ಕೋಟ: ಡಾ| ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಆಶ್ರಯದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೊಡಮಾಡುವ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವಿವಾದಗಳ ನಡುವೆ ಅ. 10ರಂದು ನಡೆಯಲಿದೆ.
ಪ್ರಕಾಶ್ ರೈ ಅವರನ್ನು ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ಕುರಿತು ಹಲವು ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಹೇಳಿದರೆ; ಕೆಲ ಸಂಘಟನೆಗಳು ಬೆಂಬಲಿಸುವುದಾಗಿ ತಿಳಿಸಿವೆ.
ಬಿಜೆಪಿ ಪ್ರಮುಖರು ಗೈರು: ಪ್ರಧಾನಿ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಪ್ರಕಾಶ್ ರೈ ಅವಮಾನಕಾರಿ ಹೇಳಿಕೆ ನೀಡಿರುವುದರಿಂದ ಕಾರ್ಯಕ್ರಮದ ಅತಿಥಿಗಳಾಗಿರುವ ಬಿಜೆಪಿಯ ನಾಯಕರು ಭಾಗವಹಿಸಬಾರದು ಎಂದು ಸೂಚನೆ ನೀಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ನಾನು ಭಾಗವಹಿಸುವುದಿಲ್ಲ ಎಂದಿದ್ದಾರೆ.
ಶಾಂತಿಯುತ ಪ್ರತಿಭಟನೆ: ಪ್ರಕಾಶ್ ರೈಗೆ ಕಾರಂತ ಹೆಸರಿನ ಪ್ರಶಸ್ತಿ ಪಡೆಯುವ ಯಾವುದೇ ಅರ್ಹತೆ ಇಲ್ಲ ಎನ್ನುವ ನಿಲುವಿಗೆ ಬದ್ಧ. ಹೀಗಾಗಿ ಶಾಂತಿಯುತವಾಗಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಲಾಗುವುದು ಎಂದು ಜೈ ಭಾರ್ಗವ ಬಳಗದ ಸಂಚಾಲಕ ಅಜಿತ್ ಶೆಟ್ಟಿ ಕಿರಾಡಿ, ಹಿಂಜಾವೇ ಜಿಲ್ಲಾ ಸಹಸಂಚಾಲಕ ಶಂಕರ್ ಕೋಟ ಹಾಗೂ ಜಿಲ್ಲಾ ಪ್ರಮುಖ ರತ್ನಾಕರ ಕೋಟ ತಿಳಿಸಿದ್ದಾರೆ.ಕಾರ್ಯಕ್ರಮ ವನ್ನು ಮುಂದೂಡುವಂತೆ ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಆಗ್ರಹಿಸಿದ್ದಾರೆ.
ಪ್ರಕಾಶ್ ರೈಗೆ ಬೆಂಬಲ: ಪ್ರಶಸ್ತಿ ಸ್ವೀಕರಿಸಲು ಬರುವ ಪ್ರಕಾಶ್ ರೈ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾಕ ಸಂಘಟನೆಗಳ ಒಕ್ಕೂಟದ (ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ) ಉಡುಪಿ ಜಿಲ್ಲಾ ಘಟಕ ತಿಳಿಸಿದ್ದು, ಸೂಕ್ತ ಭದ್ರತೆ ಕಲ್ಪಿಸುವಂತೆ ಜಿಲ್ಲಾಡಳಿತವನ್ನು ವಿನಂತಿಸಿದೆ. ರೈ ಅವರಿಗೆ ಪ್ರಶಸ್ತಿ ಪ್ರದಾನಿಸದೆ ಅವಮಾನ ಮಾಡಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಮತಾ ಸೈನಿಕದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಅವರು ಎಚ್ಚರಿಸಿದ್ದಾರೆ.
ಸೂಕ್ತ ಭದ್ರತೆ: ಕಾರ್ಯಕ್ರಮ ಶಾಂತಿಯುತವಾಗಿ ನಡೆಯುವಂತೆ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗುವುದು ಎಂದು ಉಡುಪಿ ಎಸ್ಪಿ ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಪ್ರಶಸ್ತಿ ನೀಡುವ ನಿರ್ಧಾರವನ್ನು ಮರು ವಿಮರ್ಶಿಸಬೇಕು,
ಸಮಾರಂಭವನ್ನು ಮುಂದೂಡಬೇಕು.
ಶೋಭಾ ಕರಂದ್ಲಾಜೆ, ಸಂಸದೆ