Advertisement

ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ಒತ್ತು: ಕಪಿಲ್‌ ಮೋಹನ್

12:55 AM Sep 17, 2020 | mahesh |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಡಲ್ಕೊರೆತ ತೀವ್ರ ವಾಗಿದ್ದು, ಸಮುದ್ರ ಭಾಗದಲ್ಲಿ ವಾಸವಾಗಿರುವ ಜನರಲ್ಲಿ ಆತಂಕ ಮನೆ ಮಾಡಿದೆ. ಕಡಲ್ಕೊರೆತ ಸಮಸ್ಯೆಯ ಹಾನಿ ತಡೆಗಟ್ಟಲು ಸರಕಾರದಿಂದ ಶಾಶ್ವತವಾದ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಅದಷ್ಟು ಬೇಗನೆ ರೂಪಿಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಸಿಇಒ ಕಪಿಲ್‌ ಮೋಹನ್‌ ತಿಳಿಸಿದ್ದಾರೆ.

Advertisement

ಬುಧವಾರ ದ.ಕ. ಜಿಲ್ಲೆಯ ವಿವಿಧೆಡೆ ಕಡಲ್ಕೊರೆತ ನಿಯಂತ್ರಣಕ್ಕೆ ನಡೆಯುತ್ತಿರುವ ವಿವಿಧ ಕಾಮಗಾರಿ ಗಳನ್ನು ಅವರು ಪರಿಶೀಲಿಸಿದರು. ಉನ್ನತ ತಾಂತ್ರಿಕತೆಯ ನೆರವಿನಿಂದ ಕಡಲ್ಕೊರೆತಕ್ಕೆ ಶಾಶ್ವತವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು. ಉಳ್ಳಾಲ ಮುಕ್ಕಚ್ಚೇರಿ ಬಳಿ ಈ ರೀತಿಯ ಕಾಮಗಾರಿ ನಡೆಸಲಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ. ಉಳ್ಳಾಲ ಮುಕ್ಕಚ್ಚೇರಿ ಕಡಲ ತೀರದಲ್ಲಿ ಎಡಿಬಿ ನೆರವಿನ ಕಾಮಗಾರಿಯ ಅಡಿಯಲ್ಲಿ ನಡೆಯುತ್ತಿರುವ 1,802 ಲಕ್ಷ ರೂ.ನಲ್ಲಿ 635 ಮೀಟರ್‌ ಮತ್ತು 10 ಮೀಟರಿನ ಸಂರಕ್ಷಣೆ ತಡೆಗೋಡೆಯ ಪುನರ್ವಸತಿ ಯೋಜನೆಯ ಕಾಮಗಾರಿಯನ್ನು ಅವರು ಪರಿಶೀಲನೆ ನಡೆಸಿದರು. ಮುಂದಿನ ದಿನಗಳಲ್ಲಿ ಕಡಲ್ಕೊರೆತ ಆಗುವ ಭಾಗಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣವನ್ನು ಮಾಡುವಂತೆ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ಅವರು ಹೇಳಿದರು.

ಸೋಮೇಶ್ವರದ ಕೆಲವು ಭಾಗಗಳ‌ಲ್ಲಿ ಕಡಲ್ಕೊರೆತವು ಹೆಚ್ಚಾಗಿದೆ. ಕೊರೆತವನ್ನು ತಪ್ಪಿಸುವ ಸಲುವಾಗಿ ಸರಕಾರವು ಹಲವು ಯೋಜನೆಯ ಮುಖಾಂತರ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹಾನಿಗೆ ಒಳಗಾದ ಪ್ರದೇಶಗಳಿಗೆ ಶಾಶ್ವತ ಪರಿಹಾರ ನೀಡಲಾಗುತ್ತದೆ. ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಹಾಗೂ ನಿರ್ವಹಣಾ ಯೋಜನೆ ಅಧಿಕಾರಿಗಳಾದ ಗೋಪಾಲ ನಾಯ್ಕ, ಉಪನಿರ್ದೇಶಕ ಮುಹಮ್ಮದ್‌ ಹನೀಫ್‌ ಮತ್ತಿತರರು ಇದ್ದರು.

ಕಾಮಗಾರಿ ಪರಿಶೀಲನೆ
ಕಪಿಲ್‌ ಮೋಹನ್‌ ಅವರು ಬುಧವಾರ ತಣ್ಣೀರುಬಾವಿ ಭಾರತಿ ಶಿಪ್‌ಯಾರ್ಡ್‌, ಬೆಂಗರೆ ಜೆಟ್ಟಿ, ಅಳಿವೆ ಬಾಗಿಲು, ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಮುಕ್ಕಚ್ಚೇರಿ ಪ್ರದೇಶಗಳಿಗೆ ಭೇಟಿ ನೀಡಿ, ಬಂದರು ಇಲಾಖೆ ಹಾಗೂ ಎಡಿಬಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next