ಶಿರ್ವ: ಬೆಳ್ಳೆ ಮತ್ತು ಶಿರ್ವ ಗ್ರಾ.ಪಂ. ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳಿರುವ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾದ ಬೆಳ್ಳೆ ಮತ್ತು ಶಿರ್ವ ಗ್ರಾ.ಪಂ. ಗೆ ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ಮೆಡಿಕಲ್, ಆಸ್ಪತ್ರೆ, ಪೆಟ್ರೋಲ್ ಪಂಪ್ ಹೊರತುಪಡಿಸಿ ಬ್ಯಾಂಕ್, ಪಡಿತರ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಕಚೇರಿ, ವ್ಯಾಪಾರ ವಹಿವಾಟುಗಳಿಗೆ ನಿಷೇಧ ಹೇರಲಾಗಿತ್ತು. ಲಾಕ್‌ಡೌನ್ ವೇಳೆ ಕೈಕೊಂಡ ಕಟ್ಟುನಿಟ್ಟಿನ ಕ್ರಮವನ್ನು ಪರಿಶೀಲಿಸಿದ ಅವರು ಬೆಳ್ಳೆ ಗ್ರಾಮದ ಗಡಿಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಯಾರೂ ಅನಗತ್ಯಗಾಗಿ ಪ್ರವೇಶಿಸದಂತೆ ಬಿಗು ಕ್ರಮ ಕೈಗೊಳ್ಳಬೇಕೆಂದು ಪಿಡಿಒ ಮತ್ತು ಪೊಲೀಸರಿಗೆ ಸೂಚಿಸಿದರು.
ಶಿರ್ವ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೀಲ್ ಡೌನ್ ಆದ ಕೊರೊನಾ ಸೋಂಕಿತರ ಮನೆಗೆ ಭೇಟಿ ನೀಡಿದ ತಹಶೀಲ್ದಾರ್ ಅವರು ಸೋಂಕಿತರ ಮನೆಯವರೊಂದಿಗೆ ರೋಗಿಗಳ ಆರೋಗ್ಯ ಕ್ಷೇಮವನ್ನು ವಿಚಾರಿಸಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.
ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ, ಪಿಡಿಒ ವಸಂತಿ, ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್, ಪಿಡಿಒ ಅನಂತಪದ್ಮನಾಭ ನಾಯಕ್, ಎಎಸ್‌ಐ ವಿವೇಕಾನಂದ, ಗ್ರಾಮ ಕರಣಿಕ ವಿಜಯ್, ಸಹಾಯಕ ಭಾಸ್ಕರ್, ಪಂಚಾಯತ್ ಸಿಬಂದಿ ಪ್ರವೀಣ್, ಪೊಲೀಸ್ ಸಿಬಂದಿ ಉಪಸ್ಥಿತರಿದ್ದರು,