Advertisement

ಭಾರತ‌ ಸೆಮಿ ಪ್ರವೇಶ ಖಚಿತ: ಕಪಿಲ್‌ ವಿಶ್ವಾಸ

01:53 AM May 09, 2019 | Team Udayavani |

ಹೊಸದಿಲ್ಲಿ: 1983ರ ತೃತೀಯ ಆವೃತ್ತಿಯ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತವನ್ನು ಚಾಂಪಿಯನ್‌ ಪಟ್ಟವೇರಿಸಿ ಇತಿಹಾಸ ನಿರ್ಮಿಸಿದ ಕಪಿಲ್‌ದೇವ್‌, ಭಾರತದ ಈ ಬಾರಿಯ ಓಟದ ಬಗ್ಗೆ ಭರವಸೆಯ ಮಾತಾಡಿದ್ದಾರೆ. ಕೊಹ್ಲಿ ಪಡೆ ಟಾಪ್‌-4ರಲ್ಲಿ ಒಂದಾಗಿ ಸೆಮಿಫೈನಲ್‌ ಪ್ರವೇಶಿಸುವುದರಲ್ಲಿ ಅನುಮಾನವಿಲ್ಲ, ಆದರೆ ಮುಂದಿನ ಹಾದಿ ಸುಲಭವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

“ಭಾರತ ತಂಡ ಅನುಭವಿ ಹಾಗೂ ಯುವ ಆಟಗಾರರಿಂದ ಸಂತುಲಿತವಾಗಿದೆ. ಇಲ್ಲಿ ಧೋನಿಯೂ ಇದ್ದಾರೆ, ಕೊಹ್ಲಿಯೂ ಇದ್ದಾರೆ. ಭಾರತ ಖಂಡಿತವಾಗಿಯೂ ಅಗ್ರ ನಾಲ್ಕರಲ್ಲಿ ಸ್ಥಾನ ಸಂಪಾದಿಸಲಿದೆ. ಆದರೆ ಮುಂದಿನ ಹಾದಿ ಕಠಿನವಾಗಲಿದೆ. ಇದು ಎಲ್ಲ ತಂಡಗಳಿಗೂ ಅನ್ವಯಿ ಸುವ ಮಾತು’ ಎಂದು ಕಪಿಲ್‌ ಹೇಳಿದರು.

“ಭಾರತ ಅತ್ಯುತ್ತಮ ತಂಡವನ್ನು ಹೊಂದಿದೆ. ಆದರೆ ಆತ್ಮವಿಶ್ವಾಸ, ನಂಬಿಕೆ ಮತ್ತು ಸಾಧನೆ ಎನ್ನುವುದು ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

4ನೇ ತಂಡಕ್ಕೆ ಪೈಪೋಟಿ
ಸೆಮಿಫೈನಲ್‌ ಪ್ರವೇಶಿಸುವ 3 ತಂಡಗಳನ್ನು ಹೆಸರಿಸಬಹುದು, ಆದರೆ 4ನೇ ತಂಡವನ್ನು ಗುರುತಿಸುವುದು ಬಹಳ ಕಷ್ಟ ಎಂಬುದು ಕಪಿಲ್‌ ಅಭಿಪ್ರಾಯ.

“ಲೀಗ್‌ ಹಂತದಲ್ಲಿ ಟಾಪ್‌-3 ತಂಡ ಗಳಾಗಿ ಭಾರತ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯವನ್ನು ಹೆಸರಿಸಬಹುದು. ಆದರೆ 4ನೇ ತಂಡದ ಆಯ್ಕೆ ಅತ್ಯಂತ ಜಟಿಲ. ಇದಕ್ಕೆ ತೀವ್ರ ಪೈಪೋಟಿ ಇದೆ. ನ್ಯೂಜಿಲ್ಯಾಂಡ್‌, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ ನಡುವೆ ಸ್ಪರ್ಧೆ ಏರ್ಪಡಬಹುದು’ ಎಂದು ಕಪಿಲ್‌ ಹೇಳಿದರು.

Advertisement

ಕೂಟದ “ಅಚ್ಚರಿಯ ಪ್ಯಾಕೇಜ್‌’ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಪಿಲ್‌ದೇವ್‌, ನ್ಯೂಜಿಲ್ಯಾಂಡ್‌ , ವೆಸ್ಟ್‌ ಇಂಡೀಸ್‌ ತಂಡಗಳನ್ನು ಹೆಸರಿಸಿದರು.

ಪಾಂಡ್ಯ ಆಸ್ತಿಯಾಗಬಲ್ಲರು…
ಹಾರ್ದಿಕ್‌ ಪಾಂಡ್ಯ ಭಾರತ ತಂಡದ ಆಸ್ತಿಯಾಗಬಲ್ಲರು. ಆದರೆ ಅವರ ಮೇಲೆ ವಿಪರೀತ ಒತ್ತಡ ಹೇರಬಾರದು. ಪಾಂಡ್ಯ ಸಹಜ ಆಟವಾಡುತ್ತ ಹೋದರೆ ಸಾಕು. ಇಂಗ್ಲಿಷ್‌ ವಾತಾವರಣ ಪೇಸ್‌ ಬೌಲರ್‌ಗಳಿಗೆ ಭಾರೀ ನೆರವು ನೀಡುತ್ತದೆ. ಬುಮ್ರಾ, ಶಮಿ ಈಗ ಅಮೋಘ ಬೌಲಿಂಗ್‌ ನಡೆಸುತ್ತಿದ್ದು, ವಿಶ್ವಕಪ್‌ನಲ್ಲಿ ಭಾರತದ ಬೌಲಿಂಗ್‌ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕ್ರಿಕೆಟ್‌ ಲೆಜೆಂಡ್‌ ಕಪಿಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next