ಮೈಸೂರು: ಕೆನ್ ಇ ಮಾಬುನಿ ಶಿಟೋ ರಿಯು ಕರಾಟೆ ಸ್ಕೂಲ್ ಆಫ್ ಇಂಡಿಯಾ, ಆಲ್ ಇಂಡಿಯಾ ಕರಾಟೆ ಡು ಫೆಡರೇಷನ್ ಮತ್ತು ನ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಫ್ ಮೈಸೂರು ವತಿಯಿಂದ ಆಯೋಜಿಸಿರುವ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಚಾಲನೆ ದೊರೆಯಿತು.
ನಗರದ ಮಾನಂದವಾಡಿಯ ಎನ್‌ಐಇ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಕರಾಟೆ ಪಂದ್ಯಾವಳಿಗೆ ಸಂಸದ ಆರ್. ಧ್ರುವನಾರಾಯಣ್ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕರಾಟೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ.
ಹಿಂದೆ ಕೇವಲ ವಿದೇಶಗಳಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದ್ದ ಕರಾಟೆ ಕಲೆ ಇಂದು ಭಾರತ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ವ್ಯಾಪಿಸಿದೆ. ಆತ್ಮರಕ್ಷಣೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಕರಾಟೆ ಅತ್ಯಂತ ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಾಗಿದ್ದು, ತಮ್ಮ ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರು ಕರಾಟೆ ಕಲಿಯಬೇಕು ಎಂದರು.
ಪಂದ್ಯಾವಳಿಯಲ್ಲಿ ತಮಿಳುನಾಡು, ದೆಹಲಿ, ಒರಿಸ್ಸಾ, ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ, ಬಿಹಾರ, ಜಾರ್ಖಂಡ್, ಚಂಡೀಗಢ ಉತ್ತರಖಂಡ, ಗೋವಾ, ಗುಜರಾತ್ ಸೇರಿದಂತೆ ಇತರೆ 16 ರಾಜ್ಯಗಳ 500ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದಾರೆ.
ಆಲ್ ಇಂಡಿಯಾ ಕರಾಟೆ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಪಿ.ಆರ್.ರಮೇಶ್, ಜಿಲ್ಲಾ ಯುವಜನ ಸಂಯೋಜನಾಧಿಕಾರಿ ಎಂ.ಎನ್.ನಟರಾಜ್, ಎನ್‌ಐಇ ಗೌರವ ಕಾರ್ಯದರ್ಶಿ ರಾಮಚಂದ್ರ, ಎಐಕೆಎಫ್ ಉಪಾಧ್ಯಕ್ಷ ಗಣೇಶ್, ನಗರ ಪಾಲಿಕೆ ಸದಸ್ಯ ಸುನಿಲ್, ಕರಾಟೆ ಪಂದ್ಯಾವಳಿಯ ಮುಖ್ಯ ಆಯೋಜಕ ಆರ್.ರ್‍ಯಾಂಬೋ ಕಿರಣ್, ಚಂದ್ರು, ಶ್ರೀಕಂಠಪ್ರಸಾದ್ ಹಾಜರಿದ್ದರು.