Advertisement
ಕಾರಂತ ಕಲಾಭವನದಲ್ಲಿ ಕಾರಂತ ಲೋಕಕೋಟ್ಯಂತರ ವೆಚ್ಚದಲ್ಲಿ ಈ ಸುಂದರವಾದ ಕಾರಂತ ಕಲಾಭವನ ನಿರ್ಮಿಸಲಾಗಿದ್ದು, ಕೋಟತಟ್ಟು ಗ್ರಾ.ಪಂ., ಕಾರಂತ ಟ್ರಸ್ಟ್ ಆಶ್ರಯದಲ್ಲಿ ನಿರ್ವಹಣೆಗೊಳ್ಳುತ್ತಿದೆ. ಇಲ್ಲಿನ ಪ್ರವೇಶದ್ವಾರದಲ್ಲಿ ಒಳಹೊಕ್ಕುತ್ತಿದ್ದಂತೆ ಮರದ ಕಟ್ಟೆಯ ಮೇಲೆ ನಿರ್ಮಿಸಿದ ಮೂಕಜ್ಜಿಯ ಕನಸು ಕಾದಂಬರಿಯ ಚಿತ್ರಣದಂತಿರುವ ಚಿಕ್ಕ ಮಕ್ಕಳಿಗೆ ಕಥೆ ಹೇಳುವ ಅಜ್ಜಿಯ ಸಿಮೆಂಟಿನ ಕಲಾಕೃತಿ ನಮ್ಮನ್ನು ಸ್ವಾಗತಿಸುತ್ತದೆ. ಅಲ್ಲೇ ಪಕ್ಕದಲ್ಲಿ ಕಟ್ಟಡದ ಮಹಡಿಯ ಮೇಲೆ ಯಕ್ಷಗಾನದ ಜಟಾಯು ಮೋಕ್ಷದ ಚಿತ್ರಣದ ಸುಂದರ ಕಲಾಕೃತಿ ಇದೆ ಹಾಗೂ ಮೂರ್‍ನಾಲ್ಕು ದಶಕದ ಹಿಂದಿನ ಗ್ರಾಮೀಣ ಜೀವನ ಕ್ರಮದ ಗಾಡಿಕೂಸಣ್ಣನ ಜೋಡೆತ್ತಿನ ಗಾಡಿಯ ಫೈಬರ್ ಕಲಾಕೃತಿ ಇದೆ. ಪ್ರವೇಶ ದ್ವಾರದಲ್ಲಿ ತೆಂಕು-ಬಡಗಿನ ಪುಂಡುವೇಷದ ಸುಂದರವಾದ ಯಕ್ಷಗಾನದ ಮೂರ್ತಿಗಳಿವೆ.
ಕಲಾಭವನಕ್ಕೆ ಸಾಗುವ ದಾರಿಯ ಎಡಭಾಗದ ಕೆರೆಯ ಮಧ್ಯೆ ಶಿವರಾಮ ಕಾರಂತರ ಐದು ಅಡಿ ಎತ್ತರದ ಕಂಚಿನ ಪ್ರತಿಮೆ ಇದೆ. ಕಲಾಭವನಕ್ಕೆ ಆಗಮಿಸುವ ಗಣ್ಯರೆಲ್ಲರೂ ಕಾರಂತರ ಈ ಮೂರ್ತಿಗೆ ಪುಷ್ಪಾರ್ಚಣೆಗೈದು ಒಳಪ್ರವೇಶಿಸುತ್ತಾರೆ ಹಾಗೂ ಕೆರೆಯ ಮಗ್ಗಲಲ್ಲಿ 4 ವಿಶ್ರಾಂತಿ ದಿಬ್ಬಗಳಲ್ಲಿದ್ದು, ಮೊದಲ ದಿಬ್ಬದಲ್ಲಿ ಕಾರಂತರು ಕುಳಿತ ಭಂಗಿಯಲ್ಲಿರುವ ಶಿಲ್ಪಾಕೃತಿ ಇದೆ. ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದಿಟ್ಟ ಮೂಕಜ್ಜಿಯ ಕನಸುಗಳು ಕೃತಿಯ ಪುಸ್ತಕ ಕಾರಂಜಿ ಗಮನಸೆಳೆಯುತ್ತದೆ. ಅಲ್ಲಿಂದ ಎಡಗಡೆಯಲ್ಲಿ ಡೋಲು ಹಿಡಿದು ನಿಂತ ಚೋಮನದುಡಿಯ ಚೋಮನ ಕಲಾಕೃತಿ ಹಾಗೂ ಪಕ್ಕದಲ್ಲೇ ಊಯ್ನಾಲೆಯಲ್ಲಿ ಕುಳಿತ ಯಕ್ಷಗಾನದ ರಾಧಾ-ಕೃಷ್ಣರ ಶಿಲ್ಪಕಲಾಕೃತಿ ಗಮನಸೆಳೆಯುತ್ತದೆ. ಕಲಾಭವನದ ಎದುರಿನ ಗೋಡೆಯಲ್ಲಿ ಹುಚ್ಚು ಮನಸ್ಸಿನ ಹತ್ತು ಮುಖಗಳ ಕಲಾಕೃತಿ ಇದೆ. ಸುತ್ತ-ಮುತ್ತ ವಿವಿಧ ಪ್ರವಾಸಿ ತಾಣಗಳು
ಕಾರಂತ ಕಲಾಭವನ ಬೇಸಗೆ ರಜೆಯಲ್ಲಿ ಮಕ್ಕಳೊಂದಿಗೆ ಭೇಟಿ ನೀಡಲು ಉತ್ತಮ ತಾಣವಾಗಿದೆ. ಇಲ್ಲಿನ ಶಿಲ್ಪ ಕಲಾಕೃತಿ ಹಾಗೂ ಸುತ್ತಲಿನ ವಾತಾವರಣಗಳು ಮಕ್ಕಳಿಗೆ ಖುಷಿ ನೀಡುತ್ತವೆೆ. ಇಲ್ಲಿನ 2 ಕಿ.ಮೀ. ಆಸುಪಾಸಿನಲ್ಲಿ ಪಡುಕರೆ ಸಮುದ್ರ ಕಿನಾರೆ, ಅಮೃತೇಶ್ವರೀ ದೇವಸ್ಥಾನ ಹಾಗೂ ಐತಿಹಾಸಿಕ ಹಿರೇ ಮಹಾಲಿಂಗೇಶ್ವರ ದೇವಸ್ಥಾನವಿದ್ದು ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಂತಿವೆ. ಸಂಜೆ ವೇಳೆ ಭೇಟಿ ನೀಡಿದರೆ ಪಡುಕರೆ ಕಡಲ ಕಿನಾರೆಯಲ್ಲಿ ಸಂಜೆಯ ಸೂರ್ಯಾಸ್ತಮಾನವನ್ನು ಕಣ್ತುಂಬಿಕೊಳ್ಳಬಹುದು.
Related Articles
ಕಲಾಭವನದ ಒಳಗಡೆ ಚೋಮನ ದುಡಿ ಎನ್ನುವ ಕಿರು ಸಭಾಂಗಣವಿದ್ದು ಇಲ್ಲಿ ಮಕ್ಕಳ ಬೇಸಗೆ ಶಿಬಿರ, ಯಕ್ಷಗಾನ ತರಬೇತಿ, ಪ್ರವಾಸಿಗರಿಗೆ ಕಾರಂತರ ಸಾಕ್ಷ್ಯ ಚಿತ್ರಗಳ ಪ್ರದರ್ಶನ ವ್ಯವಸ್ಥೆ ಇದೆ. ಇದರ ಮಗ್ಗುಲಲ್ಲೆ “ಕುಡಿಯರ ಕೂಸು’ ಅಂಗನವಾಡಿ ಇದೆ. ಜತೆಗೆ “ಆರ್ಟ್ ಗ್ಯಾಲರಿ ಇದ್ದು ಇಲ್ಲಿ ಕಾರಂತರ ಅಮೂಲ್ಯ ಕಪ್ಪು ಬಿಳುಪಿನ ಫೂಟೋಗಳು ಹಾಗೂ ಖ್ಯಾತ ಚಿತ್ರಕಾರರು ಕಾರಂತರು ಮತ್ತು ಕಾರಂತರ ವಿಷಯಾಧಾರಿತವಾಗಿ ರಚಿಸಿದ ಚಿತ್ರಗಳನ್ನು ಪ್ರದರ್ಶನಗೊಳಿಸಲಾಗಿದೆ. ಪಕ್ಕದಲ್ಲಿ ರಂಗ ಮಂದಿರವಿದ್ದು ಇಲ್ಲಿ ವರ್ಷದ ಬಹುತೇಕ ದಿನಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ನಡೆಯುತ್ತಿದೆ ಹಾಗೂ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಲ್ಲಿಯೇ ನಡೆಯುತ್ತದೆ.
Advertisement
ಮಹಡಿಯ ವೆರಾಂಡದಲ್ಲಿ 8 ಮಂದಿ ಜ್ಞಾನಪೀಠ ಪುರಸ್ಕೃತರ ಪ್ರತಿಮೆಗಳಿವೆ ಹಾಗೂ ಕಾರಂತರು ಕ್ಯಾಮರಾ ಹಿಡಿದು ಕುಳಿತ ಕಲಾಕೃತಿ ಮತ್ತು ಮಕ್ಕಳಿಗೆ ಕಥೆ ಹೇಳುತ್ತಿರುವ ಮೂರ್ತಿ ಗಮನ ಸೆಳೆಯುತ್ತವೆ.