Advertisement

ಕ್ರಿಕೆಟ್‌ ಸಲಹಾ ಸಮಿತಿಗೆ ಕಪಿಲ್‌ ದೇವ್‌ ರಾಜೀನಾಮೆ

09:14 AM Oct 03, 2019 | Team Udayavani |

ಹೊಸದಿಲ್ಲಿ: ತ್ರಿಸದಸ್ಯ ತಾತ್ಕಾಲಿಕ ಕ್ರಿಕೆಟ್‌ ಸಲಹಾ ಸಮಿತಿಯ (ಸಿಎಸಿ) ಮುಖ್ಯಸ್ಥನ ಹುದ್ದೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ರಾಜೀನಾಮೆ ನೀಡಿದ್ದಾರೆ. ಕಪಿಲ್‌ ರಾಜೀನಾಮೆಗೆ ನಿರ್ದಿಷ್ಟ ಕಾರಣವೇನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಕ್ರಿಕೆಟನ್ನು ಕಾಡುತ್ತಿರುವ ಸ್ವಹಿತಾಕ್ತಿಯ ಸಂಘರ್ಷದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

ಭಾರತೀಯ ತಂಡಕ್ಕೆ ಮುಖ್ಯ ಕೋಚ್‌ ಆಯ್ಕೆ ಮಾಡುವ ಸಲುವಾಗಿ ಕಪಿಲ್‌ ದೇವ್‌ ನೇತೃತ್ವದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕ್ರಿಕೆಟ್‌ ಸಲಹಾ ಸಮಿತಿಯನ್ನು ರಚಿಸಲಾಗಿತ್ತು. ಅಂಶುಮಾನ್‌ ಗಾಯಕ್‌ವಾಡ್‌ ಮತ್ತು ಶಾಂತಾ ರಂಗಸ್ವಾಮಿ ಸಮಿತಿಯಲ್ಲಿರುವ ಇನ್ನಿಬ್ಬರು.

ಎಂಪಿಸಿಎ ಆಜೀವ ಸದಸ್ಯ ಸಂಜೀವ ಗುಪ್ತ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐಯ ನೈತಿಕತೆ ವಿಭಾಗದ ಅಧಿಕಾರಿ ಡಿ.ಕೆ.ಜೈನ್‌ ಇತ್ತೀಚೆಗೆ ಕ್ರಿಕೆಟ್‌ ಸಲಹಾ ಸಮಿತಿಗೂ ನೋಟಿಸ್‌ ಜಾರಿಗೊಳಿಸಿದ್ದರು. ಶಾಂತಾ ರಂಗಸ್ವಾಮಿ ನೋಟಿಸ್‌ ಸಿಕ್ಕಿದ ಮರುದಿನವೇ ರಾಜೀನಾಮೆ ನೀಡಿದ್ದರು.

ಜನರು ಆರೋಪಗಳನ್ನು ಮಾಡುವುದರಿಂದ ಸಮಸ್ಯೆಯಿಲ್ಲ. ಆದರೆ ನೈತಿಕತೆ ಅಧಿಕಾರಿ ಪ್ರತಿಯೊಂದು ಆರೋಪವನ್ನು ಹೆಕ್ಕಿ ನೋಟಿಸ್‌ ಜಾರಿಗೊಳಿಸಿದರೆ ಅದು ನೀಡುವ ಚಿತ್ರಣ ಭಿನ್ನವಾಗಿರುತ್ತದೆ ಮತ್ತು ಮಾಜಿ ಕ್ರಿಕೆಟಿಗರು ಕ್ರಿಕೆಟ್‌ನ ಆಡಳಿತ ವ್ಯವಸ್ಥೆಯೊಳಗೆ ಬರಲು ಕಷ್ಟವಾಗುತ್ತದೆ ಎಂದು ಕಪಿಲ್‌ ತಮ್ಮ ಅಸಮಾಧಾನವನ್ನು ಹೇಳಿಕೊಂಡಿದ್ದಾರೆ.

ರಾಜೀನಾಮೆ ಅಗತ್ಯವಿರಲಿಲ್ಲ : ರಾಯ್‌
ಇದೇ ವೇಳೆ ಆಡಳಿತ ಸಮಿತಿಯ ಮುಖ್ಯಸ್ಥ ವಿನೋದ್‌ ರಾಯ್‌ ಅವರು ಕಪಿಲ್‌ ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಪಿಲ್‌ ದೇವ್‌ ಅವರನ್ನು ಮುಖ್ಯ ಕೋಚ್‌ ಆಯ್ಕೆಯ ಕೆಲಸಕ್ಕಷ್ಟೇ ನೇಮಿಸಲಾಗಿತ್ತು.

Advertisement

ಆಯ್ಕೆ ಸಮಿತಿಯ ಮೂವರು ಸದಸ್ಯರಿಗೆ ನೀಡಿದ ಪತ್ರಗಳಲ್ಲೂ ಇದು ಕೋಚ್‌ ಆಯ್ಕೆಗಷ್ಟೇ ರಚನೆಯಾಗಿರುವ ಸಮಿತಿ ಎಂದು ಸ್ಪಷ್ಟಪಡಿಸಲಾಗಿತ್ತು. ಕೋಚ್‌ ಆಯ್ಕೆ ಪ್ರಕ್ರಿಯೆ ಮುಗಿದಿರುವುದರಿಂದ ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ ಎಂದು ರಾಯ್‌ ಹೇಳಿದ್ದಾರೆ.

ಸ್ವಹಿತಾಸಕ್ತಿ ಸಂಘರ್ಷದ ಆರೋಪ ಮುಗಿದ ಅದ್ಯಾಯವೇ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ರಾಯ್‌ ನಾನು ಈ ಮೊದಲು ಹೇಳಿರುವಂತೆ ನೈತಿಕತೆ ಅಧಿಕಾರಿಯ ನಿರ್ಧಾರದ ಮೇಲೆ ತೀರ್ಪು ನೀಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next