Advertisement

Kapu: ಸಮುದ್ರ ಮಧ್ಯದಲ್ಲಿ ಬೋಟ್‌ನಿಂದ 2 ಲಕ್ಷ ರೂ. ಮೌಲ್ಯದ ಮೀನು ದರೋಡೆ

02:09 AM Feb 01, 2024 | Team Udayavani |

ಕಾಪು: ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟನ್ನು ತಡೆದು ಮೀನುಗಾರರಿಗೆ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೀನು ಹಾಗೂ ಮೀನುಗಾರರ ಬಳಿಯಿದ್ದ ಮೊಬೈಲ್‌ ಫೋನ್‌ ಸಹಿತ ಸೊತ್ತುಗಳನ್ನು ದರೋಡೆಗೈದಿರುವ ಘಟನೆ ಕಾಪು ಲೈಟ್‌ ಹೌಸ್‌ ಸಮೀಪದಲ್ಲಿ ಮಂಗಳವಾರ ನಡೆದಿದೆ.

Advertisement

ಆಂಧ್ರಪ್ರದೇಶದ ಮೀನುಗಾರರಾದ ಪರ್ವತಯ್ಯ, ಕೊಂಡಯ್ಯ, ರಘು ರಾಮಯ್ಯ, ಶಿವರಾಜ್‌, ಕೆ. ಶೀನು, ಏಳುಮಲೆ, ಚಿನ್ನೋಡು, ರಾಜು ಅವರು ಜ. 27ರಂದು ಮಹಮ್ಮದ್‌ ಮುಸ್ತಫ್‌ ಬಾಷಾ ಅವರಿಗೆ ಸೇರಿದ ಮಿರಾಶ್‌ – 2 ಟ್ರಾಲ್‌ ಬೋಟ್‌ನಲ್ಲಿ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದು ಮೀನುಗಳನ್ನು ಹಿಡಿದುಕೊಂಡು ಮರಳಿ ಹೋಗುತ್ತಿರುವಾಗ ಜ. 30ರಂದು ಬೆಳಿಗ್ಗೆ 5 ಗಂಟೆಗೆ ಕಾಪು ಲೈಟ್‌ ಹೌಸ್‌ನಿಂದ 10 ನಾಟಿಕಲ್‌ ಮೈಲ್‌ ದೂರ ಸಮುದ್ರ ಮಧ್ಯದಲ್ಲಿ ಹಲ್ಲೆ ನಡೆಸಿ, ಮೀನುಗಳನ್ನು ದರೋಡೆಗೈದಿರುವುದಾಗಿ ತಿಳಿದು ಬಂದಿದೆ.

ಘಟನೆ ವಿವರ
ಹನುಮ ಜ್ಯೋತಿ ಹೆಸರಿನ ಪರ್ಸಿನ್‌ ಬೋಟ್‌ನಲ್ಲಿದ್ದ ಜನರ ಪೈಕಿ 7-8 ಜನರು ಟ್ರಾಲ್‌ ಬೋಟ್‌ ಒಳಗೆ ಹತ್ತಿ ಬೋಟ್‌ನಲ್ಲಿದ್ದ ಮೀನಿನ ಬಾಕ್ಸ್‌ಗಳನ್ನು ದರೋಡೆಗೈದಿದ್ದು ಈ ವೇಳೆ ಅವರನ್ನು ತಡೆಯಲು ಹೋದ ಮೀನುಗಾರರ ಪೈಕಿ ಶೀನು ಮತ್ತ ರಘು ರಾಮಯ್ಯ ಅವರನ್ನು ಪರ್ಸಿನ್‌ ಬೋಟ್‌ನ ಪಕ್ಕದಲ್ಲಿ ಬಂದ 5-7 ಜನರಿದ್ದ ನಾಡದೋಣಿಗೆ ಎತ್ತಿ ಹಾಕಿಕೊಂಡು ಹೋಗಿ ಹಲ್ಲೆ ನಡೆಸಿದರು. ಆಗ ಪರ್ಸಿನ್‌ ಬೋಟ್‌ನಲ್ಲಿದ್ದವರು ಟ್ರಾಲ್‌ ಬೋಟ್‌ನಲ್ಲಿದ್ದ 6 ಜನರಿಗೆ ಕೈಯಿಂದ ಹಾಗೂ ಮರದ ತುಂಡಿನಿಂದ ಹಲ್ಲೆ ನಡೆಸಿದರು. ಬಳಿಕ ನಾಡದೋಣಿಯಲ್ಲಿ ಕರೆದುಕೊಂಡು ಹೋದ ಶೀನು ಮತ್ತ ರಘು ರಾಮಯ್ಯ ಅ‌ವರನ್ನು ವಾಪಸು ಕರೆದುಕೊಂಡು ಬಂದು ಟ್ರಾಲ್‌ ಬೋಟ್‌ಗೆ ಹಾಕಿ, ಮೀನುಗಾರರ 4 ಮೊಬೈಲ್‌ ಮತ್ತು 2 ಲಕ್ಷ ರೂ. ಮೌಲ್ಯದ 12 ಬಾಕ್ಸ್‌ ಮೀನುಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

ಹಲ್ಲೆಯ ಪರಿಣಾಮ ಪರ್ವತಯ್ಯ, ಕೊಂಡಯ್ಯ ರಘುರಾಮಯ್ಯ, ಶಿವರಾಜ್‌ ಮತ್ತು ಶೀನು ಅವರಿಗೆ ಗಾಯಗಳಾಗಿವೆ. ಟ್ರಾಲ್‌ ಬೋಟ್‌ನಲ್ಲಿದ್ದ ಮೀನುಗಾರರು ಘಟನೆಯ ಸಮಯ ಹಲ್ಲೆ ನಡೆಸಿ ಸುಲಿಗೆ ಮಾಡಿಕೊಂಡು ಹೋದವರನ್ನು ಹಾಗೂ ಬೋಟ್‌ನ ಹೆಸರನ್ನು ಬೋಟ್‌ನಲ್ಲಿದ್ದ ಲೈಟ್‌ ಸಹಾಯದಿಂದ ನೋಡಿರುವುದಾಗಿ ಮೀನುಗಾರರು ತಿಳಿಸಿದ್ದಾರೆ ಎಂದು ಬೋಟ್‌ನ ಮಾಲಕ ಮಹಮ್ಮದ್‌ ಮುಸ್ತಫ್‌ ಬಾಷಾ ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next