Advertisement
ಔಷಧೀಯ ಸಸ್ಯಗಳು, ಅಮೂಲ್ಯವಾದ ಖನಿಜ ಸಂಪತ್ತು ಹೊಂದಿರುವ ಕಪ್ಪತ್ತಗಿರಿಗೆ ಮತ್ತೆ ಗಣಿಗಾರಿಕೆಯ ಆಪತ್ತು ಶುರುವಾಗಿದೆ. ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು, ನಿಸರ್ಗದ ಕೊಡುಗೆ ಉಳಿಸಬೇಕೆಂದು ಆಗ್ರಹಿಸಿ ಲಿಂ| ತೋಂಟದ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಸ್ಥಳೀಯರು ನಡೆಸಿದ ನಿರಂತರ ಹೋರಾಟದ ಫಲವಾಗಿ ಹಂತ ಹಂತವಾಗಿ ಸಂರಕ್ಷಿತ ಅರಣ್ಯ, ವನ್ಯಜೀವಿಧಾಮದ ಸ್ಥಾನಮಾನ ಹೊಂದಿದೆ. ಪ್ರಸ್ತಾವನೆಯಲ್ಲಿ ಏನೇನಿದೆ?: ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ 244.15 ಚದುರ ಕಿ.ಮೀ. ಪ್ರದೇಶವನ್ನು 2019ರ ಮೇ 16ರಂದು ವನ್ಯಜೀವಿ ಧಾಮವನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆ. ವನ್ಯಜೀವಿ ಧಾಮದಲ್ಲಿರುವ ವನ್ಯಜೀವಿಗಳ ಸ್ವಚ್ಛಂದ ಜೀವನಕ್ಕೆ ಧಕ್ಕೆಯಾಗದಿರಲಿ ಎಂಬ ಉದ್ದೇಶದಿಂದ 6ಕಿ.ಮೀ.ವರೆಗೆ ಪರಿಸರ ಸೂಕ್ಷ್ಮ ವಲಯವನ್ನಾಗಿಸಲು ಗದಗ ಅರಣ್ಯ ಉಪಸಂರಕ್ಷಣಾಧಿಕಾರಿ ಕಚೇರಿ ಪ್ರಸ್ತಾವನೆ ಸಲ್ಲಿಸಿತ್ತು. ಹೀಗಾದಲ್ಲಿ ಗದಗ ಜಿಲ್ಲೆಯ 49, ಬಳ್ಳಾರಿ ಜಿಲ್ಲೆಯ ನಾಲ್ಕು ಸೇರಿ 53 ಗ್ರಾಮಗಳು ಬಫರ್ ಝೋನ್‌ಗೆ ಒಳಪಡಲಿದ್ದವು.
Related Articles
Advertisement
ಪರಿಷ್ಕರಣೆಗೆ ಆದೇಶ: ಈ ನಡುವೆ ಇಕೋ ಸೆನ್ಸ್‌ಟಿವ್ ಝೋನ್ ರಚನೆಗೆ ಸಿದ್ಧಪಡಿಸಿದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿ ನಾಲ್ಕು ತಿಂಗಳಾಗಿವೆ. ವಿಧಾನಸಭೆ ಉಪ ಚುನಾವಣೋತ್ತರ ರಾಜಕೀಯ ಚಟುವಟಿಕೆಗಳು, ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಗ್ನವಾಗಿದ್ದ ರಾಜ್ಯ ಸರಕಾರ, ಎದುರಾಗಬಹುದಾದ ಹೋರಾಟ ಹತ್ತಿಕ್ಕಲು ಇದೇ ಸಕಾಲ ಎಂದು ಭಾವಿಸಿದಂತಿದ್ದು, ಇಎಸ್‌ಜೆಡ್ ಕರಡು ಪರಿಷ್ಕರಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿ, ಇತ್ತೀಚೆಗೆ ಕರಡು ವಾಪಸ್ ಕಳುಹಿಸಿದೆ.
ವನ್ಯಜೀವಿಗಳ ಜೀವನ ನಿಯಂತ್ರಿಸಲು ಸಾಧ್ಯವಿಲ್ಲ. ಅವುಗಳ ಮುಕ್ತತೆಗೆ ಬಫರ್ ಝೋನ್ ಮಾಡಲಾಗುತ್ತದೆ. ಈ ಪ್ರಸ್ತಾವನೆ ಬದಲಾವಣೆಯಲ್ಲಿ ವೈಯಕ್ತಿಕ ಹಿತಾಸಕ್ತಿ ಅಡಗಿದೆ. ವ್ಯಕ್ತಿಗಳ ಸ್ವಾರ್ಥಕ್ಕಾಗಿ ಇಡೀ ಸಮುದಾಯ ಬಲಿ ಕೊಡಬಾರದು. ಜನರ ಜೀವನಾಡಿ ಕಪ್ಪತ್ತಗುಡ್ಡದ ಸಂರಕ್ಷಣೆಗೆ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ತಕ್ಷಣವೇ ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು. -ಡಾ| ತೋಂಟದ ಸಿದ್ಧರಾಮ ಶ್ರೀ, ಗದಗ-ಡಂಬಳ
ವನ್ಯಜೀವಿ ಧಾಮದ ಇಎಸ್‌ಜೆಡ್‌ನ್ನು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರಡು ರಚಿಸಿ, ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗಿ, ಕೆಲ ಪರಿಷ್ಕರಣೆ ಮಾಡಿಕೊಡುವಂತೆ ಪ್ರಸ್ತಾವನೆ ವಾಪಸ್ ಕಳಿಸಿದೆ. ಅದರಂತೆ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ, ಯಾವೆಲ್ಲ ಬದಲಾವಣೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. -ಸೂರ್ಯಸೇನ್, ಡಿಸಿಎಫ್.
– ವೀರೇಂದ್ರ ನಾಗಲದಿನ್ನಿ