Advertisement

ಕಾರಂತರು ಗೆಜ್ಜೆ  ಕಟ್ಟಿದ ನೆಲ್ಲಿಕಟ್ಟೆ  ಶಾಲೆಗೆ ಸಂರಕ್ಷಣೆ ಭಾಗ್ಯ

03:45 AM Jul 02, 2017 | Harsha Rao |

ಪುತ್ತೂರು: ಕಡಲ ತಡಿಯ ಭಾರ್ಗವ ಡಾ| ಶಿವರಾಮ ಕಾರಂತ ಅವರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರ ನೆಲೆಯಾಗಿದ್ದ ನೆಲ್ಲಿಕಟ್ಟೆಯಲ್ಲಿರುವ ಪುತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಮೂಲ ಕಟ್ಟಡದ ಅಭಿವೃದ್ಧಿಗೆ 53 ಲಕ್ಷ ರೂ. ಸಿಎಸ್‌ಆರ್‌ ಅನುದಾನದ ಒದಗಿಸಲು ಜಿ.ಪಂ. ಎಂಆರ್‌ಪಿಎಲ್‌ಗೆ ಪ್ರಸ್ತಾವನೆ ಕಳುಹಿಸಿದೆ!

Advertisement

ಸಂರಕ್ಷಣೆಗೆ ಪ್ರಯತ್ನ
ನೂರೈವತ್ತು ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರಿನ ಮೊದಲ ಶಾಲೆ ಎಂಬ ಹೆಗ್ಗಳಿಕೆಯ ಈ ಕಟ್ಟಡ ದಿನೇ-ದಿನೇ ಕುಸಿಯುತ್ತಿದೆ. ಸಂರಕ್ಷಣೆಗೆ ಸಂಬಂಧಿಸಿ ಶಿಕ್ಷಣ ಇಲಾಖೆ, ಶಾಸಕರ ನೇತೃತ್ವದಲ್ಲಿ ಅನೇಕ ಪ್ರಯತ್ನ ನಡೆದಿತ್ತು. ಕಟ್ಟಡ ಕೆಡವದೇ ಪಾರಂಪರಿಕ ತಾಣ ವಾಗಿ ದುರಸ್ತಿಪಡಿಸುವ ನಿಟ್ಟಿನಲ್ಲಿ ಸರಕಾರದಿಂದ ಅನುದಾನ ತರಿಸುವ ಪ್ರಯತ್ನ ಸಾಗಿತ್ತು. ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಧಿಕಾರಿ ಡಾ| ಎಂ.ಆರ್‌. ರವಿ ಅವರು ಪಾರಂಪರಿಕ ಕಟ್ಟಡದ ಉಳಿವಿಗೆ ಮುತುವರ್ಜಿ ವಹಿಸಿ, ಅನುದಾನಕ್ಕೆ ಅಂದಾಜುಪಟ್ಟಿಯೊಂದಿಗೆ ಎಂಆರ್‌ಪಿಎಲ್‌ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪ್ರಸ್ತಾವನೆ ಹೀಗಿದೆ
150 ವರ್ಷದ ಕಟ್ಟಡ ನಾದುರಸ್ತಿಯಲ್ಲಿ ಇರುವುದರಿಂದ 53 ಲಕ್ಷ ರೂ. ಸಿಎಸ್‌ಆರ್‌ ಅನುದಾನ ಒದಗಿಸಲು ಸೂಚಿಸಲಾಗಿದೆ. ಲೋಕೋಪಯೋಗಿ ಇಲಾಖೆ ಮಂಗಳೂರು ಹಾಗೂ ಪಂಚಾಯತ್‌ ಎಂಜಿನಿಯರಿಂಗ್‌ ಇಲಾಖೆ ಅಂದಾಜು ದರಪಟ್ಟಿ ತಯಾರಿಸಿದೆ. ಕಟ್ಟಡದ ಛಾವಣಿಗೆ ಮರದ ವಾಲ್‌ಪ್ಲೇಟ್‌, ಪಕ್ಕಾಸು ಒದಗಿಸುವುದು, ಹೊಸ ಕಿಟಕಿ ಮತ್ತು ಬಾಗಿಲು, ಕಬ್ಬಿಣದ ರೀಪರ್‌ ಜೋಡಣೆ, ಹೊಸ ಪ್ಲೋರಿಂಗ್‌ ಒದಗಿಸುವುದು, ಹೊಸದಾಗಿ ಸಾರಣೆ ಮಾಡುವುದು, ಬಣ್ಣ ಬಳಿಯುವುದು, ಕಟ್ಟಡದ ತಡೆಗೋಡೆ ರಚನೆ ಮೊದಲಾದ ಕಾಮಗಾರಿಗಳನ್ನು ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.

ಕಟ್ಟಡದ ದುಃಸ್ಥಿತಿ
ನಗರದ ಕೇಂದ್ರ ಸ್ಥಾನದಲ್ಲಿರುವ 1865 ರಲ್ಲಿ ಬ್ರಿಟಿಷ್‌ ಸರಕಾರ ಆರಂಭಿಸಿದ್ದ ಗವರ್ನಮೆಂಟ್‌ ಎಲಿಮೆಂಟರಿ ಶಾಲೆ ಇದಾಗಿದ್ದು, 3.26 ಎಕ್ರೆ ವಿಶಾಲ ಜಾಗವಿದೆ. ಶಾಲೆಯ ಮೂಲ ಕಟ್ಟಡದ ಕಥೆಯಂತೂ ಹೇಳತೀರದಷ್ಟು ಹದಗೆಟ್ಟಿದೆ. ಕಳಚಿ ಬಿದ್ದ ಹೆಂಚುಗಳು, ಮುರಿದ ಪಕ್ಕಾಸು ಗಳು, ಕುಸಿದ ಗೋಡೆ, ಮಾಸಿದ ಬಣ್ಣ, ಅಸಹ್ಯ ಬರೆಹಗಳು ಐತಿಹಾಸಕ ಕಟ್ಟಡದ ದುಸ್ಥಿತಿಯನ್ನು ತೆರೆದಿಟ್ಟಿವೆ.

ನಗರದ ಸರಕಾರಿ ಬಸ್‌ ನಿಲ್ದಾಣದಿಂದ ಕೂಗಳತೆ ದೂರದಲ್ಲಿರುವ ಪ್ರಾಚೀನ ಸರಕಾರಿ ಶಾಲೆಗೆ ನೆಲ್ಲಿಕಟ್ಟೆ ಪ್ರೈಮರಿ ಶಾಲೆ ಎಂದು ಕರೆಯಲ್ಪಟ್ಟರೂ ದಾಖಲೆಯಲ್ಲಿ ಇದು ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಎಂದು ನಮೂದಾಗಿದೆ.

Advertisement

ಮೂರೂಕಾಲು ಎಕ್ರೆ ವಿಸ್ತೀರ್ಣದ ಮಧ್ಯದಲ್ಲಿ ಈ ಪ್ರಾಚೀನ ಕಟ್ಟಡವಿದ್ದರೆ ಸುತ್ತಲೂ ಮೈದಾನವಿದೆ. ಪಕ್ಕದಲ್ಲಿರುವ ಇನ್ನೊಂದು ಹಳೆಯ ಕಟ್ಟಡ ಮತ್ತು ಹೊಸ ಕಟ್ಟಡಗಳಲ್ಲಿ ಶಾಲಾ ತರಗತಿಗಳು ನಡೆಯುತ್ತಿವೆ. ಪ್ರಾಥಮಿಕ ಶಾಲೆಯ 1ರಿಂದ 4ನೇ ತರಗತಿಗಳು ಹೊಸ ಕೊಠಡಿ ಗಳಲ್ಲಿ ನಡೆಯುತ್ತಿದ್ದರೆ, 5,6 ಮತ್ತು 7ನೇ ತರಗತಿಗಳು ಇನ್ನೊಂದು ಹಳೆಯ ಕಟ್ಟದಲ್ಲಿ ನಡೆಯುತ್ತಿವೆ. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ, ಅಂಗನವಾಡಿ ಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮನ್ವಯ ಶಿಕ್ಷಣ ಕೇಂದ್ರ ಇತ್ಯಾದಿಗಳು ಇಲ್ಲಿವೆ.

ಅನೈತಿಕ ಚಟುವಟಿಕೆ
ತಾಲೂಕಿನ ಕೇಂದ್ರ ಸರಕಾರಿ ಶಾಲೆ ಇದಾಗಿದ್ದರೂ ಕುಸಿಯುವ ಹಂತ ದಲ್ಲಿರುವ ಶಾಲಾ ಕಟ್ಟಡದ ಒಳಭಾಗದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತದೆ ಎಂಬ ಆರೋಪವಿದ್ದು, ಇಲ್ಲಿನ ಗೋಡೆಗಳಲ್ಲಿ ಅಸಹ್ಯ ಬರಹಗಳಿವೆ. ಆವರಣಗೋಡೆ ಇಲ್ಲದೇ ಅಸುರಕ್ಷಿತವಾಗಿದೆ.

ಕಾಲೇಜುಗಳು ಆರಂಭ
2006ರಲ್ಲಿ ಮಂಜೂರಾದ ಸರಕಾರಿ ಮಹಿಳಾ ಪಿಯು ಕಾಲೇಜು ಕಾರ್ಯಾ ರಂಭ ಮಾಡಿದ್ದು ಇದೇ ಕಟ್ಟಡದಲ್ಲಿ. ಅನಂತರ ಅದು ಗುರುಭವನಕ್ಕೆ, ಅಲ್ಲಿಂದ ಮುಕ್ರಂಪಾಡಿಯ ಸ್ವಂತ ಕಟ್ಟಡಕ್ಕೆ ಹೋಯಿತು. 2007ರಲ್ಲಿ ಮಂಜೂರಾದ ಸರಕಾರಿ ಪ್ರಥಮದರ್ಜೆ ಕಾಲೇಜು ಕಾರ್ಯಾರಂಭ ಮಾಡಿದ್ದು ಇದೇ ಕಟ್ಟಡದಲ್ಲಿ. ಅನಂತರ ಅದು ಜಿಡೆಕಲ್ಲಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. 2014ರಲ್ಲಿ ಮಂಜೂರಾದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಾರ್ಯಾರಂಭ ಮಾಡಿದ್ದು ಕೂಡ ಇದೇ ಕಟ್ಟಡದಲ್ಲಿ. ಅದು ಹಳೆ ತಾಲೂಕು ಕಚೇರಿಗೆ ಸ್ಥಳಾಂತರಗೊಂಡಿತು.

ಕಾರಂತರ ಕರ್ಮಭೂಮಿ
ಶಾಲಾ ಕಟ್ಟಡ ಕಡಲತಡಿಯ ಭಾರ್ಗವ ಡಾ| ಕೆ. ಶಿವರಾಮ ಕಾರಂತರ ಕರ್ಮಭೂಮಿಯೂ ಆಗಿತ್ತು. ಇಲ್ಲಿಗೆ ಬಂದು ಹೋಗುತ್ತಿದ್ದ ಕಾರಂತರು ನಾನಾ ರಂಗ ಭೂಮಿ ಚಟುವಟಿಕೆ ಇಲ್ಲಿ ನಡೆಸಿದ್ದರು. ಪುತ್ತೂರಿನ ನಾಡಹಬ್ಬ ಚಟುವಟಿಕೆಗಳು ಇದೇ ಶಾಲೆಯಲ್ಲಿ ನಡೆಯುತ್ತಿತ್ತು. ರಾಜ್ಯದ ಖ್ಯಾತ ಸಾಹಿತಿಗಳು ಇಲ್ಲಿಗೆ ಬಂದಿದ್ದರು. ಇಲ್ಲಿನ ಕಟ್ಟಡದೊಳಗಿನ ಸಭಾಂಗಣ ವಿಶಿಷ್ಟ ರೀತಿಯಲ್ಲಿ ನಿರ್ಮಾಣಗೊಂಡಿತ್ತು. ಹಾಗಾಗಿ ಕಾರಂತರ ಅಭಿಮಾನಿಗಳು ಕಟ್ಟಡವನ್ನು ಕೆಡವದೇ ಉಳಿಸಬೇಕು ಎಂದು ಆಗ್ರಹಿಸಿದ್ದರು.

-  ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next