ಎಚ್.ಡಿ.ಕೋಟೆ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಕಬಿನಿ, ನುಗು ಜಲಾಶಯಗಳಿದ್ದರೂ, ಇವು ಬೇರೆ ರಾಜ್ಯ ಹಾಗೂ ಬೇರೆ ತಾಲೂಕುಗಳಿಗೆ ಹೆಚ್ಚು ಉಪಯೋಗ. ತಾರಕ ಜಲಾಶಯ ಭರ್ತಿ ಭಾಗ್ಯ ಕಂಡರೇ ಮಾತ್ರ ತಾಲೂಕಿಗೆ ಹೆಚ್ಚು ಉಪಯೋಗ. ಹೀಗಾಗಿ, ತಾರಕ ಜಲಾಶಯ ತಾಲೂಕಿನ ಜನರ, ರೈತರ ಜೀವನಾಡಿ ಎನಿಸಿಕೊಂಡಿದೆ.
ತಾರಕ ಜಲಾಶಯ ಭರ್ತಿಯಾದರೆ ತಾಲೂಕಿನ 17 ಸಾವಿರಕ್ಕೂ ಹೆಚ್ಚು ಪ್ರದೇಶ ನೀರಾವರಿ ಭಾಗ್ಯ ಕಾಣಲಿದೆ. ಗರಿಷ್ಠ 3.947 ಟಿಎಂಸಿ (2425 ಅಡಿ) ಸಾಮರ್ಥ್ಯದ ಜಲಾಶಯದಲ್ಲಿ ಈಗ 1.75 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೆ ದಿನಕ್ಕೆ 2395.93 ಅಡಿಗಳಷ್ಟು ನೀರಿನ ಸಂಗ್ರಹವಿತ್ತು. ಇದರಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದೂರಾಗಿದೆ.
ಅದರಲ್ಲಿ 0.75 ಟಿಎಂಸಿಯಷ್ಟು ನೀರನ್ನು ಮಾತ್ರ ಬಳಸಲು ಅವಕಾಶವಿದೆ. 17,400 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ತಾರಕ ಜಲಾಶಯ ಭರ್ತಿಯಾದ ವರ್ಷ ಮಾತ್ರ ರೈತರ ಕೃಷಿ ಜಮೀನುಗಳಿಗೆ ಮುಂಗಾರು ಬೆಳೆಗೆ ನೀರು ಸಿಗಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಆಶಾಭಾವನೆಯನ್ನು ಹವಾಮಾನ ಇಲಾಖೆ ಮೂಡಿಸಿರುವುದರಿಂದ ಈ ಬಾರಿಯೂ ಮುಂಗಾರು ಬೆಳೆಗೆ ಜಲಾಶಯದಿಂದ ನೀರು ದೊರೆಯುವ ಸಾಧ್ಯತೆಯಿದೆ.
ಕಪಿಲೆಯ ಒಡಲು ತುಂಬಬೇಕು: ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವನ್ಯಜೀವಿ ವಲಯಕ್ಕೆ ಹೆಬ್ಟಾಗಲಿನಂತಿರುವ ತಾರಕ ಜಲಾಶಯ, ಭರ್ತಿ ಭಾಗ್ಯ ಕಾಣಬೇಕಾದರೆ ನಾಗರಹೊಳೆ ಹಾಗೂ ಸಾರಥಿಹೊಳೆ ವ್ಯಾಪ್ತಿ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗಬೇಕು. ಜತೆಗೆ, ಕಬಿನಿ ಜಲಾಶಯ ಅತಿ ಬೇಗ ಭರ್ತಿಯಾಗಬೇಕು. ಆಗ ಮಾತ್ರ ಕಬಿನಿಯಿಂದ ತಾರಕ ಜಲಾಶಯಕ್ಕೆ ಏತ ನೀರಾವರಿ ಮೂಲಕ 1.2 ಟಿಎಂಸಿವರೆಗೆ ನೀರು ಹರಿಸಲು ಅವಕಾಶವಿದೆ.
5 ಬಾರಿ ಮಾತ್ರ ಭರ್ತಿ: ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು 1968ರಲ್ಲಿ ತಾರಕ ಜಲಾಶಯದ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಿದ್ದರು. 1,700 ಕೋಟಿ ರೂ. ವೆಚ್ಚದ ಜಲಾಶಯ ನಿರ್ಮಾಣ ಕಾಮಗಾರಿ 1974ರಲ್ಲಿ ಆರಂಭಗೊಂಡು, 1983ರಲ್ಲಿ ಪೂರ್ಣಗೊಂಡಿತ್ತು. ಅಂದಿನಿಂದ ಇಂದಿನವರೆಗೆ ಜಲಾಶಯ 2005-06, 2006-07, 2007-08, 2012-13 ಹಾಗೂ ಕೊನೆಯದಾಗಿ ಐದು ವರ್ಷಗಳ ನಂತರ 2018-19ರಲ್ಲಿ ಭರ್ತಿಯ ಭಾಗ್ಯ ಕಂಡಿತ್ತು. ಹಾಗಾಗಿ, ಜಲಾಶಯದ ಇತಿಹಾಸದಲ್ಲಿ ಐದು ಬಾರಿ ಮಾತ್ರ ಭರ್ತಿ ಭಾಗ್ಯ ಕಂಡಂತಾಗಿದೆ.
ಜಲಾಶಯದ ಸಾಮರ್ಥ್ಯ:
ಗರಿಷ್ಠ ಮಟ್ಟ – 3.947 ಟಿಎಂಸಿ.
ಈಗಿನ ಮಟ್ಟ – 1.75 ಟಿಎಂಸಿ.
ಬಳಕೆಯೋಗ್ಯ ನೀರು -0.75 ಟಿಎಂಸಿ.
ರಾಜ್ಯದ ಜೀವನಾಡಿಗಳಲ್ಲೊಂದಾದ ಕಬಿನಿ ಸೇರಿ ಕಾವೇರಿ ಕಣಿವೆಗೆ ಸೇರಿದ ಪ್ರಮುಖ 4 ಜಲಾಶಯಗಳನ್ನು ಹೊಂದಿರುವ ಹೆಮ್ಮೆಯ ತಾಲೂಕು ಎನಿಸಿಕೊಂಡಿದೆ ಎಚ್.ಡಿ.ಕೋಟೆ. ಆದರೂ, ಸುಡು ಬಿಸಿಲ ಬೇಗೆಯ ಈ ದಿನಗಳಲ್ಲಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ಎದುರಾಗಿದೆ. ಇದು ನಮ್ಮ ದುರ್ದೈವ.
-ಈಶ್ವರ್ ಪ್ರಸಾದ್, ಪ್ರಗತಿಪರ ರೈತ, ಕೆ.ಎಡತೋರೆ ಗ್ರಾಮ
ಜಲಾಶಯದಲ್ಲಿ ಈಗ ಸಂಗ್ರಹವಿರುವ ನೀರಿಂದ ಜನ, ಜಾನುವಾರುಗಳಿಗೆ ಕುಡಿಯಲು, ಕೆರೆ ಕಟ್ಟೆಗಳನ್ನು ತುಂಬಿಸಲು ಮಾತ್ರ ಸಾಧ್ಯ. ಈಗಿರುವ ನೀರನ್ನು ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಜಲಾಶಯದ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿ 2.4 ಟಿಎಂಸಿ ನೀರು ಸಂಗ್ರಹವಾದರೆ ಮಾತ್ರ ಈ ಬಾರಿಯ ಖಾರೀಫ್ ಬೆಳೆಗೆ ನೀರು ಹರಿಸಬಹುದು.
-ಎಚ್.ಸಿ.ನಾಗರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರ, ತಾರಕ ಜಲಾಶಯ.
* ಬಿ.ನಿಂಗಣ್ಣಕೋಟೆ