Advertisement

ಕರಾವಳಿಯ ಬಂದರುಗಳಲ್ಲೂ ತೇಲುವ ಜೆಟ್ಟಿ ನಿರ್ಮಾಣ : ಚೆನ್ನೈಯ ಐಐಟಿ ತಂಡದಿಂದ ಡಿಪಿಆರ್‌

03:30 PM Aug 09, 2022 | Team Udayavani |

ಉಡುಪಿ : ಕರಾವಳಿಯ ಮೀನುಗಾರಿಕೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿ ಪೂರಕವಾಗುವಂತೆ ಉಭಯ ಜಿಲ್ಲೆಗಳ ಪ್ರಮುಖ ಬಂದರುಗಳಲ್ಲಿ ತೇಲುವ ಜೆಟ್ಟಿ ನಿರ್ಮಾಣ ಸಂಬಂಧ ಸರಕಾರದ ಹಂತದಲ್ಲಿ ಚರ್ಚೆಯಾಗಿ, ತಾತ್ವಿಕ ಅನುಮೋದನೆಯೂ ಸಿಕ್ಕಿದೆ.

Advertisement

ಉಡುಪಿ ಜಿಲ್ಲೆಯ ಮಲ್ಪೆ, ಮರವಂತೆ, ಕೋಡಿ, ಹಂಗಾರಕಟ್ಟೆಯಲ್ಲಿ ಮತ್ತು ದ.ಕ. ಜಿಲ್ಲೆಯ ಉಳ್ಳಾಲ, ತಣ್ಣೀರುಬಾವಿ, ಕೂಳೂರು, ಮಂಗಳೂರು ಹಳೇ ಬಂದರು, ಬೇಂಗ್ರೆ, ಸುಲ್ತಾನಬತ್ತೇರಿ ಮೊದಲಾದ ಸ್ಥಳಗಳಲ್ಲಿ ತೇಲುವ ಜೆಟ್ಟಿ ನಿರ್ಮಾಣವಾಗಲಿದೆ.

ಗೋವಾದಲ್ಲಿ ತೇಲುವ ಜೆಟ್ಟಿ ಇದೆ. ಸದ್ಯ ಕರ್ನಾಟಕದ ಯಾವುದೇ ಬಂದರಿನಲ್ಲಿ ತೇಲುವ ಜೆಟ್ಟಿ ಇಲ್ಲ. ಮಲ್ಪೆ, ಗಂಗೊಳ್ಳಿ, ಮಂಗಳೂರು ಸಹಿತ ಜಿಲ್ಲೆಯ ಪ್ರಮುಖ ಬಂದರುಗಳಲ್ಲಿ ಮೀನುಗಾರಿಕೆಯ ಋತು ಮುಗಿಯುತ್ತಿದ್ದಂತೆ ಬೋಟು ಲಂಗರು ಹಾಕಲು ಸ್ಥಳವೇ ಇರುವುದಿಲ್ಲ. ಜೆಟ್ಟಿಗಳನ್ನು ವಿಸ್ತರಿಸುವುದು, ಹೊಸ ಜೆಟ್ಟಿ ನಿರ್ಮಾಣ ಇತ್ಯಾದಿ ಬೇಡಿಕೆಗಳು ಸ್ಥಳೀಯರಿಂದ ಬರುತ್ತಲೇ ಇರುತ್ತವೆ. ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರದ ಸಹಕಾರದೊಂದಿಗೆ ಉಭಯ ಜಿಲ್ಲೆಗಳ ಪ್ರಮುಖ ಬಂದರುಗಳಲ್ಲಿ ತೇಲುವ ಜೆಟ್ಟಿ ನಿರ್ಮಾಣ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಚೆನ್ನೈ ಐಐಟಿಯಿಂದ ಡಿಪಿಆರ್‌
ತೇಲುವ ಜೆಟ್ಟಿ ನಿರ್ಮಾಣ ಮತ್ತು ಅದರ ಕಾರ್ಯಸಾಧ್ಯತೆಗೆ ಸಂಬಂಧಿಸಿ ಈಗಾಗಲೇ ಎರಡು ಜಿಲ್ಲೆಗಳ ಮೀನುಗಾರಿಕೆ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದಿಂದ ವರದಿಯನ್ನು ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾದ (ವಿಸ್ತೃತ ಯೋಜನ ವರದಿಯನ್ನು (ಡಿಪಿಆರ್‌) ಚೆನ್ನೈನ ಐಐಟಿ ತಂಡದಿಂದ ಮಾಡಲಾಗುತ್ತಿದೆ. ತೇಲುವ ಜೆಟ್ಟಿಯ ನಿರ್ಮಾಣ, ತಗಲುವ ವೆಚ್ಚ, ವಿನ್ಯಾಸ, ಕಾರ್ಯಸಾಧ್ಯತೆ, ಯಾವ ಮಾದರಿಯ ದೋಣಿಗಳನ್ನು ಕಟ್ಟಬಹುದು ಎಂಬಿತ್ಯಾದಿ ಎಲ್ಲವನ್ನು ಚೆನ್ನೈನ ಐಐಟಿ ತಂಡ ಸಿದ್ಧಪಡಿಸಲಿವೆ. ನಿರ್ಮಾಣ ಕಾಮಗಾರಿ ಮಾತ್ರ ಸ್ಥಳೀಯವಾಗಿ ನಡೆಯಲಿದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತೇಲುವ ಜೆಟ್ಟಿಗಳಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಸಣ್ಣ ಮತ್ತು ದೊಡ್ಡ ಬೋಟ್‌ಗಳನ್ನು ಲಂಗರು ಹಾಕಬಹುದು. ಸ್ಥಳೀಯ ಬಂದರಿನ ಸಾಮರ್ಥ್ಯ ಆಧಾರದಲ್ಲಿ (ಕೆಲವು ಬಂದರಿಗೆ ಬೋಟ್‌ಗಳು ಪ್ರವೇಶಿಸುವುದಿಲ್ಲ) ತೇಲುವ ಜೆಟ್ಟಿ ನಿರ್ಮಾಣ ಮಾಡಲಾಗುತ್ತದೆ. ದೋಣಿಗಳಿಂದ ಮೀನು ಖಾಲಿ ಮಾಡುವುದು ಸಹಿತ ಎಲ್ಲವೂ ಜೆಟ್ಟಿಯಲ್ಲೇ ನಡೆಯುತ್ತದೆ. ತೇಲುವ ಜೆಟ್ಟಿಯು ನದಿಯಿಂದ ಸ್ವಲ್ಪ ದೂರದವರೆಗೂ ಇರುವುದರಿಂದ ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿ ಪಡಿಸಲು ಅವಕಾಶವಿದೆ.

Advertisement

ಕೋಸ್ಟಲ್‌ ಬರ್ತ್‌
ಮೀನುಗಾರಿಕೆ ಹೊರತುಪಡಿಸಿ ಇತರ ವಸ್ತುಗಳನ್ನು ರಫ್ತು, ಆಮದು ಮಾಡಿಕೊಳ್ಳಲು ಪೂಕರಕವಾಗುವ ಕೋಸ್ಟಲ್‌ ಬರ್ತ್‌( ವಾಣಿಜ್ಯ ಉದ್ದೇಶಿತ ಬಂದರು ಜೆಟ್ಟಿ) ಸದ್ಯ ಮಂಗಳೂರು ಮತ್ತು ಕಾರವಾರದಲ್ಲಿದೆ. ಗಂಗೊಳ್ಳಿಯಲ್ಲೂ ಒಂದಿತ್ತು. ಸದ್ಯ ಅದು ನಿರುಪಯುಕ್ತವಾಗಿದೆ. ಈಗ ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರಕಾರದ 50:50 ಅನುದಾನದಲ್ಲಿ ಹಂಗಾರಕಟ್ಟೆಯಲ್ಲಿ 78.28 ಕೋ.ರೂ. ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಟೆಂಡರ್‌ ಪ್ರಗತಿಯಲ್ಲಿದೆ. ಗಂಗೊಳ್ಳಿಯಲ್ಲಿ ಕೋಸ್ಟಲ್‌ ಬರ್ತ್‌ ನಿರ್ಮಾಣಕ್ಕೆ 95.88 ಕೋ.ರೂ. ಕಾಮಗಾರಿಗೆ ಅನುಮೋದನೆ ಸಿಕ್ಕಿದೆ.

ಮಂಗಳೂರಿನಲ್ಲಿ ಮೊದಲು ಆರಂಭ
ತೇಲುವ ಜೆಟ್ಟಿ ನಿರ್ಮಾಣ ಸಂಬಂಧಿಸಿದಂತೆ ಉಭಯ ಜಿಲ್ಲೆಗಳಿಂದ 10ಕ್ಕೂ ಅಧಿಕ ಪ್ರಸ್ತಾವನೆ ಕೇಂದ್ರಕ್ಕೆ ಹೋಗಿದೆ. ಆರಂಭದಲ್ಲಿ ಮಂಗಳೂರಿನ ಎರಡು ಅಥವಾ ಮೂರು ಕಡೆ ತೇಲುವ ಜೆಟ್ಟಿ ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ತಾತ್ವಿಕ ಅನುಮೋದನೆಯೂ ದೊರೆತಿದೆ. ಡಿಪಿಆರ್‌ ಆಧಾರದಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಕಾಮಗಾರಿ ಶುರುವಾಲಿದೆ ಎಂದು ಮೂಲಗಳು ತಿಳಿಸಿವೆ.

ತೇಲುವ ಜೆಟ್ಟಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಚೆನ್ನೈನ ಐಐಟಿ ತಂಡವು ಡಿಪಿಆರ್‌, ವಿನ್ಯಾಸ ಇತ್ಯಾದಿ ಸಿದ್ಧಪಡಿಸುತ್ತಿವೆ.
-ಉದಯ ಕುಮಾರ್‌, ಎಇಇ, ಮೀನುಗಾರಿಕೆ ಇಲಾಖೆ, ಉಡುಪಿ

ಇದನ್ನೂ ಓದಿ : ಬಿಹಾರದಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಸರ್ಕಾರ ಪತನ; 4 ಗಂಟೆಗೆ ರಾಜ್ಯಪಾಲರ ಭೇಟಿ: ನಿತೀಶ್

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next