ಬೀದರ: ಗಡಿ ನಾಡು ಬೀದರ ರೈತರ ಜೀವನಾಡಿ ಆಗಿರುವ ಕಾರಂಜಾ ಜಲಾಶಯ ಮೈದುಂಬಿ ಹರಿಯುತ್ತಿದೆ. ಪ್ರಸಕ್ತ ವರ್ಷ ಜಲಾನಯನ ಪ್ರದೇಶದಲ್ಲಿ ಭಾರೀ ವರ್ಷಧಾರೆ ಪರಿಣಾಮ ನಾಲ್ಕು ವರ್ಷಗಳ ಬಳಿಕ ಕಾರಂಜಾ ಒಡಲು ಮತ್ತೂಮ್ಮೆ (7.45 ಟಿಎಂಸಿ) ಭರ್ತಿಯಾಗಿದೆ.
ಈ ಹಿಂದೆ 2016ರಲ್ಲಿ ಡ್ಯಾಮ್ ಗರಿಷ್ಠ ಮಟ್ಟ ತುಂಬಿತ್ತು. ಜಲಾಶಯವು 7.69 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಗುರುವಾರ ಮಧ್ಯಾಹ್ನದವರೆಗೆ 7.53 ಟಿಎಂಸಿ ನೀರು ಸಂಗ್ರಹ ವಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಲೇ ಇದೆ. ಬೆಳಗಿನ ಜಾವ ಡ್ಯಾಮ್‌ನ ಮೂರು ಗೇಟ್‌ಗಳನ್ನು ತೆರೆದು 9420.27 ಕ್ಯೂಸೆಕ್ ನೀರನ್ನು ಮಾಂಜ್ರಾ ನದಿಗೆ ಹರಿಬಿಡಲಾಗಿದೆ.ಸದ್ಯ ಒಳಹರಿವು (9420.27 ಕ್ಯೂಸೆಕ್) ಸಹ ಹೆಚ್ಚುತ್ತಲೇ ಇದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹ ಪರಿಸ್ಥಿತಿ ಆತಂಕ ಹೆಚ್ಚುತ್ತಿದೆ. ಜೂ.1ರಂದು ಕೇವಲಅರ್ಧ ಟಿಎಂಸಿ ಅಡಿ ಮಾತ್ರ ನೀರು ಇತ್ತು. ನಾಲ್ಕೂವರೆ ತಿಂಗಳಲ್ಲಿ ಪೂರ್ಣ ತುಂಬಿದೆ. ಸೆ. 15ರಿಂದ ನಾಲ್ಕು ದಿನ ಉತ್ತಮ ಮಳೆ ಸುರಿದಿದ್ದರಿಂದ ಜಲಾಶಯಕ್ಕೆ 4 ಟಿಎಂಸಿ ಅಡಿ ನೀರು ಹರಿದು ಬಂದಿತ್ತು.
ಮಂಗಳವಾರ ಬೆಳಗ್ಗೆ 5 ಟಿಎಂಸಿ ಅಡಿ ನೀರಿನ ಪ್ರಮಾಣ ದಾಖಲಾಗಿತ್ತು. ಈಗ ಮತ್ತೆಮಳೆಯಾರ್ಭಟ ಹಿನ್ನೆಲೆ ಬುಧವಾರ ಸಂಜೆ ವೇಳೆಗೆ 6.2 ಟಿಎಂಸಿ ಅಡಿಗೆತಲುಪಿತ್ತು. ಗುರುವಾರ ಮಧ್ಯಾಹ್ನ ಶೇ. 97.90ರಷ್ಟು ಭರ್ತಿಯಾಗಿದೆ. ಭಾರೀ ಮಳೆ ಅವಾಂತರ ರೈತ ಸಮುದಾಯಕ್ಕೆಘಾಸಿಗೊಳಿಸಿದ್ದರೆ ಕಾರಂಜಾ ತುಂಬಿರುವುದು ಬರುವ ಬೇಸಿಗೆಯ ಜಲ ಸಮಸ್ಯೆಗೆ ಮುಕ್ತಿ ಒದಗಿಸಲಿದೆ ಎಂಬ ಸಮಾಧಾನ ತಂದಿದೆ.
ಹೈಸ್ಟೀಡ್ ಭ್ರಷ್ಟಾಚಾರ ಮತ್ತು ಯೋಜನೆಗಳ ನನೆಗುದಿತನದಿಂದಾಗಿ ಸದಾ ಚರ್ಚೆಗೆ ಒಳಪಡುವ ಕಾರಂಜಾ ಜಲಾಶಯದ ಒಡಲು ಕಳೆದ 50 ವರ್ಷಗಳಲ್ಲಿ ನಾಲ್ಕೈದು ಬಾರಿ ಮಾತ್ರ ತುಂಬಿದೆ. ಮಹತ್ವಾಕಾಂಕ್ಷಿ ಯೋಜನೆ ಆರಂಭವಾಗಿ ದಶಕಗಳು ಉರುಳಿದರೂ ಅಪೂರ್ಣ ಸ್ಥಿತಿಯಲ್ಲಿದ್ದು, ನೀರಿನಂತೆ ಹಣ ಹರಿಯಿತೇ ಹೊರತು ಕೊನೆಯಂಚಿನ ರೈತರಿಗೆ ನೀರು ಮಾತ್ರ ಉಣಿಸಲು ಸಾಧ್ಯವಾಗಿರಲಿಲ್ಲ. ಜಲಾಶಯವು ಹೆಚ್ಚಿನ ಪ್ರಮಾಣದಲ್ಲಿ ಬೀದರ ಜಿಲ್ಲೆಯ ನಗರ, ಪಟ್ಟಣಗಳಕುಡಿವ ನೀರಿನ ದಾಹ ಇಂಗಿಸುವುದಕ್ಕೆಸೀಮಿತವಾಗಿತ್ತು. ಈಗ ಯೋಜನೆಗೆ ಕಾಯಕಲ್ಪ ಸಿಕ್ಕಿದೆ. ಮಾಂಜ್ರಾದ ಉಪ ನದಿಯಾದ ಕಾರಂಜಾ ಅಥವಾ ನಾರಂಜಾ ನದಿ ತೆಲಂಗಾಣಾದಲ್ಲಿ ಹುಟ್ಟಿ ಕರ್ನಾಟಕವನ್ನು ಪ್ರವೇಶಿಸುತ್ತದೆ. ಬೀದರ ಮತ್ತು ಹುಮನಾಬಾದತಾಲೂಕುಗಳ ನಡುವೆ ಹರಿಯುತ್ತ ಭಾಲ್ಕಿ ತಾಲೂಕು ಪ್ರವೇಶಿಸುವ ಮಾರ್ಗವಾದ ಹಾಲಹಳ್ಳಿಯ ಬಳಿಈ ಜಲಾಶಯ ನಿರ್ಮಿಸಲಾಗಿದೆ.
1960ರಲ್ಲಿ ಕೇವಲ 9 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರಂಭವಾದ ಜಲಾಶಯದ ಕಾಮಗಾರಿಗೆ ಈವರೆಗೆ564 ಕೋಟಿ ರೂ. ವೆಚ್ಚವಾಗಿದೆ.ಕಾರಂಜಾ ಜಲಾನಯನದ ಒಟ್ಟು 782 ಚ.ಕಿ.ಮೀ. ಪ್ರದೇಶದ ಪೈಕಿ ತೆಲಂಗಾಣ 565 ಚ.ಕಿ.ಮೀ, ಬೀದರ ಜಿಲ್ಲೆ 217 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಒಟ್ಟಾರೆ 7.69 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 7 ಟಿಎಂಸಿ ಅಡಿ ನೀರನ್ನು ಹಿಡಿದಿಡಬಹುದು. ಒಳ ಹರಿವು ಹೆಚ್ಚಾದರೆ ಬೀದರ ಮತ್ತು ಹುಮನಾಬಾದ ತಾಲೂಕಿನ ಹತ್ತಾರು ಗ್ರಾಮಗಳಿಗೆ ಹಿನ್ನೀರು ನುಗ್ಗುವ ಆತಂಕ ಇದೆ.
ಜಲಾಶಯದಲ್ಲಿ ಕಳೆದ 1997-98, 2008-09, 2010-11ನೇ ಸಾಲಿನಲ್ಲಿ 6 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ನಂತರ 2016ರಲ್ಲಿಗರಿಷ್ಠ ಮಟ್ಟ ತಲುಪಿದ್ದರಿಂದ ನದಿಗೆ ನೀರು ಬಿಡಲಾಗಿತ್ತು. ಈಗ ಮತ್ತೆ ಐದುವರ್ಷಗಳ ಬಳಿಕ ಮಳೆ ಅಬ್ಬರದಿಂದ ಈ ಯೋಗ ಕೂಡಿಬಂದಿದ್ದು, ಜಲಾಶಯಕ್ಕೆ ಕಳೆ ತಂದುಕೊಟ್ಟಿದೆ.
-ಶಶಿಕಾಂತ ಬಂಬುಳಗೆ