Advertisement
ಲಕ್ಷ್ಮೀನಗರ ಕಾಲನಿಯಲ್ಲಿ 20ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿಯ ವ್ಯವಸ್ಥೆಯಿಲ್ಲ. ಹಿಂದೆ ನೀರು ಹರಿಯ ಲೆಂದು ಬಿಟ್ಟಿದ್ದ ತೋಡಿನ ಮೇಲೆಯೇ ಡಾಮರು ಹಾಕಿದ್ದು ಇದರಿಂದಾಗಿ ನೀರು ಹರಿದು ಹೋಗದಂತಾಗಿದೆ. ಚರಂಡಿ ವ್ಯವಸ್ಥೆಯಿಲ್ಲದೇ ಇರುವುದರಿಂದ ಸ್ವಲ್ಪ ಮಳೆ ಬಂದರೂ ಕೃತಕ ನೆರೆಯ ಭೀತಿ ಎದುರಾಗಿ ಬಿಡುತ್ತದೆ.
Related Articles
ಕಾಲನಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರವಿವಾರ ಸ್ಥಳೀಯರು ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿಯಿಂದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಮಸ್ಯೆಯನ್ನು ಪರಿಶೀಲಿಸಿದರು. ಪುರಸಭೆ ಎಂಜಿನಿಯರ್ ಅವರನ್ನೂ ಕರೆಯಿಸಿಕೊಂಡು ಅವ್ಯವಸ್ಥೆಗೆ ಕಾರಣಗಳೇನು ಎನ್ನುವದರ ಬಗ್ಗೆ ಮಾಹಿತಿ ಪಡೆದು, ನೀರಿನ ಸರಾಗ ಹರಿವಿಗೆ ಪೂರಕವಾಗುವಂತೆ ತೋಡನ್ನು ಬಿಡಿಸಿಕೊಟ್ಟರು.
Advertisement
ಪುರಸಭೆ ಎಂಜಿನಿಯರ್ ಪ್ರತಿಮಾ, ಪುರಸಭಾ ಸದಸ್ಯೆ ಅಶ್ವಿನಿ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಾವಿತ್ರಿ ಗಣೇಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
8ನೇ ವಾರ್ಡ್ ಲಕ್ಷ್ಮೀ ನಗರ ಕಾಲನಿಯ ಜನರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಫೋಟೋ ತೆಗೆದು ಕೂಡ ಕಳುಹಿಸಿದ್ದೇವೆ. ಆದರೆ ಸಮಸ್ಯೆ ಪರಿಹಾರವಾಗಿರಲಿಲ್ಲ. ವರ್ಷದಿಂದ ವರ್ಷಕ್ಕೆ ನೀರು ನಿಂತು ಉಂಟಾಗುವ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತಿತ್ತು. ಇದೀಗ ತಹಶೀಲ್ದಾರ್‌ಗೆ ಮನವಿ ನೀಡಿದ ತತ್‌ಕ್ಷಣ ಅವರು ಸ್ಥಳಕ್ಕೆ ಆಗಮಿಸಿ ಸೂಕ್ತವಾಗಿ ಸ್ಪಂದಿಸಿದ್ದಾರೆ.– ಧನಂಜಯ ಸಾಲ್ಯಾನ್, ಲಕ್ಷ್ಮೀ ನಗರ ಕಾಲನಿ ನಿವಾಸಿ ಲೇಔಟ್ ಮ್ಯಾಪ್ ಮತ್ತು ಟೌನ್ ಪ್ಲಾನಿಂಗ್‌ನ ನಕ್ಷೆಯಿಲ್ಲದೇ ಲೈಸೆನ್ಸ್ ನೀಡಿರುವುದೇ ಇಲ್ಲಿನ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ರಸ್ತೆಯೂ ಇಲ್ಲದೇ, ಚರಂಡಿಯೂ ಇಲ್ಲದೇ ಇರುವುದರಿಂದ ಮತ್ತು ಟೌನ್ ಪ್ಲಾನಿಂಗ್‌ನ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನೆ ನಿರ್ಮಿಸಿರುವುದರಿಂದ ಈ ರೀತಿಯ ತೊಂದರೆಗಳು ಎದುರಾಗಿವೆ. ಇಲ್ಲಿನದ್ದು ತಗ್ಗು ಪ್ರದೇಶವೂ ಆಗಿರುವುದರಿಂದ ಇಲ್ಲಿ ವಾಸ್ತವ್ಯವಿರುವವರಿಗೆ ತೊಂದರೆಯಾಗುತ್ತಿದೆ. ನೀರಿನ ಸರಾಗ ಹರಿವಿಗೆ ತಡೆ ಇರುವಲ್ಲಿ ತುರ್ತು ಕಾಮಗಾರಿಯಡಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಬಳಿಕ ಶಾಶ್ವತ ಕ್ರಮಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇವೆ.
– ಸಂತೋಷ್ ಕುಮಾರ್, ತಹಶೀಲ್ದಾರ್, ಕಾಪು