Advertisement

ಏತ ನೀರಾವರಿ ಯೋಜನೆ ಪರಿಷ್ಕೃರಣೆಗೆ ಕರಡಿ ಒತ್ತಾಯ

06:42 AM Jun 08, 2020 | Suhan S |

ಕೊಪ್ಪಳ: ಈ ಹಿಂದೆ ಯೋಜಿಸಿದ ತಾಲೂಕಿನ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯು ಈ ಭಾಗದ ಹೆಚ್ಚಿನ ರೈತರಿಗೆ ಅನುಕೂಲವಾಗದೇ ಇರುವ ಕಾರಣಕ್ಕೆ ಈ ಯೋಜನೆಯನ್ನು ಪರಿಷ್ಕೃತಗೊಳಿಸಿ ಹೆಚ್ಚು ರೈತರಿಗೆ ನೀರು ಒದಗಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಒತ್ತಾಯಿಸಿದ್ದಾರೆ.

Advertisement

ತಾಲ್ಲೂಕಿನ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆಯ ಪ್ರದೇಶಕ್ಕೆ ಭೇಟಿ ನೀಡಿ ಜಾಕ್ವೆಲ್‌ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಈ ಹಿಂದೆ ತಯಾರಿಸಲಾದ ಯೋಜನೆಯಂತೆ ಬೆಟಗೇರಿ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಇರಲಿಲ್ಲ. ಕೆಲವು ಗ್ರಾಮಗಳಿಗೆ ಮಾತ್ರ ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸಲಾಗಿತ್ತು. ಇದರಿಂದಾಗಿ ಈ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಹಾಗೂ ಅಂತಹ ಹಳ್ಳಿಗಳಿಗೆ ನೀರು ದೊರಕದಂತಾಗಿದೆ. ಈ ಹಿನ್ನೆಲೆಯಲ್ಲಿ ರೈತಪರ ಬಿಜೆಪಿ ಸರ್ಕಾರ ಕೂಡಲೇ ಈ ಯೋಜನೆ ಪರಿಷ್ಕೃತಗೊಳಿಸಿ ಬೆಟಗೇರಿ ಭಾಗದ ರೈತರಿಗೂ ಅನುಕೂಲವಾಗುವಂತೆ ಯೋಜನೆ ರೂಪಿಸಿ ಎಲ್ಲ ರೈತರಿಗೂ ಸೌಲಭ್ಯ ಸಿಗುವಂತಾಗಬೇಕು ಎಂದು ಮನವಿ ಮಾಡಿದ್ದಾರೆ.

ಪರಿಷ್ಕೃತ ಯೋಜನೆಯಿಂದಾಗಿ ಬೆಟಗೇರಿ ಭಾಗದ 3 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ಈ ಏತನೀರಾವರಿ ಯೋಜನೆಯಡಿ ನೀರು ದೊರಕುತ್ತದೆ. ಈ ಹಿಂದೆ ಇದೇ ಗ್ರಾಮಕ್ಕೆ ನೀರು ದೊರಕುವಂತೆ ಯೋಜನೆ ಮಾಡಲಾಗಿತ್ತು. ಹೆಸರಿಗೆ ಮಾತ್ರ ಬೆಟಗೇರಿ ಯೋಜನೆ ಇತ್ತು. ಆದರೆ ನೀರು ದೊರಕದೇ ಮುಂದಿನ ಗ್ರಾಮಕ್ಕೆ ನೀರು ಸಿಗುವಂತೆ ಈ ಹಿಂದಿನವರು ಮಾಡಿದ್ದರು. ಆ ಮೂಲಕ ಬೆಟಗೇರಿ ಭಾಗದ ರೈತರಿಗೆ ಅನ್ಯಾಯ ಮಾಡಲಾಗಿತ್ತು. ಇದೀಗ ನಮ್ಮ ಸರ್ಕಾರ ಆಡಳಿತದಲ್ಲಿದ್ದು, ಈ ಭಾಗದ ಎಲ್ಲ ರೈತರಿಗೂ ಅನುಕೂಲವಾಗುವಂತೆ ಪರಿಷ್ಕೃತ ಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಿದರೆ ಈ ಭಾಗದ ಭೂಮಿ ನೀರಾವರಿ ಪ್ರದೇಶವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಅವರು ಗಮನಹರಿಸಿ ರೈತರ ಹಿತ ಕಾಪಾಡಬೇಕೆಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್‌ ಮೈನಳ್ಳಿ, ಎಪಿಎಂಸಿ ಸದಸ್ಯರಾದ ಬಸವರಾಜ ಈಶ್ವರಗೌಡ್ರ, ಬಿಜೆಪಿ ಮುಖಂಡರಾದ ವೀರೇಶ ಸಜ್ಜನ್‌, ಶರಣಪ್ಪ ಮತ್ತೂರು ಮತ್ತು ಭೀಮಣ್ಣ ಬೆಟಗೇರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next