Advertisement
ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಬಯಲಿನ ನೀರಾವರಿ ಸಮಸ್ಯೆಗಳ ಬಗ್ಗೆ ರೈತರು ಹಾಗೂ ಜನಪ್ರತಿನಿಧಿಗಳೊಡನೆ ನಡೆಸಿದ ಸಭೆಯಲ್ಲಿ, ಇಂಜಿನಿಯರ್‌ಗಳು ನೀರು ಕೆರೆಗಳಿಗೆ ಹರಿಯುವ ಬಗ್ಗೆ ಸೂಕ್ತ ತಾಂತ್ರಿಕ ಪರಿಶೀಲನೆ ಮಾಡದೆ ಕಾಮಗಾರಿ ಕೈಗೊಂಡು ಹಲವು ಕೋಟಿ ರೂ. ವೆಚ್ಚ ಮಾಡಿದ್ದು, ಈಗ ಬೇರೆ ಬೇರೆ ಕಾರಣಗಳನ್ನು ಹೇಳುತ್ತಿದ್ದಾರೆ ಎಂಬ ತೀವ್ರ ಟೀಕೆ ರೈತರು ಹಾಗೂ ರಾಜಕೀಯ ಮುಖಂಡರಿಂದ ಕೇಳಿಬಂದಿತು.
Related Articles
Advertisement
ಆಗ ಟೀಕೆಗಳ ಸರಮಾಲೆಯೇ ರೈತರು ಹಾಗೂ ಮುಖಂಡರಿಂದ ಬರತೊಡಗಿತು. ಈ ಬಗ್ಗೆ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಸಿ.ಟಿ.ರವಿ, ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಗುರುತ್ವಾಕರ್ಷಣೆಯಲ್ಲಿ ನೀರು ಹರಿಯುವುದಿಲ್ಲ ಎಂಬ ಮಾಹಿತಿ ಸಿಕ್ಕಾಕ್ಷಣ ಗುತ್ತಿಗೆದಾರರಿಗೆ ಹಣ ನೀಡಬಾರದೆಂದು ಅಂದೇ ಲಿಖೀತವಾಗಿ ತಿಳಿಸಿದ್ದರೂ ಅಂದಿನ ಸರ್ಕಾರ ಹಣ ನೀಡಿದೆ. ನಾನು ತಂತ್ರಜ್ಞನಲ್ಲ. ತಾಂತ್ರಿಕ ಸಲಹೆ ನೀಡಬೇಕಾದವರುಇಲಾಖೆಯ ಇಂಜಿನಿಯರ್‌ಗಳು. ಎರಡು ಬಾರಿ ವರ್ಕ್ ಸ್ಲಿಪ್ ನೀಡಬೇಡಿ ಎಂದು ಪತ್ರ ಬರೆದಿದ್ದರೂ ಹಣ ನೀಡಲಾಗಿದೆ ಎಂದರು. ಇತ್ತೀಚೆಗೆ ನೀರಾವರಿ ಸಚಿವ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆದಾಗ ಆಗಿರುವ ಲೋಪಗಳಿಗೆ ಯಾರು ಹೊಣೆ ಎಂದಾಗ, ಅಧಿಕಾರಿಗಳು ತಲೆ ತಗ್ಗಿಸಿದರೆಂದು ಮಾಹಿತಿ ನೀಡಿದರು.
ಸಮಗ್ರ ತನಿಖೆಗೆ ಆಗ್ರಹ: ಈ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ಆಗಬೇಕು. ಇದಕ್ಕೆ ಹೊಣೆಗಾರರಾದ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಿ ಎಂಬ ಒಕ್ಕೊರಲಿನ ಒತ್ತಾಯ ಕೇಳಿಬಂತು. ರೈತ ಮುಖಂಡ ಗುರುಶಾಂತಪ್ಪ ಮಾತನಾಡಿ, ಪೈಪ್‌ಲೈನ್ ಅಳವಡಿಸಿ ನೀರು ಹರಿಸಲು ಮುಂದಾಗಬಾರದು. ಇದರಿಂದ ಪೈಪ್ ಒಳಗೆ ಕಲ್ಲು ಮಣ್ಣು ತುಂಬಿ ತಾಪತ್ರಯವಾಗುತ್ತದೆ ಎಂದರು.
ಅಮ್ಜದ್ ಮಾತನಾಡಿ, ಸರಿಯಾಗಿ ಕಾಮಗಾರಿ ನಿರ್ವಹಿಸಿದ್ದರೆ ನೀರು ಹರಿಯುತ್ತಿತ್ತು. ಈಗಲಾದರೂ ನೀರು ಹರಿಯುವಂತೆ ಮಾಡಲು ಸಚಿವರು ಕ್ರಮ ತೆಗೆದುಕೊಳ್ಳಬೇಕೆಂದರು. ರವೀಶ್ ಬಸಪ್ಪ ಮಾತನಾಡಿ, ಇಲಾಖೆಯಲ್ಲಿ ಪರಿಹಾರ ನೀಡುವ ತಜ್ಞರಿಲ್ಲದಿದ್ದರೆ ಎರವಲು ಸೇವೆ ಪಡೆದಾದರೂ ಕಾಮಗಾರಿ ಸರಿಯಾಗಿ ನಿರ್ವಹಿಸಿ ನೀರು ಹರಿಯುವಂತೆ ಮಾಡಬೇಕೆಂದು ಹೇಳಿದರು. ಆಗ ಮಾತನಾಡಿದ ಸಚಿವರು, ಯಾವ ರೀತಿ ಈಗಾಗಿರುವ ಕಾಮಗಾರಿಯನ್ನು ಸರಿಪಡಿಸಬಹುದು, ದೇವೀಕೆರೆಯಲ್ಲಿ ನೀರಿನ ಲಭ್ಯತೆ ಎಷ್ಟು, ಗುರುತ್ವಾಕರ್ಷಣೆಯಲ್ಲಿ ನೀರು ತರಬಹುದೆ ಇವೆಲ್ಲವನ್ನು ಪರಿಶೀಲಿಸಿ ವಿವರ ನೀಡಲು ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯನಿರ್ವಾಹಕ ಇಂಜಿನಿಯರ್ ಮಾತನಾಡಿ, ಎಲ್ಲಾ ಕೆರೆಗಳನ್ನು ತುಂಬಿಸಬೇಕಾದರೆ 118 ಎಂಸಿಎಫ್‌ಟಿ ನೀರು ಬೇಕಾಗುತ್ತದೆ. ದೇವಿ ಕೆರೆಯಿಂದ 43 ಎಂಸಿಎಫ್‌ಟಿ ನೀರು ಪಡೆಯಬಹುದು. ಪಂಪ್ ಮಾಡಿದರೆ ಒಟ್ಟು ಮೂರು ತಿಂಗಳಿಗೆ 170 ಎಂಸಿಎಫ್‌ಟಿ ನೀರು ತುಂಬಿಸಬಹುದೆಂದು ತಿಳಿಸಿದರು.