Advertisement

ಕರಡಿ ಕುಣಿತಕ್ಕೆ ರಾಜಶೇಖರ ಹಿಟ್ನಾಳ ಅಡ್ಡಗಾಲು

11:25 PM Apr 19, 2019 | Lakshmi GovindaRaju |

ಕೊಪ್ಪಳ: ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಬಿಜೆಪಿಯಿಂದ ಹಾಲಿ ಸಂಸದ ಸಂಗಣ್ಣ ಕರಡಿ ಮತ್ತೆ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ರಾಜಶೇಖರ ಹಿಟ್ನಾಳ ನೇರ ಪೈಪೋಟಿ ನೀಡುತ್ತಿದ್ದಾರೆ. ಎರಡು ಅವ ಧಿಗೆ ಕ್ಷೇತ್ರ ಕೇಸರಿಮಯವಾಗಿದ್ದು, ಕರಡಿ ಕಟ್ಟಿ ಹಾಕಲು ಕೈ ಪಡೆ ಭರ್ಜರಿ ರಣತಂತ್ರ ಹೆಣೆದು, ಮೈತ್ರಿ ಧರ್ಮದ ಜಪದಲ್ಲಿ ತೇಲುತ್ತಿದೆ.

Advertisement

ಕೊಪ್ಪಳ ಕ್ಷೇತ್ರದ ಚುನಾವಣಾ ಇತಿಹಾಸ ಅವಲೋಕಿಸಿದರೆ ಅತಿ ಹೆಚ್ಚು ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿ ಸಿದ್ದಾರೆ. ಆದರೆ 2009 ಹಾಗೂ 2014ರಲ್ಲಿ ಕಮಲಕ್ಕೆ ಇಲ್ಲಿನ ಮತದಾರ ಜೈ ಎಂದಿದ್ದಾನೆ. ಲಿಂಗಾಯತರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕುರುಬರು, ದಲಿತರು, ಎಸ್‌ಸಿ, ಎಸ್‌ಟಿ ಹಾಗೂ ಮುಸ್ಲಿಂ ಮತಗಳನ್ನೂ ಕಡೆಗಣಿಸುವಂತಿಲ್ಲ. ಕೆಲವೊಮ್ಮೆ ಇವರೇ ನಿರ್ಣಾಯಕ ಸ್ಥಾನದಲ್ಲೂ ನಿಂತಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಕೊಪ್ಪಳ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ಸಹಜವಾಗಿಯೇ ಮುಖ ಪರಿಚಯವಿದೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮೊದಲ ಬಾರಿಗೆ ಲೋಕಸಭಾ ಸಮರದ ಸ್ಪರ್ಧೆಗಿಳಿದಿದ್ದಾರೆ. ತಂದೆ ಬಸವರಾಜ ಹಿಟ್ನಾಳ ಹಿಂದಿನ ಚುನಾವಣೆಗಳಲ್ಲಿ ಕರಡಿಗೆ ಭರ್ಜರಿ ಫೈಟ್‌ ನೀಡುತ್ತಿದ್ದರು. ಆದರೆ ಈ ಬಾರಿ ಮಗ ರಾಜಶೇಖರ ಫೈಟ್‌ ನೀಡಲು ಅಣಿಯಾಗಿದ್ದಾರೆ.

ಹಾಲಿ ಸಂಸದ ಸಂಗಣ್ಣ ಕರಡಿ ರೈಲ್ವೆ, ಹೆದ್ದಾರಿ ರಸ್ತೆಗಳು ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದರೂ ಕಳೆದ ವಿಧಾನಸಭಾ ಚುನಾವಣೆ ವೇಳೆ ಪುತ್ರ ವ್ಯಾಮೋಹದಿಂದ ಬಿಜೆಪಿ ಟಿಕೆಟ್‌ ಪಡೆಯಲು ಹಠ ಹಿಡಿದಿದ್ದರು. ಬಿಜೆಪಿ ಹೈಕಮಾಂಡ್‌ ಕೊಪ್ಪಳ ಕ್ಷೇತ್ರಕ್ಕೆ ಸಿ.ವಿ. ಚಂದ್ರಶೇಖರ್‌ ಅವರ ಹೆಸರನ್ನೂ ಘೋಷಿಸಿತ್ತು. ಆದರೆ ಕರಡಿ ಹಠದಿಂದ ಸಿವಿಸಿ ಬದಲಿಗೆ ಕರಡಿ ಪುತ್ರ ಅಮರೇಶ ಕರಡಿಗೆ ಬಿ ಫಾರಂ ನೀಡಿತ್ತು. ಹಾಗಾಗಿ ಕಮಲದಲ್ಲಿ ಈ ಮುನಿಸು ಒಳಗೊಳಗೆ ಕಾಣುತ್ತಿದೆ. ಆದರೂ ಹೈಕಮಾಂಡ್‌ ಒಗ್ಗಟ್ಟಿನ ಸೂತ್ರ ಹಾಕಿಕೊಟ್ಟಿದ್ದು ಕರಡಿ ಗೆಲುವಿಗೆ ರಣತಂತ್ರ ಹೆಣೆದಿದೆ.

2014ರ ಚುನಾವಣೆಯಲ್ಲಿ ಕರಡಿಗೆ ಮೋದಿ ಅಲೆಯ ಜತೆಗೆ ಸಿಂಧನೂರು, ಮಸ್ಕಿ ಭಾಗದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಬಲ ನೀಡಿದ್ದರು. ಆದರೆ ವಿರೂಪಾಕ್ಷಪ್ಪ, ಶಿವರಾಮೆಗೌಡ ಕಾಂಗ್ರೆಸ್‌ನಲ್ಲಿದ್ದಾರೆ. ರಾಜಶೇಖರ ಹಿಟ್ನಾಳಗೆ ಮೈತ್ರಿ ಧರ್ಮದ ಜತೆಗೆ ಹಲವರ ಒಗ್ಗಟ್ಟು ಕೈನಲ್ಲಿ ಕಾಣಿಸಿದ್ದರೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಬಸವನಗೌಡ ಬಾದರ್ಲಿ, ಕೆ. ವಿರೂಪಾಕ್ಷಪ್ಪ ಅವರನ್ನು ಸಮಾಧಾನಪಡಿಸುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ.

Advertisement

ಕ್ಷೇತ್ರದ ಚಿತ್ರಣ: ಕೊಪ್ಪಳ ಲೋಕಸಭಾದ 8 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿದ್ದರೆ, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಕ್ಷೇತ್ರ, ಬಳ್ಳಾರಿ ಜಿಲ್ಲೆ ಸಿರಗುಪ್ಪಾ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿದೆ. ಕಳೆದ ಲೋಕ ಸಮರದಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಕುಷ್ಟಗಿ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದರು.

ಈ ಮಧ್ಯೆ ಒಂದೇ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಸಂಗಣ್ಣ ಕರಡಿ ಮೋದಿ ಅಲೆಯಲ್ಲೇ ಭರ್ಜರಿ ಗೆಲುವು ಸಾಧಿ ಸಿದ್ದರು. ಆದರೆ, ಈಗ ಲೆಕ್ಕಾಚಾರ ಬದಲಾಗಿದ್ದು, ಪ್ರಸ್ತುತ 8 ಕ್ಷೇತ್ರಗಳಲ್ಲಿ ಬಿಜೆಪಿ ನಾಲ್ವರು ಶಾಸಕರಿದ್ದರೆ, 3 ಕ್ಷೇತ್ರ ಕೈ ವಶದಲ್ಲಿವೆ. ಒಂದು ಜೆಡಿಎಸ್‌ ಪಾಲಾಗಿದೆ. ಮೈತ್ರಿ ಧರ್ಮದ ಲೆಕ್ಕಾಚಾರ ಹಾಕಿದರೆ ಕೈ-ಕಮಲದ ಬಳಿ ತಲಾ 4 ಕ್ಷೇತ್ರಗಳು ವಶದಲ್ಲಿವೆ.

ಮೈತ್ರಿ ಧರ್ಮದ ನೆಪ, ಮೋದಿಯ ಜಪ: ಮೈತ್ರಿ ಧರ್ಮದ ನೆಪದಲ್ಲಿ ಜೆಡಿಎಸ್‌ ನಾಯಕರೊಂದಿಗೆ ಕಾಂಗ್ರೆಸ್‌ ನಾಯಕರು ಸೇರಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರದ ಮೇಲೆ ಪ್ರೇಮ ಮೆರೆದು ಪ್ರಚಾರಕ್ಕೆ ಬಂದಿದ್ದು, ಮೈತ್ರಿ ನಮಗೆ ಪ್ಲಸ್‌ ಆಗಲಿದೆ, ಗೆಲುವು ನಮ್ಮದೇ ಎಂದು ವಿಶ್ವಾಸದ ನಗೆ ಬೀರಿದ್ದಾರೆ.

ನಿರ್ಣಾಯಕ ಅಂಶ: ಈ ಹಿಂದಿನ ಲೋಕಸಭಾ ಚುನಾವಣೆ ಅವಲೋಕಿಸಿದರೆ ಕೈ ಅಭ್ಯರ್ಥಿಗಳೇ ಹೆಚ್ಚು ಗೆಲುವು ಕಂಡಿದ್ದಾರೆ. ಬಿಜೆಪಿ ಕಳೆದ 2 ಅವ ಧಿಗೆ ಮಾತ್ರ ಕ್ಷೇತ್ರ ಕೇಸರಿಮಯ ಮಾಡಿದೆ. ಲಿಂಗಾಯತರು ಪ್ರಾಬಲ್ಯವಿರುವ ಕ್ಷೇತ್ರ ಇದಾಗಿದ್ದರಿಂದ ಫಾರ್‌ವರ್ಡ್‌-ಬ್ಯಾಕ್‌ವರ್ಡ್‌ ಲೆಕ್ಕಾಚಾರ ನಡೆದಿದೆ. ಆದರೂ ಕುರುಬರು, ದಲಿತರು, ಎಸ್‌ಸಿ, ಎಸ್‌ಟಿ ಸೇರಿ ಮುಸ್ಲಿಂ ಮತಗಳೂ ನಿರ್ಣಾಯಕ ಸ್ಥಾನ ಹೊಂದಿವೆ.

ಒಟ್ಟು ಮತದಾರರು: 17,16,760
ಪುರುಷರು: 8,62,466
ಮಹಿಳೆಯರು: 8,72,539
ಇತರರು: 113

ಜಾತಿ ಲೆಕ್ಕಾಚಾರ
ಲಿಂಗಾಯತರು: 3,44,400
ಕುರುಬರು: 2,49,500
ಎಸ್‌ಸಿ: 2,95,000
ಎಸ್‌ಟಿ: 2,05,000
ಮುಸ್ಲಿಂ: 2,00,800

* ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next