Advertisement

ಕಪ್ಪತಗುಡ್ಡ-ಮಹದಾಯಿಗೆ ಸೂಕ್ತ ಸ್ಪಂದನೆ: ಸಿಎಂಗೆ ಹೊರಟ್ಟಿ ಪತ್ರ

02:45 PM Mar 15, 2017 | |

ಹುಬ್ಬಳ್ಳಿ: ಕಪ್ಪತಗುಡ್ಡದ ಸಂರಕ್ಷಣೆ ಹಾಗೂ ಮಹದಾಯಿ ವಿಷಯದಲ್ಲಿ ರಾಜ್ಯ ಸರಕಾರ ನಡೆದುಕೊಳ್ಳುತ್ತಿರುವ ವಿಳಂಬ ಧೋರಣೆಯಿಂದ ಉತ್ತರ ಕರ್ನಾಟಕದ ಜನತೆಗೆ ತೀವ್ರ ನಿರಾಸೆವುಂಟಾಗಿದೆ. ಈ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. 

Advertisement

ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, ಕಪ್ಪತಗುಡ್ಡ ಅಮೂಲ್ಯವಾದ ಸಸ್ಯ ಸಂಪತ್ತು ಹಾಗೂ ಔಷಧಿ ಸಸ್ಯಗಳನ್ನು ಹೊಂದಿದೆ ಎಂದು ಹಲವಾರು ತಜ್ಞರು, ಸಂಶೋಧಕರು ಹಾಗೂ ಇಡೀ ನಾಡೆ ಒಪ್ಪಿಕೊಂಡಿದೆ. ಕಪ್ಪತಗುಡ್ಡವನ್ನು ಸಂರಕ್ಷಿಸುವ ಮೂಲಕ ನಾಡಿನ ಸಂಪತ್ತನ್ನು ಕಾಯ್ದುಕೊಂಡು ಹೋಗುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ. 

ಅದೇ ನಿಟ್ಟಿನಲ್ಲಿ ಉತ್ತರ ಕರ್ನಾಟಕದ 9 ಜಿಲ್ಲೆಗಳ ಜೀವನದಿಯಾದ ಮಹದಾಯಿ ಈ ಭಾಗದ ಲಕ್ಷಾಂತರ ಜನರ ದಾಹ ಇಂಗಿಸುವ ಏಕೈಕ ಜಲಸಂಪತ್ತು. ಈ ಭಾಗದ ರೈತರ ಹಾಗೂ ಜನಸಾಮಾನ್ಯರ ಜೀವರಕ್ಷಣೆಗೆ ಮಹದಾಯಿ ಅತ್ಯಮೂಲ್ಯವಾಗಿದೆ. ಕಪ್ಪತಗುಡ್ಡ ಹಾಗೂ ಮಹದಾಯಿ ವಿಷಯದಲ್ಲಿ ಸರಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಕೆಲವೇ ಕೆಲವು ಜನರ ಸ್ವತ್ತನ್ನಾಗಿಸುವ ಹಾಗೂ ಹಿತಾಸಕ್ತಿ ಕಾಯುವ ಹುನ್ನಾರ ಅಡಗಿದೆ ಎನಿಸುತ್ತದೆ. 

ಕಪ್ಪತಗುಡ್ಡ ವಿಷಯದಲ್ಲಿ ರಾಜ್ಯ ಸರಕಾರ ದ್ವಂದ್ವ ನೀತಿ ಪ್ರದರ್ಶಿಸಿರುವುದು ಸಾಕಷ್ಟು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ. ಕಪ್ಪತಗುಡ್ಡ ವಿಷಯದಲ್ಲಿ ಮುಖ್ಯಮಂತ್ರಿಗಳು ಒಂದೆಡೆ ಜನರ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯವೆಂದು ಹೇಳಿಕೆ ನೀಡುವ ಮೂಲಕ ಹೋರಾಟಗಾರರಿಗೆ ಒಂದೆಡೆ ಉತ್ಸಾಹ ಹಾಗೂ ದಾರಿ ತಪ್ಪಿಸುತ್ತಿದ್ದಾರೆ ಎನಿಸುತ್ತದೆ.

ಕಳೆದ ತಿಂಗಳು 20ರಂದು ನಿಮ್ಮಅಧ್ಯಕ್ಷತೆಯಲ್ಲಿ ನಡೆದ ವನ್ಯಜೀವಿ ಮಂಡಳಿ  ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಇಡೀ ಸಭೆ ತಮಗೆ ಅಧಿಕಾರ ನೀಡಿತ್ತು. ಆದರೆ ನೀವು ವಿಳಂಬ ನೀತಿ ಅನುಸರಿಸಿದ್ದರ ಪರಿಣಾಮಬಂಡವಾಳ ಶಾಹಿಗಳ ಕೆಲ ಹಿಂಬಾಲಕರಿಂದ  ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗುವಂತಾಯಿತು. ಇದರ ಹಿಂದೆ ಕಾಣದ ಶಕ್ತಿ ನಿಮ್ಮ ಕೈಯನ್ನು ಕಟ್ಟಿಕಿದ್ದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. 

Advertisement

ಮಹದಾಯಿ ವಿಷಯವಾಗಿ ನರಗುಂದದಲ್ಲಿ ನಡೆಯುತ್ತಿರುವ ನಿರಂತರ ಹೋರಾಟ 600 ದಿನ ದಾಟಿದೆ. ಈ ಬಗ್ಗೆ ಸರಕಾರಗಳು ಸ್ಪಂದನೆ ತೋರದಿರುವ ಬಗ್ಗೆ ರೈತರಿಗೆ ನೋವುಂಟು ಮಾಡಿದೆ. ಉತ್ತರ ಕರ್ನಾಟಕ ಜನತೆಯ ನೋವು ಸಂಕಷ್ಟಗಳು, ತಾರತಮ್ಯ, ಮಲತಾಯಿ ಧೋರಣೆ ಸರಕಾರಕ್ಕೆ ಅರ್ಥವಾಗದಿರುವುದು ವಿಷಾದದ ಸಂಗತಿ. ನೆಲ-ಜಲ-ಭೂಮಿ ವಿಷಯದಲ್ಲಿ ನೀವು ಮೊದಲಿನಿಂದಲೂ ಹೋರಾಟಗಳನ್ನು ಮಾಡಿಕೊಂಡು ಬಂದವರು.

ನಿಮ್ಮ ನಡೆ-ನುಡಿ ನಿರ್ಧಾರಗಳು ಜನಪರವಾಗಿದ್ದವು. ಆದರೆ ಇತ್ತೀಚೆಗೆ ನೀವು ಈ ಸಂಗತಿಗಳಿಗೆ ಸ್ಪಂದಿಸದಿರುವುದು, ನಾಡಿನ ಸಂಪತ್ತು ಸಂರಕ್ಷಣೆಗೆ ದಿಟ್ಟ ನಿರ್ಧಾರ ಕೈಗೊಳ್ಳದಿರುವುದು ನೋವು ತಂದಿದೆ.ನನ್ನ 37 ವರ್ಷದ ಅನುಭವದಲ್ಲಿ ಹಲವಾರು ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಅವರೆಲ್ಲರಿಗಿಂತಲೂ ನೀವೊಬ್ಬ ಅತ್ಯುತ್ತಮ  ಜನಪರ ಮುಖ್ಯಮಂತ್ರಿ ಆಗುತ್ತೀರೆಂಬ ಭರವಸೆ ಇಟ್ಟುಕೊಂಡಿದ್ದೆ.

ಆದರೆ ತಮ್ಮ ಇತ್ತೀಚಿನ ನಿಲುವು, ನಿರ್ಧಾರಗಳು ನನ್ನಂತವನಿಗೂ ಬೇಸರವೆನಿಸುತ್ತಿವೆ. ಕಪ್ಪತಗುಡ್ಡ ಹಾಗೂ ಮಹದಾಯಿ ವಿಷಯವಾಗಿ ಈ ಸಾಲಿನ ಬಜೆಟ್‌ ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಅನುವು ಮಾಡಿಕೊಟ್ಟು ಈ ಭಾಗಕ್ಕೆ ಆದ ಅನ್ಯಾಯ ಸರಿಪಡಿಸಿ ಉತ್ತರ ಕರ್ನಾಟಕ ಜನತೆಗೆ ಪ್ರೀತಿಗೆ ನೀವು ಪಾತ್ರರಾಗುತ್ತೀರೆಂಬ ಭರವಸೆ ಮೂಡಿಸಬೇಕಿದೆ ಎಂದು ಹೊರಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next