Advertisement

ಅದ್ದೂರಿ ಕಮಠೇಶ್ವರ ಸ್ವಾಮಿ ಹೂವಿನ ಕರಗ ಮಹೋತ್ಸವ

09:27 PM Jun 02, 2019 | Lakshmi GovindaRaj |

ಚಿಕ್ಕಬಳ್ಳಾಪುರ: ನಗರದ ಕಂದವಾರಪೇಟೆಯಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಕಾಳಿಕಾಂಭ ಕಮಠೇಶ್ವರಸ್ವಾಮಿ ದೇವಾಲಯದ ಸೇವಾ ಸಮಿತಿ ವತಿಯಿಂದ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಆರನೇ ವರ್ಷದ ಶ್ರೀ ಕಾಳಿಕಾಂಭ ಕಮಠೇಶ್ವರ ಸ್ವಾಮಿ ಹೂವಿನ ಕರಗ ಮಹೋತ್ಸವ ಅಪರ ಭಕ್ತ ಸಮೂಹಕ್ಕೆ ಸಾಕ್ಷಿಯಾಗಿ ಅದ್ದೂರಿಯಾಗಿ ನೆರವೇರಿತು.

Advertisement

ಕೋಲಾರ ಜಿಲ್ಲೆಯ ಕಾಕಿನತ್ತ ಗ್ರಾಮದ ಬಾಲರಾಜು ಅರಿಶಿಣ ಬಣ್ಣದ ಸೀರೆ ಉಟ್ಟು ಹೂವಿನ ಕರಗ ಹೊತ್ತು ದೇಗುಲದಲ್ಲಿ ಕಾಳಿಕಾಂಭ ಕಮಠೇಶ್ವರಮಿಗೆ ಸಾಂಪ್ರದಾಯಕವಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ಸಲ್ಲಿಸಿ ಹೊರ ಬರುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರು ಭವ್ಯ ಸ್ವಾಗತ ಕೋರಿದರು.

ಮೆರವಣಿಗೆ: ಹೂವಿನ ಕರಗ ಹೊತ್ತು ಬಾಲರಾಜು ಮಂಗಳವಾದ್ಯ ತಮಟೆಯ ಸದ್ದಿಗೆ ಹೆಜ್ಜೆ ಹಾಕುತ್ತಾ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಅವರನ್ನು ಹಿಂಬಾಲಿಸಿ ಕೈಯಲ್ಲಿ ಕತ್ತಿ, ಗುರಾಣಿ ಹಿಡಿದಿದ್ದ ವೀರಕುಮಾರರರು ಗೋವಿಂದ ಗೋವಿಂದಾ ನಾಮಸ್ಮರಣೆ ಮೊಳಗಿಸಿ ನೆರದಿದ್ದವರಲ್ಲಿ ಭಕ್ತಿಯ ಪರಕಾಷ್ಠೆ ಮೆರೆದರು.

ಹೂವಿನ ಕರಗ ಸಾಗಿದ ಮುಖ್ಯ ರಸ್ತೆಗಳಲ್ಲಿ ಜನ ತಂಡೋಪ ತಂಡವಾಗಿ ಕಿಕ್ಕಿರಿದು ತುಂಬಿದ್ದರು. ಮನೆಗಳ ಮುಂದೆ ಕರಗ ಬಂದಾಗ ಭಕ್ತಿಭಾವದಿಂದ ಕರಗದ ಪೂಜಾರಿಗೆ ಭಕ್ತಿ ನಮನ ಸಲ್ಲಿಸಿದ ನಗರದ ಜನತೆಗೆ ವಿಶೇಷವಾಗಿ ಮಹಿಳೆಯರು ಕರಗಕ್ಕೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

ಝಗಮಗಿಸಿದ ದೀಪಾಲಂಕಾರ: ಹೂವಿನ ಕರಗದ ಅಂಗನವಾಗಿ ದೇವಾಲಯಕ್ಕೆ ಮಾಡಲಾಗಿದ್ದ ಆಕರ್ಷಕ ಹೂವಿನ ಅಲಂಕಾರ ಹಾಗೂ ವಿದ್ಯುತ್‌ ದೀಪಾಲಂಕಾರ ಎಲ್ಲರ ಗಮನ ಸೆಳೆಯಿತು. ಇಡೀ ಕಂದವಾರಪೇಟೆಯ ಮುಖ್ಯ ಬೀದಿಗಳಿಗೆ ದೀಪಾಲಂಕಾರ ಮಾಡಿದ್ದರ ಜೊತೆಗೆ ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

Advertisement

ಮೊದಲಿಗೆ ದೇವಾಲಯದ ಆವರಣದ ಮುಂಭಾಗ ನಿರ್ಮಿಸಿದ್ದ ವೇದಿಕೆಯಲ್ಲಿ ಕರಗದ ನೃತ್ಯ ಪ್ರದರ್ಶಿಸಲಾಯಿತು. ತಮಟೆಯ ತಂಡದ ಸದ್ದಿಗೆ ಕರಗ ಹೊತ್ತ ಬಾಲರಾಜು ನೃತ್ಯ ಪ್ರದರ್ಶಿಸಿ ನೆರೆದಿದ್ದ ಕರಗ ಪ್ರೇಮಿಗಳನ್ನು ತಲೆದೂಗುವಂತೆ ಮಾಡಿತು.

ಕಾಳಿಕಾಂಭ ಕಮಠೇಶ್ವರ ಸ್ವಾಮಿ ದೇವಾಲಯದ ಟ್ರಸ್ಟ್‌ ಅಧ್ಯಕ್ಷ ಕೆ.ವಿ.ನವೀನ್‌ ಕಿರಣ್‌, ಸೇವಾ ಸಮಿತಿ ಕಾರ್ಯದರ್ಶಿ ಪ್ರಕಾಶ್‌ ಬಾಬು, ದೇವಾಲಯದ ಅರ್ಚಕ ಗಂಗಾಧರ ಶಾಸ್ತ್ರಿ, ಮುಖಂಡರಾದ ಆಲೂಗಡ್ಡೆ ಮಹೇಶ್‌, ಸತೀಶ್‌, ಡಿ.ವಿ.ಮುನಿರಾಜು, ವೆಂಕಟೇಶ್‌, ನಗರಸಭಾ ಮಾಜಿ ಅಧ್ಯಕ್ಷ ಅಪ್ಪಾಲು ಮಂಜು, ದೇವರಾಜು, ಸಮಿತಿಯ ಕೆ.ಕೆ ಬಾಯ್ಸ ತಂಡದ ಸದಸ್ಯರು ಹಾಜರಿದ್ದರು.

ಹೂವಿನ ಕರಗಕ್ಕೆ ಸಾಂಸ್ಕೃತಿಕ ಮೆರಗು: ಚಿಕ್ಕಬಳ್ಳಾಪುರದ ಕಂದವಾರಪೇಟೆಯಲ್ಲಿ ಆಯೋಜಿಸಲಾಗಿದ್ದ ಹೂವಿನ ಕರಗ ಮಹೋತ್ಸವಕ್ಕೆ ಸಾಂಸ್ಕೃತಿಕ ಮೆರಗು ಗಮನ ಸೆಳೆಯಿತು. ಕರಗದ ಜೊತೆ ಜೊತೆಗೆ ವೀರಗಾಸೆ ಕುಣಿತ, ಕೀಲು ಕುದುರೆ, ಬೊಂಬೆ ಕುಣಿತ, ಕರಡಿ ವೇಷ ಮತ್ತಿತರ ವಿವಿಧ ಜಾನಪದ ಶೈಲಿಯ ಕಲಾತಂಡಗಳು ಕರಗಕ್ಕೆ ಆಕರ್ಷಕ ಮೆರಗು ನೀಡಿದವು. ಕರಗ ಮಹೋತ್ಸವದ ಪ್ರಯುಕ್ತ ಭಕ್ತರಿಗೆ ವಿವಿಧೆಡೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಮುಂಜಾಗ್ರತವಾಗಿ ಅಹಿತಕರ ಘಟನೆಗಳು ನಡೆಯದಂತೆ ನಗರ ಠಾಣೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು.

ಅಗ್ನಿಕುಂಡ ಪ್ರವೇಶ: ಶ್ರೀ ಕಾಳಿಕಾಂಭ ಕಮಠೇಶ್ವರಸ್ವಾಮಿ ಹೂವಿನ ಕರಗ ಹೊತ್ತ ಬಾಲರಾಜು ಶನಿವಾರ ರಾತ್ರಿ ಇಡೀ ನೃತ್ಯ ಪ್ರದರ್ಶಿಸಿ ಗಮನ ಸೆಳೆದರೆ, ಭಾನುವಾರ ಬೆಳಗ್ಗೆ ಕಾಳಿಕಾಂಭ ದೇವಾಲಯದ ಪಕ್ಕದಲ್ಲಿ ಅಗ್ನಿಕುಂಡ ಪ್ರವೇಶಿಸಿ ಭಕ್ತಿಯ ಪರಾಕಷ್ಠೆ ಮೆರೆದರು. ಬಳಿಕ 9 ಗಂಟೆಗೆ ಸುಮಾರಿಗೆ ಕಾಳಿಕಾಂಭ ದೇವಾಲಯದ ಮುಂಭಾಗದಲ್ಲಿ ಬಾಲರಾಜು ತಲೆಯ ಮೇಲೆ ಒನಕೆ ಕರಗ ಹೊತ್ತು ಒನಕೆಯ ಮೇಲೆ ಅರಿಶಿಣ ನೀರು ತುಂಬಿಟ್ಟು ತಾಮ್ರದ ಪಾತ್ರೆ ಇಟ್ಟುಕೊಂಡು ತಮಟೆಯ ವಾದನಕ್ಕೆ ತಕ್ಕಂತೆ ವಿವಿಧ ಭಂಗಿಗಳಲ್ಲಿ ಆಕರ್ಷಕ ನೃತ್ಯ ಮಾಡುವ ಮೂಲಕ ನೆರೆದಿದ್ದ ಜನರನ್ನು ಸೂಜಿಗಲ್ಲಿನಂತೆ ತಮತ್ತ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next