಗಳೇ ಇಲ್ಲಿ ಹೆಚ್ಚು ಮಾತಾಡುತ್ತವೆ. ಬಹುತೇಕ ಕರಾವಳಿ ಸುತ್ತ ಚಿತ್ರೀಕರಣ ನಡೆದಿದೆ. ಎಲ್ಲವೂ ಹೊಸದಾಗಿ ಕಾಣಿಸುವಷ್ಟರ ಮಟ್ಟಿಗೆ “ಕಿನಾರೆ’ ಮೂಡಿ ಬಂದಿದೆ’ ಎಂಬುದು ದೇವರಾಜ್ ಪೂಜಾರಿ ಮಾತು.
ಚಿತ್ರದ ನಾಯಕ ಸತೀಶ್ ರಾಜ್‌ಗೆ ಇದು ಮೊದಲ ಚಿತ್ರವಂತೆ. ಅವರಿಗೆ ಈ ಸಿನಿಮಾ, ಕನ್ನಡಕ್ಕೊಂದು ಹೊಸದಾಗಿ ಕಾಣಲಿದೆ ಎಂಬ ನಂಬಿಕೆಯಂತೆ. “ಇದೊಂದು ವಿಭಿನ್ನ ಕಥೆ, ಭಿನ್ನವಾಗಿರುವ ಪಾತ್ರವಿದೆ. ಸಾಕಷ್ಟು ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದೇನೆ. ಒಳ್ಳೆಯ ತಂಡ ನನಗೆ ಸಿಕ್ಕಿದೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ’ ಎಂದರು ಸತೀಶ್ ರಾಜ್.
ನಾಯಕಿ ಗೌತಮಿಗೂ ಇದು ಮೊದಲ ಸಿನಿಮಾವಂತೆ. ಅವರಿಗಿಲ್ಲಿ ಸಾಕಷ್ಟು ಹೊಸ ಅನುಭವ ಆಗಿದೆಯಂತೆ. “ಸುಂದರ ಮನಸ್ಸುಗಳ ನಡುವೆ ಬರುವ ಪ್ರೀತಿಯ ತಿಲ್ಲಾನ ಕುರಿತು ಕಥೆ ಸಾಗಲಿದೆ. ಎಲ್ಲಾ ಚಿತ್ರಗಳಲ್ಲಿರುವಂತೆ ಇಲ್ಲಿ ಪಾತ್ರಗಳಾಗಲಿ, ಕಥೆಯಾಗಲಿ ಅಥವಾ ತಾಣಗಳಾಗಲಿ ಇಲ್ಲ. ಪ್ರತಿಯೊಂದು ಹೊಸತನ ಎನ್ನುವಂತೆ ಮೂಡಿಬಂದಿದೆ. ಅದೇ ಚಿತ್ರದ ಸ್ಪೆಷಲ್’ ಎಂದರು ಗೌತಮಿ.
ಅಪೇಕ್ಷಾ ಒಡೆಯರ್ ಇಲ್ಲಿ ಡಾಕ್ಟರ್ ಆಗಿ ನಟಿಸಿದ್ದಾರೆ. ಕುಂದಾಪುರ ಸುತ್ತಮುತ್ತಲ ತಾಣಗಳು ಇಲ್ಲಿ ಹೈಲೆಟ್. ಒಂದು ಗಟ್ಟಿ ಕಥೆ ಮತ್ತು ವಿಶೇಷವಾಗಿರುವ ಚಿತ್ರದಲ್ಲಿ ನಾನಿರುವುದು ಖುಷಿ’ ಕೊಟ್ಟಿದೆ ಅಂದರು ಅಪೇಕ್ಷಾ. ಶಮಂತ್ ಶೆಟ್ಟಿ ಅವರಿಗೆ ಇಲ್ಲಿ ನಾಯಕ, ನಾಯಕಿಯನ್ನು ರೇಗಿಸುವ ಪಾತ್ರ ಸಿಕ್ಕಿದೆಯಂತೆ. ಸಂಗೀತ ನಿರ್ದೇಶಕ ಸುರೇಂದ್ರನಾಥ್ ಇಲ್ಲಿ 6 ಹಾಡುಗಳನ್ನು ಕೊಟ್ಟಿದ್ದಾರಂತೆ. ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಕಲ್ಯಾಣ್, ಯೋಗರಾಜ್‌ಭಟ್ ಗೀತೆ ರಚಿಸಿದ್ದಾಗಿ ಹೇಳಿಕೊಂಡರು. ಇನ್ನು, ಅಭಿಷೇಕ್ ಕಾಸರಗೋಡು ಚಿತ್ರಕ್ಕೆ ಕ್ಯಾಮೆರಾ ಹಿಡಿದ ಬಗೆ ವಿವರಿಸಿದರು.