ಕೊಪ್ಪಳ: ಆಂಜಿನೇಯನ ಹೆಸರಲ್ಲಿ ಮಹಾರಾಷ್ಟ್ರ ಹಾಗೂ ಟಿಟಿಡಿ ಬಿಸಿನೆಸ್ ಮಾಡಲು ಹೊರಟಿವೆ. ಆದರೆ ಎಂದಿಗೂ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಯೇ ಹನುಮ ಜನ್ಮ ಸ್ಥಳ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೊಪ್ಪಳ ಕಿಷ್ಕಿಂದೆಯೇ ಹನುಮ ಹುಟ್ಟಿದ ಸ್ಥಳ. ನಾವು ಎಲ್ಲ ಸಂಸದರೂ ಕೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕ್ತುತ್ತೇವೆ. ನಮ್ಮ ಬಳಿ ಇರುವ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತೇವೆ. ಕೇಂದ್ರ ಸರ್ಕಾರ ಕಿಷ್ಕಿಂದೆಯೇ ಅಂಜನಾದ್ರಿ ಪ್ರದೇಶ ಎನ್ನುವ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎಂದರು.
ಇಂದು ಹಂಪಿಗಿಂತ ಅಂಜನಾದ್ರಿಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿ ಆಗಿದೆ. ಹನುಮನ ಹೆಸರು ಹೇಳಿಕೊಂಡು ಮಹಾರಾಷ್ಟ್ರ ಟಿಟಿಡಿ ಬಿಸಿನೆಸ್ ಮಾಡಲು ಹೊರಟಿವೆ ಎಂದು ಆರೋಪಿಸಿದರು.
ಇದನ್ನೂ ಓದಿ:ಯಾರಿಗೆ ಬೇಕು ಎಷ್ಟು ವೋಟು: ರಾಜ್ಯಸಭಾ ಚುನಾವಣೆಗೆ ಮತ ಲೆಕ್ಕಾಚಾರ ಹೇಗಿದೆ?
ಇದೀಗ ಎರಡು ರಾಜ್ಯಗಳು ಸುಮ್ಮನೆ ವಿವಾದ ಹುಟ್ಟು ಹಾಕುವ ಕೆಲಸ ಮಾಡುತ್ತಿವೆ. ರಾಮಾಯಣದಲ್ಲಿ ಕಿಷ್ಕಿಂದೆ ಪ್ರದೇಶವೇ ಹನುಮನ ಹುಟ್ಟಿದ ಸ್ಥಳ ಎಂದು ಉಲ್ಲೇಖವಿದೆ. ಮಹಾರಾಷ್ಟ್ರ ಸುಮ್ಮನೆ ವಿವಾದ ಮಾಡುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ಆಂಜನೇಯ ಇಡೀ ಜಗತ್ತಿಗೆ ದೇವರು. ಕಿಷ್ಕಿಂದೆಯಲ್ಲಿ ಪಂಪಾ ಸರೋವರವಿದೆ. ಆದರೆ ಮಹಾರಾಷ್ಟ್ರದಲ್ಲಿ ಪಂಪಾ ಸರೋವರ ಇಲ್ಲ. ಆದರೂ ಕಾಲ್ಪನಿಕವಾಗಿ ಸುಮ್ಮನೆ ವಿವಾದ ಮಾಡಲಾಗುತ್ತಿದೆ ಎಂದರು.