ಎಚ್.ಡಿ.ಕೋಟೆ: ಪೂರ್ವ ಮುಂಗಾರು ಮಳೆ ಕೈಕೊಟ್ಟರೂ, ಕಳೆದ ಜುಲೈ ತಿಂಗಳಲ್ಲಿ ಕೇರಳದ ವೈನಾಡು ಮತ್ತು ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮುಂಗಾರು ಮಳೆ ಆರ್ಭಟಿಸಿದ ಪರಿಣಾಮ ರಾಜ್ಯದ ಜೀವನಾಡಿ ಎನಿಸಿರುವ ತಾಲೂಕಿನ ಕಬಿನಿ ಜಲಾಶಯ ಭರ್ತಿಗೊಂಡು 20 ದಿನ ಕಳೆದರೂ ಸರ್ಕಾರದಿಂದ ಬಾಗಿನ ಸಲ್ಲಿಸುವ ಮುನ್ನವೇ ಸುಪ್ರೀಂ ಕೋರ್ಟ್ ಆದೇಶ ಪಾಲನೆ ನೆಪವೊಡ್ಡಿ ಜಲಾಶಯ ಪಕ್ಕದ ಸುಭಾಷ್ ವಿದ್ಯುತ್ ಘಟಕದ ಮೂಲಕ ನೆರೆ ರಾಜ್ಯ ತಮಿಳುನಾಡಿಗೆ 6 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಮುಂಭಾಗದ ನದಿಗೆ ಬಿಟ್ಟಿರುವುದಕ್ಕೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಜುಲೈನಲ್ಲಿ ಮುಂಗಾರು ಮಳೆ ಕೇರಳದ ವೈನಾಡು, ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸತತ 15 ದಿನ ಸುರಿದ ಪರಿಣಾಮ ಜಲಾಶಯಕ್ಕೆ 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿದ್ದು ಕಳೆದ ಜು.25 ರಂದು ಭರ್ತಿಯಾಗಿ ಮುಂಭಾಗದ ನದಿಗೆ 20 ಸಾವಿರಕ್ಕೂ ಹೆಚ್ಚು ನೀರನ್ನು ಹರಿಸಲಾಗಿತ್ತು.
ಮಳೆ ಕ್ಷೀಣಿಸಿದರೂ ಹರಿದ ಕಪಿಲೆ: ಕಳೆದ 20 ದಿನದಿಂದ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರಿನಲ್ಲಿ ಮಳೆರಾಯ ನಾಪತ್ತೆಯಾಗಿದ್ದಾನೆ. ಇದರಿಂದಾಗಿ ಒಳ ಹರಿವು ಇಲ್ಲವಾಗಿದೆ. ಆದರೂ, ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶ ಪಾಲನೆ ನೆಪವೊಡ್ಡಿ ನೀಡುವ ಸುಭಾಷ್ ಪವರ್ ಕಾರ್ಪೋರೇಷನ್‌ನ ಅಧಿಕಾರಿಗಳು ಜತೆ ಒಂದಾಣಿಕೆ ಮಾಡಿಕೊಂಡು ವಿದ್ಯುತ್ ಘಟಕದ ಮೂಲಕ ಈಗ 5 ಸಾವಿರಕ್ಕೂ ಹೆಚ್ಚು ನೀರು ಹರಿಸುತ್ತಿರುವುದಕ್ಕೆ ತಾಲೂಕಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆತಂಕ: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದಲ್ಲಿ ತವರು ಜಿಲ್ಲೆ ಸಿದ್ದರಾ ಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದು, ತಾಲೂಕಿ ನಲ್ಲಿ ಕಾಂಗ್ರೆಸ್‌ನ ಶಾಸಕರೇ ಆಯ್ಕೆಯಾಗಿದ್ದಾರೆ. ಆದರೆ, ಭರ್ತಿಗೊಂಡ ಜಲಾಶಯಕ್ಕೆ ಸರ್ಕಾರದ ಪರ ಸಿಎಂ ಸಾಂಪ್ರದಾಯಿಕ ಬಾಗಿನ ಅರ್ಪಿಸಿಲ್ಲ. ರೈತರು ಭತ್ತ ಬಿತ್ತನೆಗೆ ಮುಂದಾಗಿ ಭತ್ತದ ನಾಟಿಗೆ ಗದ್ದೆಗಳನ್ನು ಹದ ಮಾಡುತ್ತಿರುವಾಗಲೇ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಆತಂಕ ಮನೆ ಮಾಡಿದೆ.
5 ಅಡಿ ಕುಸಿತ ಕಂಡ ಕಬಿನಿ: 19.52 ಟಿಎಂಸಿ ಸಾಮರ್ಥ್ಯದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದು 2 ವಾರದಲ್ಲಿ ಜಲಾಶಯದ ಗರಿಷ್ಠ ಸಂಗ್ರಹ ಮಟ್ಟ 2284 ಅಡಿಗಳಿಗೆ ತಲುಪಿ ಭರ್ತಿಗೊಂಡಿತ್ತು. ಜಲಾಶಯದಿಂದ ಈಗ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಜಲಾಶಯದ ಸಂಗ್ರಹ ಮಟ್ಟದಲ್ಲಿ ದಿಢೀರ್ ಕುಸಿತ ಕಂಡು 2279 ಅಡಿಗೆ ನೀರು ಇಳಿಕೆ ಕಂಡಿದೆ. ಮಳೆ ಬರುವ ಲಕ್ಷಣ ಗೋಚರಿಸದಿದ್ದರೂ ಅಧಿಕಾರಿಗಳ ನಡೆ ದಿಗ್ಬ†ಮೆ ಮೂಡಿಸಿದೆ.
ಮುಂಗಾರು ಮಳೆ ಕ್ಷೀಣಿಸಿದರೂ ಅಧಿಕಾರಿಗಳು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ತಾಳಕ್ಕೆ ಕುಣಿಯುತ್ತಿದ್ದಾರೆ. ಕೂಡಲೇ ನ್ಯಾಯಾಲಯ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮುಂಗಾರು ಮಳೆ ಕ್ಷೀಣಿಸಿರುವುದನ್ನು ಮನದಟ್ಟು ಮಾಡಿ, ಜಲಾಶಯದಿಂದ ತಮಿಳುನಾಡಿಗೆ ಹರಿಯು ತ್ತಿರುವ ನೀರನ್ನು ಕೂಡಲೇ ನಿಲ್ಲಿಸಿ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯಬೇಕಿದೆ.
ಸರ್ಕಾರದಿಂದ ಆದೇಶ ಬಂದಿಲ್ಲ :
ಜಲಾಶಯಕ್ಕೆ ಬಾಗಿನ ಅರ್ಪಣೆ ಕುರಿತು ಇದುವರೆಗೂ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಸುಪ್ರೀಂ ಆದೇಶದಂತೆ ಜಲಾಶಯ ಪಕ್ಕದ ಸುಭಾಸ್ ಪವರ್ ಹೌಸ್ ಮೂಲಕ 5 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದ್ದೇವೆ. ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳ ಅನುಕೂಲಕ್ಕಾಗಿ ಬಲದಂಡೆ ಒಂದು ಸಾವಿರ, ಎಡದಂಡೆ ನಾಲೆಗೆ 25 ಕ್ಯೂಸೆಕ್, ಒಟ್ಟು 6025 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ ಎಂದು ಎಚ್.ಡಿ.ಕೋಟೆ ತಾಲೂಕು ಕಬಿನಿ ಜಲಾಶಯ ಎಇಇ ಜನಾರ್ಧನ್ ತಿಳಿಸಿದ್ದಾರೆ.
ಸರ್ಕಾರ ಹಾಗೂ ಇಲ್ಲಿನ ಅಧಿಕಾರಿಗಳು ನ್ಯಾಯಾಲಯದ ಆದೇಶ ನೆಪವೊಡ್ಡಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೊದಲೇ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ. ಕೂಡಲೇ ನೀರನ್ನು ನಿಲ್ಲಿಸದಿದ್ದರೇ, ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ.
-ಮಹದೇವನಾಯ್ಕ, ಅಧ್ಯಕ್ಷರು, ರಾಜ್ಯ ರೈತ ಸಂಘ, ಎಚ್.ಡಿ.ಕೋಟೆ ತಾಲೂಕು
– ಬಿ.ನಿಂಗಣ್ಣಕೋಟೆ