Advertisement

ರಾಜಣ್ಣನ ಪ್ರೀತಿಯ ಕಪಾಲಿ ಇನ್ನು ನೆನಪು

06:00 AM Oct 13, 2017 | |

ಬೆಂಗಳೂರು: ಏಷ್ಯಾದ ಅತೀ ದೊಡ್ಡ ಚಿತ್ರಮಂದಿರ ಎಂದು ಖ್ಯಾತಿ ಗಳಿಸದ್ದ ಬೆಂಗಳೂರಿನ ಕಪಾಲಿ ಚಿತ್ರಮಂದಿರವು ಇನ್ನು ನೆನಪಷ್ಟೇ. ಬುಧವಾರ ರಾತ್ರಿ ಪ್ರದರ್ಶನವಾದ “ಹುಲಿರಾಯ’ ಚಿತ್ರವೇ, ಈ ಚಿತ್ರಮಂದಿರದ ಕೊನೆಯ ಚಿತ್ರ. ಸದ್ಯದಲ್ಲೇ ಈ ಚಿತ್ರಮಂದಿರವನ್ನು ಒಡೆಯಲಿದ್ದು, ಇಲ್ಲಿ ಒಂದು ಬೃಹತ್‌ ಮಾಲ್‌ ತಲೆ ಎತ್ತಲಿದೆ ಎಂದು ಹೇಳಲಾಗುತ್ತಿದೆ.

Advertisement

ಕನ್ನಡ ಚಿತ್ರರಂಗಕ್ಕೂ, ಕಪಾಲಿ ಚಿತ್ರಮಂದಿರಕ್ಕೂ ಅವಿನಾಭಾವ ನಂಟು ಎಂದರೆ ತಪ್ಪಿಲ್ಲ. 1968ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿ ಅವರಿಂದ ಉದ್ಘಾಟನೆಗೊಂಡ ಕಪಾಲಿ ಚಿತ್ರಮಂದಿರದಲ್ಲಿ ಮೊದಲ ಚಿತ್ರವಾಗಿ ಡಾ ರಾಜಕುಮಾರ್‌ ಅಭಿನಯದ “ಮಣ್ಣಿನ ಮಗ’ ಪ್ರದರ್ಶನವಾಗಿತ್ತು. ಅದೇ ಆ ಚಿತ್ರಮಂದಿರದಲ್ಲಿ ನೂರು ದಿನ ಪ್ರದರ್ಶನಗೊಂಡ ಮೊದಲ ಚಿತ್ರವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಸಾವಿರಾರು ಚಿತ್ರಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದವು. 1465 ಆಸನಗಳಿದ್ದ ಈ ಬೃಹತ್‌ ಚಿತ್ರಮಂದಿರವು ಏಷ್ಯಾದಲ್ಲೇ ಅತೀ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬೇರೆ ಚಿತ್ರಮಂದಿರದಲ್ಲಿ ನೂರು ದಿನ ಓಡುವುದೂ ಒಂದೇ, ಕಪಾಲಿಯಲ್ಲಿ 50 ದಿನ ಓಡಿದರೂ ಒಂದೇ ಎಂಬ ಮಾತು ಚಿತ್ರರಂಗದಲ್ಲಿ ಜನಜನಿತವಾಗಿತ್ತು.

ಹಲವು ವೈಶಿಷ್ಟéಗಳ ಚಿತ್ರಮಂದಿರ: ಡಾ. ರಾಜಕುಮಾರ್‌ ಅಭಿನಯದ “ಚಲಿಸುವ ಮೋಡಗಳು’, “ಹೊಸ ಬೆಳಕು’, “ಭಕ್ತ ಪ್ರಹ್ಲಾದ’ ಸೇರಿದಂತೆ ಹಲವು ಚಿತ್ರಗಳು, ಕಪಾಲಿಯಲ್ಲಿ ಪ್ರದರ್ಶನ ಕಂಡಿದ್ದು ವಿಶೇಷ. ಡಾ. ರಾಜ್‌ ಅವರ ಕೊನೆಯ ಚಿತ್ರವಾದ “ಶಬ್ಧವೇಧಿ’ ಸಹ ಅಲ್ಲೇ ಬಿಡುಗಡೆಯಾಗಿತ್ತು. “ಭಕ್ತ ಪ್ರಹ್ಲಾದ’ ಪ್ರದರ್ಶನದ ಸಂದರ್ಭದಲ್ಲಿ ನೆರೆಯ ಗಂಗಾರಾಂ ಕಟ್ಟಡ ನೆಲಕ್ಕುರುಳಿದರೆ, “ಚಲಿಸುವ ಮೋಡಗಳು’ ಚಿತ್ರಕ್ಕಾಗಿ ಕಪಾಲಿ ಚಿತ್ರಮಂದಿರದೆದುರು ಬೃಹತ್‌ ಕಟೌಟ್‌ ನಿಲ್ಲಿಸಲಾಗಿತ್ತು. ಇನ್ನು “ಶಬ್ಧವೇಧಿ’ ಬಿಡುಗಡೆಯ ಸಂದರ್ಭದಲ್ಲಿ ಪ್ರದರ್ಶನದಲ್ಲಿ ಅಡಚಣೆಯುಂಟಾದಾಗ, ಸಾಕಷ್ಟು ಗಲಾಟೆಗಳಾಗಿದ್ದವು.  ಡಾ. ರಾಜಕುಮಾರ್‌ ಅಲ್ಲದೆ ಶಿವರಾಜಕುಮಾರ್‌, ರವಿಚಂದ್ರನ್‌ ಮುಂತಾದವರ ಜನಪ್ರಿಯ ಚಿತ್ರಗಳು ತೆರೆಕಂಡಿದ್ದು ಇದೇ ಚಿತ್ರಮಂದಿರದಲ್ಲಿ. ರವಿಚಂದ್ರನ್‌ ಅಭಿನಯದ “ಪ್ರೇಮ ಲೋಕ’, “ರಣಧೀರ’ ಸೇರಿದಂತೆ ಹಲವು ಚಿತ್ರಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದವು.

ಹೆಗ್ಗಳಿಕೆಯೇ ಶಾಪವಾಯ್ತು: ಏಷ್ಯಾದಲ್ಲೇ ಅತೀ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಯೇ ಕಪಾಲಿ ಚಿತ್ರಮಂದಿರಕ್ಕೆ ದೊಡ್ಡ ಶಾಪವಾಗಿತ್ತು ಎಂದರೆ ತಪ್ಪಿಲ್ಲ. ಏಕೆಂದರೆ, ಅಷ್ಟೊಂದು ಸಂಖ್ಯೆಯ ಆಸನಗಳಿರುವ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶಿಸುವುದಕ್ಕೆ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಹೆದರುತ್ತಿದ್ದರು. ಏಕೆಂದರೆ, ಎಷ್ಟೋ ಬಾರಿ ಚಿತ್ರಮಂದಿರ ತುಂಬುತ್ತಿರಲಿಲ್ಲ. ಹಾಗಾಗಿ ಚಿತ್ರಮಂದಿರ ಖಾಲಿಯಾಗಿದೆ ಎಂದು ಇತರೆ ಪ್ರೇಕ್ಷಕರಿಗೆ ಅನಿಸಬಹುದು ಎಂಬ ಕಾರಣಕ್ಕೆ ಹಲವರು ಕಪಾಲಿಯಲ್ಲಿ ತಮ್ಮ ಚಿತ್ರ ಪ್ರದರ್ಶನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಇದೇ ಕಾರಣದಿಂದ, ಕೆಲವು ವರ್ಷಗಳ ಹಿಂದೆ ಆಸನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು. ಆಸನಗಳ ಸಂಖ್ಯೆಯನ್ನು 1100ಕ್ಕೆ ಇಳಿಸಲಾಗಿತ್ತು. ಈ ಸಂಖ್ಯೆ ಸಹ ಹೆಚ್ಚು ಎಂಬ ನಂಬಿಕೆ ಚಿತ್ರರಂಗದಲ್ಲಿತ್ತು.

ಕಳೆದ ಕೆಲವು ವರ್ಷಗಳಿಂದಿತ್ತೀಚೆಗೆ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತವಾಗುತ್ತಿರುವ ಬಗ್ಗೆ, ಆ ಜಾಗದಲ್ಲಿ ಒಂದು ಬೃಹತ್‌ ಮಾಲ್‌ ಏಳುತ್ತಿರುವ ಕುರಿತು ಸುದ್ದಿಗಳು ಬರುತ್ತಲೇ ಇದ್ದವು. ಆದರೆ, ಪ್ರದರ್ಶನ ಮುಂದುವರೆಯುತ್ತಲೇ ಇತ್ತು. ಈಗ ಗುರುವಾರ ಬೆಳಿಗ್ಗೆಯಿಂದ ಪ್ರದರ್ಶನ ಹಠಾತ್ತನೆ ನಿಂತಿದೆ. 1968ರಲ್ಲಿ ಪ್ರಾರಂಭವಾದ ಕಪಾಲಿ ಚಿತ್ರಮಂದಿರಕ್ಕೆ ಮುಂದಿನ ವರ್ಷ 50 ತುಂಬುತಿತ್ತು. ಆದರೆ, ಅದಕ್ಕೂ ಮುನ್ನವೇ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ನಿಂತಿದೆ. ಗುರುವಾರ ಅದೇ ಚಿತ್ರಮಂದಿರದಲ್ಲಿ “ಆಡೂ ಆಟ ಆಡೂ’ ಎಂಬ ಚಿತ್ರ ಪ್ರದರ್ಶನವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದರ ಪ್ರದರ್ಶನವಾಗದೇ ಇದ್ದುದರಿಂದ ಬುಧವಾರ ರಾತ್ರಿಯದ್ದೇ ಕೊನೆಯ ಪ್ರದರ್ಶನವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next