Advertisement
ಕಾಪುವಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ – ಮಂಗಳೂರು ರಸ್ತೆಯ ಬದಿಯಲ್ಲಿ ಶತಮಾನಗಳ ಕಾಲದಿಂದಲೂ ನಡೆದುಕೊಂಡು ಬಂದಿರುವ ವಾರದ ಸಂತೆಯು ಹಿಂದೆ ಹೆದ್ದಾರಿಗೆ ತಾಗಿಕೊಂಡಂತೆಯೇ ನಡೆಯುತ್ತಿದ್ದರೆ, ಈಗ ಅದು ಸರ್ವಿಸ್ ರಸ್ತೆಗೆ ತಾಗಿಕೊಂಡೇ ನಡೆಯುತ್ತಿರುವುದು ಟ್ರಾಫಿಕ್ ಜಾಮ್‌ಗೆ ಮುಖ್ಯ ಕಾರಣವಾಗಿದೆ. ಅದರೊಂದಿಗೆ ಸಂತೆಯೊಳಗೆ ಬರುವ ಗ್ರಾಹಕರು ಮತ್ತು ಸಂತೆ ವ್ಯಾಪಾರಸ್ಥರು ತಮ್ಮ ವಾಹನಗಳನ್ನು ಇದೇ ರಸ್ತೆಯಲ್ಲೇ ನಿಲ್ಲಿಸಿ ಸಂತೆಯೊಳಗೆ ಬರುತ್ತಾರೆ. ಉಡುಪಿ – ಮಂಗಳೂರು ಸರ್ವೀಸ್ ರಸ್ತೆಯ ಹೊಸ ಮಾರಿಗುಡಿ ಜಂಕ್ಷನ್‌ನಿಂದ ಹಿಡಿದು ಮಯೂರಾ ಹೊಟೇಲ್‌ವರೆಗಿನ ರಸ್ತೆಯುದ್ದಕ್ಕೂ ವಾಹನಗಳನ್ನು ಪಾರ್ಕ್ ಮಾಡುವುದರಿಂದಲೂ ಟ್ರಾಫಿಕ್ ಜಾಮ್ ಹೆಚ್ಚಾಗುತ್ತದೆ.
ವೇಗವಾಗಿ ಚಲಿಸುವ ಬಸ್‌ಗಳಿಗೆ ಎದುರಾಗಿ ಬರುವ ರಿಕ್ಷಾ, ಕಾರು ಸಹಿತ ಇತರ ವಾಹನ ಸವಾರರು ತಮ್ಮ ವಾಹನಗಳನ್ನು ಹಿಮ್ಮುಖವಾಗಿ ಚಲಾಯಿಸಿ ಕೊಂಡು ಹೋಗುವುದು ಅನಿವಾರ್ಯವಾಗಿ ಬಿಡುತ್ತದೆ. ಹಿಮ್ಮುಖ ಚಲನೆಯ ವೇಳೆ ಬೇರೆ ವಾಹನಗಳಿಗೆ ಸ್ವಲ್ಪ ತಾಗಿದರೆ ಅದುವೇ ದೊಡ್ಡ ಕಿರಿಕಿರಿಯಾಗಿ ಬಿಡುತ್ತದೆ. ಅದೇ ಜಾಗದಲ್ಲಿ ಪೊಲೀಸರೇನಾದರೂ ಇದ್ದರೆ ಅವರಿಂದಲೂ ಬೈಗಳುದ ಸುರಿಮಳೆಯನ್ನು ಕೇಳಬೇಕಾದ ಅನಿವಾರ್ಯತೆ ವಾಹನ ಸವಾರರದ್ದಾಗಿರುತ್ತದೆ. ಕಾಪುವಿನ ವಾರದ ಸಂತೆಗೆ ಬರುವ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವುದು, ಸರ್ವಿಸ್ ರಸ್ತೆಗೆ ತಾಗಿಕೊಂಡಂತೆ ಹಾಕುವ ಅಂಗಡಿಗಳನ್ನು ತೆರವುಗೊಳಿಸುವುದು, ವಾರದ ಸಂತೆಯಂದು ಸರ್ವೀಸ್ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡುವುದು, ವಾರದ ಸಂತೆ ನಡೆಯುವ ಬದಿಯ ಸರ್ವಿಸ್ ರಸ್ತೆಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ಪ್ರವೇಶಿಸದಂತೆ ನಿರ್ಬಂಧಿಸುವುದು, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುವವರಿಗೆ ದಂಡ ಹಾಕುವುದು ಮೊದಲಾದ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ವಾರದ ಸಂತೆಯಿಂದ ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
Related Articles
ವಾರದ ಸಂತೆಯವರು ಸರ್ವಿಸ್ ರಸ್ತೆಗೆ ತಾಗಿಕೊಂಡೇ ಅಂಗಡಿಯ ಟೆಂಟ್ ಹಾಕುವುದರಿಂದ ಹಾಗೂ ತಮ್ಮ ದ್ವಿಚಕ್ರ ಸಹಿತವಾಗಿ ಇತರ ವಾಹನಗಳನ್ನು ಕೂಡಾ ಅಲ್ಲೇ ಪಾರ್ಕ್ ಮಾಡಿ ಬರುವುದರಿಂದ ಉಡುಪಿ – ಮಂಗಳೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ಬಸ್‌ಗಳು, ಕಾಪು ಪೇಟೆಯೊಳಗೆ ಬರುವ ಮತ್ತು ಪೇಟೆಯಿಂದ ಹೊರ ಬಂದು ಸರ್ವಿಸ್ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ, ರಿಕ್ಷಾ ಮತ್ತು ಕಾರು ಸವಾರರಿಗೆ, ಕಾಪು ಅಂಡರ್ ಪಾಸ್‌ನಿಂದ ಪೇಟೆಗೆ ಬರುವ ವಾಹನಗಳ ಸವಾರರಿಗೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತಿದೆ.
Advertisement
ಪರ್ಯಾಯ ವ್ಯವಸ್ಥೆಗೆ ಪ್ರಯತ್ನಕಾಪುವಿನ ವಾರದ ಸಂತೆಯಂದು ರಾ.ಹೆ. 66ರ ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಲು ಪ್ರತೀ ಶುಕ್ರವಾರ ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಆ ಮೂಲಕ ಟ್ರಾಫಿಕ್ ಜಾಮ್ ತಪ್ಪಿಸಲು ನಮ್ಮ ಕಡೆಯಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಓವರ್ ಬ್ರಿಡ್ಜ್ ಪಕ್ಕದ ಪ್ರದೇಶದಲ್ಲಿ ಬೈಕ್ ಇಡಲು ವ್ಯವಸ್ಥೆ ಮಾಡಿ ಕೊಡುವ ಅಗತ್ಯವಿದೆ. ನಮ್ಮೊಂದಿಗೆ ವರ್ತಕರು ಮತ್ತು ಗ್ರಾಹಕರು ಕೂಡಾ ಪೂರಕವಾಗಿ ಸ್ಪಂದಿಸುವ ಅಗತ್ಯವಿದೆ. ಈ ಬಗ್ಗೆ ಪುರಸಭೆಗೂ ಪತ್ರ ಬರೆದು, ಟ್ರಾಫಿಕ್ ಜಾಮ್ ತಪ್ಪಿಸಲು ಮತ್ತು ವಾರದ ಸಂತೆಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೋ ಎನ್ನುವುದನ್ನು ಪರಿಶೀಲಿಸುವಂತೆ ಒತ್ತಾಯಿಸಲಾಗಿದೆ.
– ರಾಜಶೇಖರ್ ಬಿ.ಸಾಗನೂರು, ಎಸ್. ಐ. ಕಾಪು ಪೊಲೀಸ್ ಠಾಣೆ ಸಮರ್ಪಕ ವ್ಯವಸ್ಥೆ ಇಲ್ಲ
ಕಾಪುವಿನ ವಾರದ ಸಂತೆಯು ಕಳೆದ ಹಲವು ವರ್ಷಗಳಿಂದ ಅತ್ಯಂತ ಇಕ್ಕಟ್ಟಾದ ಪ್ರದೇಶದಲ್ಲಿ ನಡೆಯುತ್ತಿದ್ದು ಇಲ್ಲಿ ಸಮರ್ಪಕ ಸ್ಥಳಾವಕಾಶದ ಕೊರತೆಯಿದೆ. ಸಂತೆ ಮಾರ್ಕೆಟ್ ಬಳಿಯ ಖಾಸಗಿ ಜಾಗದಲ್ಲಿ ಸಂತೆ ನಡೆಯುತ್ತಿತ್ತು. ಈಗ ಅಲ್ಲಿ ಸಂತೆ ನಡೆಯಲು ಅವಕಾಶ ಸಿಗುತ್ತಿಲ್ಲ. ಪರ್ಯಾಯ ಸ್ಥಳಕ್ಕೆ ಸಂತೆಯನ್ನು ವರ್ಗಾಯಿಸಲು,ಅದಕ್ಕೆ ಪೂರಕವಾಗುವಂತೆ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆಯನ್ನು ಜೋಡಿಸಿಕೊಡಲು ಪ್ರಯತ್ನಿಸಲಾಗುವುದು.
– ವೆಂಕಟೇಶ ನಾವಡ ಮುಖ್ಯಾಧಿಕಾರಿ, ಕಾಪು ಪುರಸಭೆ ಶೀಘ್ರ ಪರಿಹಾರದ ಭರವಸೆ
ವಾರದ ಸಂತೆಗೆ ಬರುವ ಗ್ರಾಹಕರು ತಮ್ಮ ಬೈಕ್‌ಗಳನ್ನು ಸರ್ವಿಸ್ ರಸ್ತೆಯಲ್ಲೇ ನಿಲ್ಲಿಸುವುದರಿಂದ ಮತ್ತು ಸಂತೆಯ ಅಂಗಡಿಗಳನ್ನು ಮಾರುಕಟ್ಟೆಯ ಪ್ರವೇಶ ದ್ವಾರದ ಬಳಿಯೇ ಇಡುವುದರಿಂದ ಮಾರುಕಟ್ಟೆಯ ಒಳಗೆ ಬರುವ ಗ್ರಾಹಕರಿಗೆ ಮತ್ತು ಅಂಗಡಿ ಮಾಲಕರಿಗೆ ತೊಂದರೆ ಉಂಟಾಗುತ್ತಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಈಗಾಗಲೇ ಪುರಸಭೆಗೂ ಮನವಿ ಮಾಡಿದ್ದೇವೆ. ಶೀಘ್ರ ಸಮಸ್ಯೆ ಬಗೆ ಹರಿಸುವ ಭರವಸೆ ದೊರಕಿದೆ.
– ಹರೀಶ್ ಶೆಟ್ಟಿ, ವ್ಯಾಪಾರಸ್ಥರು, ಕಾಪು ಮಾರುಕಟ್ಟೆ - ರಾಕೇಶ್ ಕುಂಜೂರು