Advertisement

ಕರಾಚಿ ಏಕದಿನ: ಪಾಕ್‌ ಗೆಲುವು

10:00 PM Oct 01, 2019 | Team Udayavani |

ಕರಾಚಿ: ಒಂದು ದಶಕದ ಬಳಿಕ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಕಂಡ ಕರಾಚಿಯಲ್ಲಿ ಆತಿಥೇಯ ಪಾಕಿಸ್ಥಾನ ಜಯ ಸಾಧಿಸಿದೆ. ಸೋಮವಾರ ನಡೆದ ಹಗಲು-ರಾತ್ರಿ ಪಂದ್ಯದಲ್ಲಿ ಅದು ಶ್ರೀಲಂಕಾವನ್ನು 67 ರನ್ನುಗಳಿಂದ ಮಣಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ, ಬಾಬರ್‌ ಆಜಂ ಅವರ ಶತಕ ಸಾಹಸದಿಂದ 7 ವಿಕೆಟಿಗೆ 305 ರನ್‌ ಪೇರಿಸಿತು. ಜವಾಬಿತ್ತ ಶ್ರೀಲಂಕಾ 46.5 ಓವರ್‌ಗಳಲ್ಲಿ 238ಕ್ಕೆ ಆಲೌಟ್‌ ಆಯಿತು.

ಇದು ಸರಣಿಯ 2ನೇ ಪಂದ್ಯವಾಗಿದ್ದು, ಇಲ್ಲೇ ನಡೆಯಬೇಕಿದ್ದ ಮೊದಲ ಮುಖಾಮುಖೀ ಮಳೆಯಿಂದ ರದ್ದುಗೊಂಡಿತ್ತು. ಪ್ರತಿಕೂಲ ಹವಾಮಾನದ ಭೀತಿಯಿಂದ ರವಿವಾರದ ದ್ವಿತೀಯ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. 3ನೇ ಹಾಗೂ ಅಂತಿಮ ಮುಖಾಮುಖೀ ಇದೇ ಅಂಗಳದಲ್ಲಿ ಬುಧವಾರ ನಡೆಯಲಿದೆ.

ಶಿನ್ವಾರಿ 5 ವಿಕೆಟ್‌ ಸಾಧನೆ
ಎಡಗೈ ಮಧ್ಯಮ ವೇಗಿ ಉಸ್ಮಾನ್‌ ಶಿನ್ವಾರಿ 5 ವಿಕೆಟ್‌ ಉರುಳಿಸಿ ಲಂಕೆಯನ್ನು ಹಾದಿ ತಪ್ಪಿಸಿದರು. ಇದು ಶಿನ್ವಾರಿ ಅವರ 2ನೇ 5 ವಿಕೆಟ್‌ ಸಾಧನೆಯಾಗಿದೆ. ಈ ಸಾಹಸಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಶಾದಾಬ್‌ ಖಾನ್‌ 2 ವಿಕೆಟ್‌ ಉರುಳಿಸಿದರು.

28 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡ ಶ್ರೀಲಂಕಾ ಇನ್ನೂರರ ಗಡಿ ದಾಟಿದ್ದೇ ಒಂದು ಸಾಹಸವೆನಿಸಿತು. ಕೆಳ ಕ್ರಮಾಂಕದ ಆಟಗಾರರಾದ ಶೆಹಾನ್‌ ಜಯಸೂರ್ಯ 96, ದಸುನ್‌ ಶಣಕ 68 ರನ್‌ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರು. ಇವರು ಮೊತ್ತವನ್ನು 205ರ ತನಕ ಕೊಂಡೊಯ್ದರು. ಈ ಹಂತದಲ್ಲಿ ಫ್ಲಡ್‌ಲೈಟ್‌ ಕೈಕೊಟ್ಟ ಘಟನೆಯೂ ಸಂಭವಿಸಿತು. ಇದು ಸರಿಗೊಂಡ ಬೆನ್ನಲ್ಲೇ ಜಯಸೂರ್ಯ ಮತ್ತು ಶಣಕ ಅವರ ವಿಕೆಟ್‌ ಬೆನ್ನು ಬೆನ್ನಿಗೆ ಉರುಳಿತು.

Advertisement

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ಥಾನ-50 ಓವರ್‌ಗಳಲ್ಲಿ 7 ವಿಕೆಟಿಗೆ 305 (ಬಾಬರ್‌ ಆಜಂ 115, ಫ‌ಕಾರ್‌ ಜಮಾನ್‌ 54, ಹ್ಯಾರಿಸ್‌ ಸೊಹೈಲ್‌ ಔಟಾಗದೆ 40, ಹಸರಂಗ 63ಕ್ಕೆ 2). ಶ್ರೀಲಂಕಾ-46.5 ಓವರ್‌ಗಳಲ್ಲಿ 238 (ಜಯಸೂರ್ಯ 96, ಶಣಕ 68, ಹಸರಂಗ 30, ಶಿನ್ವಾರಿ 51ಕ್ಕೆ 5, ಶಾದಾಬ್‌ ಖಾನ್‌ 76ಕ್ಕೆ 2). ಪಂದ್ಯಶ್ರೇಷ್ಠ: ಉಸ್ಮಾನ್‌ ಶಿನ್ವಾರಿ.

Advertisement

Udayavani is now on Telegram. Click here to join our channel and stay updated with the latest news.

Next