ಕಂಪ್ಲಿ: ಅತ್ಯಧಿಕ ಇಳುವರಿ ಪಡೆಯಬೇಕೆನ್ನುವ ಅತಿಯಾದ ಆಸೆಯಿಂದ ಹಾಗೂ ಕೇವಲ ಒಂದೇ ಬೆಳೆಗೆ ಅಂಟಿಕೊಂಡು ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ನಿರಂತರ ನಷ್ಟ ಅನುಭವಿಸುತ್ತಿದ್ದು, ಇದರ ಬದಲಾಗಿ ಮಿತ ನೀರಾವರಿ ಹಾಗೂ ಬಹುಬೆಳೆ ಪದ್ಧತಿಯಿಂದ ಉತ್ತಮ ಆದಾಯ ಗಳಿಸಬಹುದಾಗಿದೆ ಎಂದು ಮೈಸೂರಿನ ಉಳುಮೆ ಪ್ರತಿಷ್ಠಾದ ನೈಸರ್ಗಿಕ ಕೃಷಿಕ ಅವಿನಾಶ್ ಟಿ.ಜಿ.ಎಸ್. ತಿಳಿಸಿದರು.
ಅವರು ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಕೃಷಿ ಇಲಾಖೆ, ಮೈಸೂರಿನ ಉಳುಮೆ ಪ್ರತಿಷ್ಠಾನ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕ, ಸಾಂಗತ್ರಯ ಸಂಸ್ಕೃತ ಪಾಠಶಾಲೆ ಮತ್ತು ಅಕ್ಕಿಗಿರಣಿ ಮಾಲೀಕರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಎರಡನೇ ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಮೃದ್ಧ ನೀರಾವರಿ ಪ್ರದೇಶವನ್ನು ಹೊಂದಿರುವ ಜಿಲ್ಲೆಯಲ್ಲಿ ರೈತರು ಭತ್ತ, ಬಾಳೆ, ಕಬ್ಬು ಸೇರಿದಂತೆ ಕೆಲವೇ ಬೆಳೆಗಳಿಗೆ ಜೋತು ಬಿದ್ದಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಲಾಭವನ್ನು ಗಳಿಸುತ್ತಿಲ್ಲ. ಭೂಮಿಗೆ ಯತೇಚ್ಚವಾಗಿ ನೀರು ಮತ್ತು ರಸಗೊಬ್ಬರಗಳನ್ನು ಬಳಸುವುದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಂಡಿದೆ ಎಂದು ತಿಳಿಸಿದ ಅವರು ರೈತರು ತಮ್ಮ ಜಮೀನಿನಲ್ಲಿ ವಿಂಗಡಣೆ ಮಾಡಿಕೊಂಡು ವಿವಿಧ ಬೆಳೆಗಳನ್ನು ಮಾಸಿಕವಾಗಿ ಕಟಾವಿಗೆ ಬರುವಂತೆ ನಾಟಿ ಮಾಡಿದರೆ ಪ್ರತಿ ತಿಂಗಳು ನಿರೀಕ್ಷಿತ ಆದಾಯ ಕಾಣಬಹುದಾಗಿದ್ದು, ಈ ಬಗ್ಗೆ ರೈತರು ಗಮನ ಹರಿಸಬೇಕು. ಜೊತೆಗೆ ವಿಷಪೂರಿತ ರಾಸಾಯನಿಕ ಬಳಕೆ ಕಡಿಮೆ ಮಾಡುವುದರ ಜೊತೆಗೆ ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಸುವುದರಿಂದ ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಉತ್ತಮ ಆದಾಯವನ್ನು ಪಡೆಯಬಹುದೆಂದರು.
ಇಂದು ಭೂಮಿ ಮತ್ತು ಮನುಷ್ಯನಿಗೆ ಇರುವ ಅವಿನಾಭಾವ ಸಂಬಂಧದ ಎಳೆ ತಪ್ಪಿದೆ. ಅಂತಃಕರಣ ಕಳೆದುಕೊಂಡಿರುವ ಮನುಷ್ಯ ಭೂಮಿಯನ್ನು ಧ್ವಂಸಿಸುತ್ತ ಅಸ್ಥಿಪಂಜರವಾಗಿ ಮಾಡಿದ್ದಾನೆ. ಮನುಷ್ಯ ತಾನು ಪ್ರಕೃತಿಗಿಂತ ಬೇರೆ ಅಂದುಕೊಂಡಿರುವುದೋ ಈ ಎಲ್ಲ ದುರಂತಕ್ಕೆ ಕಾರಣ ಎಂದು ಕಳವಳ ವ್ಯಕ್ತಪಡಿಸಿದ ಅವರು ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿಯನ್ನು ಮರೆತಿದ್ದೇವೆ. ಹಾಗಾಗಿ ಹೆಚ್ಚಿನ ತೀವ್ರತೆಯಿಂದ ಕೂಡಿದ ಬೆಳಕು ಬೆಳೆಗಳಿಗೆ ತಗಲುತ್ತಿರುವುದರಿಂದ ದ್ಯುತಿ ಸಂಶ್ಲೇಷಣಾ ಕ್ರಿಯೆಯ ಕಾರ್ಯಕ್ಷಮತೆ ಕ್ಷೀಣಿಸುತ್ತಿದ್ದು, ಬೆಳೆಗಳ ಬೆಳೆವಣಿಗೆ ಕುಂಠಿತಗೊಳ್ಳುತ್ತಿದೆ. ಈ ಕಾರಣದಿಂದ ಬೆಳಕಿನ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರಿಗೆ ಸೂಚಿಸಿದರು.
ಎರಡನೇ ದಿನದ ಕಾರ್ಯಾಗಾರದಲ್ಲಿ ತಾಲೂಕಿನ ಹಾಗೂ ಬೇರೆ ತಾಲೂಕುಗಳ ಅನೇಕ ರೈತರು, ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಡಾ| ಜಂಬುನಾಥ್‌ಗೌಡ, ಕೃಷಿ ಅಧಿಕಾರಿ ಶ್ರೀಧರ್, ಕೃಷಿ ಇಲಾಖೆಯ ಸಿಬ್ಬಂದಿ, ರೈತ ಅನುವುಗಾರರು ಭಾಗವಹಿಸಿದ್ದರು.