Advertisement

ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ: ಸಾಕು ಮಗಳನ್ನು ಕರೆದೊಯ್ದ ಪ್ರೇಮಿ,ನೆರವಾದ ಆರೋಪಿಗಳ ಬಂಧನ

12:40 AM Dec 19, 2023 | Team Udayavani |

ಕಾಪು: ಹಿರಿಯ ರಂಗಕರ್ಮಿ ಕೆ. ಲೀಲಾಧರ ಶೆಟ್ಟಿ ಮತ್ತು ಪತ್ನಿ ವಸುಂಧರಾ ಶೆಟ್ಟಿ ದಂಪತಿ ಸಾವಿಗೆ ಕಾರಣ ಎನ್ನಲಾದ ಸಾಕು ಮಗಳು, ಆಕೆಯನ್ನು ಮನೆಯಿಂದ ಅಪಹರಿಸಿದ ಪ್ರಿಯಕರ ಮತ್ತು ಆತನಿಗೆ ನೆರವಾದ ಮೂವರನ್ನು ಕಾಪು ಪೊಲೀಸರು ರವಿವಾರ ಕಾಸರಗೋಡಿನ ಕುಂಬಳೆಯಲ್ಲಿ ಬಂಧಿಸಿದ್ದಾರೆ.

Advertisement

ಬಾಲಕಿ ನೀಡಿದ ಮಾಹಿತಿಯಂತೆ ಆಕೆಯ ಪ್ರಿಯಕರ ಶಿರ್ವ ನಿವಾಸಿ ಗಿರೀಶ್‌ (19), ಆತನಿಗೆ ನೆರವಾದ ಶಿರ್ವದ ರೂಪೇಶ್‌ (20), ಪಡುಬಿದ್ರಿ ಪಾದೆಬೆಟ್ಟಿನ ಜಯಂತ್‌ (23) ಮತ್ತು ಮಜೂರು ನಿವಾಸಿ ಮೊಹಮ್ಮದ್‌ ಅಝೀಜ್‌ (21) ಅವರನ್ನು ಬಂಧಿಸಿ, ಎರಡು ಸ್ಕೂಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ
ಲೀಲಾಧರ ಶೆಟ್ಟಿ ಅವರ ಸಾಕು ಮಗಳು ಡಿ. 12ರಂದು ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದು ಇದರಿಂದ ಮನನೊಂದ ಲೀಲಾಧರ ಮತ್ತು ವಸುಂಧರಾ ದಂಪತಿ ಮಧ್ಯರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಈ ಬಗ್ಗೆ ಲೀಲಾಧರ ಅವರ ಅಳಿಯ ಮೋಹನ್‌ ಶೆಟ್ಟಿ ಪೊಲೀಸರಿಗೆ ದೂರು ನೀಡಿ, ಸೋದರಮಾವ ಲೀಲಾಧರ ಅವರ ಮನೆಗೆ ಕೆಲಸಕ್ಕೆ ಬಂದಿದ್ದ ಗಿರೀಶ್‌ ಎಂಬಾತ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿದ್ದ ಎಂದು ಆರೋಪಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು 2 ತಂಡಗಳಾಗಿ ಜಿಲ್ಲೆ ಮತ್ತು ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ತನಿಖೆ ನಡೆಸಿದರು. ಘಟನೆ ನಡೆದ ಆರನೇ ದಿನ ಬಾಲಕಿ ಸಹಿತ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಫ‌ಲರಾಗಿದ್ದಾರೆ.

ಸ್ಕೂಟಿಯಲ್ಲಿ ತೆರಳಿದ್ದರು
ಆರೋಪಿ ಗಿರೀಶ್‌ ತನ್ನ ಅಪ್ರಾಪ್ತ ವಯಸ್ಸಿನ ಪ್ರೇಮಿಯನ್ನು ಸ್ಕೂಟಿಯಲ್ಲಿ ಕುಳ್ಳಿರಿಸಿಕೊಂಡು ರಾತೋರಾತ್ರಿ ಶಿರ್ವ, ಮುದರಂಗಡಿ ಮಾರ್ಗವಾಗಿ ಪಡುಬಿದ್ರಿಗೆ ತೆರಳಿ ಅಲ್ಲಿಂದ ಮಂಗಳೂರಿಗೆ ತೆರಳುವ ಯೋಜನೆ ರೂಪಿಸಿದ್ದರು. ದಾರಿ ಮಧ್ಯೆ ಪಡುಬಿದ್ರಿಯಲ್ಲಿ ಸ್ಕೂಟಿ ಕೈಕೊಟ್ಟಿದ್ದು, ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮತ್ತೊಂದು ಸ್ಕೂಟಿ ತರಿಸಿಕೊಂಡು ಅಲ್ಲಿಂದ ಮಂಗಳೂರು ಮೂಲಕ ಕುಂಬಳೆಗೆ ತೆರಳಿದ್ದನು. ಗಿರೀಶ್‌ಗೆ ನೆರವಾಗಿದ್ದ ರೂಪೇಶ್‌, ಅಝೀಜ್‌ ಮತ್ತು ಜಯಂತ್‌ ಮರುದಿನ ಕುಂಬಳೆಗೆ ತೆರಳಿ ಪ್ರೇಮಿಗಳನ್ನು ಕೂಡಿಕೊಂಡಿದ್ದರು.

Advertisement

ಗಿರೀಶ್‌ ವಿರುದ್ಧ ಅಪ್ರಾಪ್ತ ವಯಸ್ಸಿನ ಹುಡುಗಿಯ ಅಪಹರಣ, ಅತ್ಯಾಚಾರ ಸಹಿತ ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. ಉಳಿದ ಮೂವರು ಆರೋಪಿಗಳ ವಿರುದ್ಧ ಮೊದಲನೇ ಆರೋಪಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಉಡುಪಿಯ ಸಖಿ ಕೇಂದ್ರ(ಮಕ್ಕಳ ಕಲ್ಯಾಣ ಸಮಿತಿ)ಕ್ಕೆ ದಾಖಲಿಸ
ಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೈಯಲ್ಲಿ ಹಣವಿಲ್ಲದೇ ಬಾಲಕಿಯನ್ನು ಕರೆದೊಯ್ದ!
ಆರೋಪಿ ಗಿರೀಶ್‌ ಬಳಿ ಹಣವಿಲ್ಲದಿದ್ದರೂ ಪ್ರಿಯತಮೆಯನ್ನು ಕರೆದೊಯ್ಯುವ ಸಾಹಕ್ಕೆ ಕೈಹಾಕಿದ್ದನು. ತನ್ನ ಬಳಿಯಿದ್ದ ಮೊಬೈಲ್‌ ಫೋನನ್ನು ಮಾರಾಟ ಮಾಡಿ ಸಿಕ್ಕಿದ 2,500 ರೂ. ಹಿಡಿದುಕೊಂಡು ತೆರಳಿದ್ದ. ಆ ಮೊತ್ತವನ್ನು ತಿರುಗಾಟದ ವೇಳೆ ಖರ್ಚು ಮಾಡಿದ್ದನು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.

ಪೊಲೀಸರಿಗೆ ಸಾರ್ವಜನಿಕರ ಶ್ಲಾಘನೆ
ಘಟನೆ ಸಂಭವಿಸಿ ಆರು ದಿನಗಳ ಅವಧಿಯಲ್ಲಿ ವಿವಿಧೆಡೆ ತನಿಖೆ ನಡೆಸಿ ಸಂತ್ರಸ್ತ ಬಾಲಕಿಯ ಸಹಿತ ಆರೋಪಿಗಳು ಕುಂಬಳೆಯಲ್ಲಿ ಇರುವುದನ್ನು ಪತ್ತೆಹಚ್ಚಿ ಕರೆತಂದಿರುವ ಕಾಪು ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಕಾಪು ಎಸ್‌ಐ ಅಬ್ದುಲ್‌ ಖಾದರ್‌ ನೇತೃತ್ವದಲ್ಲಿ ಕ್ರೈಂ ಸಿಬಂದಿ ನಾರಾಯಣ್‌, ರುಕ್ಮಯ ಮತ್ತು ಪಡುಬಿದ್ರಿ ಠಾಣೆಯ ರಾಜೇಶ್‌ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next