Advertisement

Kapu ಕಡಿಯುತ್ತಿದ್ದ ಮರ ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

11:19 PM Oct 02, 2023 | Team Udayavani |

ಕಾಪು: ಇಲ್ಲಿನ ಮಜೂರು ಕರಂದಾಡಿಯ ನಾಗಬನದ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಬಿಹಾರ ಮೂಲದ ಕಾರ್ಮಿಕನೋರ್ವ ಮರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ಮಜೂರು ಗ್ರಾಮದ ಕರಂದಾಡಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ಕಾರ್ಮಿಕ ಸುಧೀರ್‌ ಮಾಂಝಿ (50) ಮೃತಪಟ್ಟಿದ್ದು, ಆತನ ಜತೆಗಿದ್ದ ಸಹ ಕಾರ್ಮಿಕರಾದ ರಾಮು ಮತ್ತು ಪ್ರಮೋದ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮರದಡಿ ಸಿಲುಕಿದ್ದ ಕಾರ್ಮಿಕರು
ಗ್ರೆಗೊರಿ ಲೂವಿಸ್‌ ಕೋಡ ಅವರ ಜತೆಗೆ ಕೆಲಸ ಮಾಡುತ್ತಿದ್ದ ಏಳು ಮಂದಿ ಬಿಹಾರ ಮೂಲದ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಮರ ಉರುಳಿ ಬಿದ್ದಾಗ ಮೂವರು ಕಾರ್ಮಿಕರು ಮರದಡಿಯಲ್ಲಿ ಸಿಲುಕಿಕೊಂಡಿದ್ದರು. ಅದರಲ್ಲಿ ಇಬ್ಬರನ್ನು ಜತೆಗಿದ್ದ ಕಾರ್ಮಿಕರು ರಕ್ಷಿಸಿ, ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ.

ಕೆಲವು ಗಂಟೆಗಳ ಕಾರ್ಯಾಚರಣೆ
ಮರ ಮತ್ತು ನೆಲದಡಿಯಲ್ಲಿ ಸಿಲುಕಿದ್ದ ಸುಧೀರ್‌ ಮಾಂಝಿ ಹೊರಗೆ ಬರಲಾಗದೇ ಮರದ ಅಡಿಯಲ್ಲಿ ಸಿಲುಕಿ ಒದ್ದಾಡುವಂತಾಯಿತು. ಸೋಮವಾರ ಮಧ್ಯಾಹ್ನ 11.30ರ ವೇಳೆಗೆ ಘಟನೆ ಸಂಭವಿಸಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಕಾರ್ಮಿಕರು ಮರ ತೆರವು ಮತ್ತು ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು.

ಸ್ಥಳಕ್ಕೆ ಆಗಮಿಸಿದ ಕಾಪು ಎಸ್ಐ  ಅಬ್ದುಲ್‌ ಖಾದರ್‌, ಕ್ರೈಂ ಎಸ್ಸೆಐ ಪುರುಷೋತ್ತಮ್‌ ಹಾಗೂ ಪೊಲೀಸ್‌ ಸಿಬಂದಿ ಕೂಡಾ ರಕ್ಷಣ ಕಾರ್ಯಾಚರಣೆ ನಡೆಸಿದರು. ಮೂರೂವರೆ ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಬಳಿಕ ಕಾರ್ಮಿಕನನ್ನು ಹೊರ ತೆಗೆದಿದ್ದು, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬಳಿಕ ಸೂರಿ ಶೆಟ್ಟಿ ನೇತೃತ್ವದಲ್ಲಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಯಿತು.

Advertisement

ಶಾಸಕ ಗುರ್ಮೆ ಸುರೇಶ್‌ ಭೇಟಿ
ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ಮೃತನ ಸಹೋದರ ಕಿಶೋರ್‌ ನೀಡಿರುವ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next