ಸುರಪುರ: ತಾಲೂಕಿನ ಹುಣಸಿಹೊಳೆ ಕಣ್ವ ಮಠ ಸಂಸ್ಥಾನದಲ್ಲಿ ಶುಕ್ರವಾರ ನೂತನ ಯತಿಗಳ ಪಟ್ಟಾಭಿಷೇಕ ಸಮಾರಂಭ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಇದೇ ವೇಳೆ, ವೇದ, ಘೋಷಗಳೊಂದಿಗೆ ನೂತನ ಯತಿಗಳಿಗೆ ವಿದ್ಯಾಕಣ್ವವಿರಾಜ ತೀರ್ಥರೆಂದು ನಾಮಕರಣ ಮಾಡಲಾಯಿತು.
ಬೆಳಗ್ಗೆ ವೃಂದಾವನಸ್ಥ ವಿದ್ಯಾಭಾಸ್ಕರ ತೀರ್ಥರ ಕರಮಕಲ ಸಂಜಾತರಿಂದ ಧರ್ಮ ದಂಡ ಹಸ್ತಾಂತರ, ಕಣ್ವ ತೀರ್ಥದಲ್ಲಿ ದಂಡೋದಕ ಸ್ನಾನ, ಪುಣ್ಯಾಹವಾಚನ, ಮಂತ್ರೋ ಪದೇಶ, ಸಾಲಿಗ್ರಾಮಗಳೊಂದಿಗೆ ಶ್ರೀಗಳ ಮೆರವಣಿಗೆ ನಡೆಯಿತು. ನಂತರ, ಶ್ರೀಗಳ ನವೀನ ಕಾಶಾಯ ವಸ್ತ್ರಧಾರಣೆ, ತಪ್ತ ಮುದ್ರಾಧಾರಣೆ, ನೂತನ ಶ್ರೀಗಳ ನಾಮಕರಣ, ಪರಿ ವ್ರಾಜಕ ಪೀಠಪೂಜೆ, ಉಪಹಾಸ್ಯ ದೇವರ ಪೂಜೆ, ಸಂಸ್ಥಾನ ಮೂಲ ದೇವರಾದ ವಿಠuಲ ಕೃಷ್ಣ ಪೂಜೆ, ಶುಕ್ಲಾ ಯಜುರ್ವೇದ ಮಂತ್ರಘೋಷ ಪಠಣ, ನೂತನ ಶ್ರೀಗಳಿಂದ ಅನುಗ್ರಹ ಸಂದೇಶ, ಯತಿಗಳ ಭಿಕ್ಷೆ ನಡೆಯಿತು.
ಮಠದ ಏಳ್ಗೆಗೆ ಒತ್ತು ನೀಡುವೆ: ನೂತನ ಯತಿ ವಿದ್ಯಾ ಕಣ್ವವಿರಾಜ ತೀರ್ಥರು ಧರ್ಮ ಸಂದೇಶ ನೀಡಿ, ಜಗತ್ತನ್ನು ಗೆಲ್ಲುವ ಶಕ್ತಿ ಕಣ್ವರಿಗಿದೆ. ಕಣ್ವರು ಜ್ಞಾನಸಂಪತ್ತಿನ ಪ್ರತೀಕವಾಗಿದ್ದಾರೆ. ಮಠಕ್ಕೆ ಎಷ್ಟೇ ಕಷ್ಟ ಎದುರಾದರೂ ನಮ್ಮ ಸಮಸ್ಯೆಗಳನ್ನು ಮಠದಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳಬೇಕು. ಏನೇ ಸಮಸ್ಯೆ ಯಿದ್ದರೂ ಪರಿಹರಿಸಲು ಬದ್ಧರಾಗಿದ್ದೇವೆ. ಭಕ್ತರು ಮಠದ ಶ್ರೇಯೋಭಿವೃದ್ಧಿಯೊಂ ದಿಗೆ ಘನತೆ, ಗೌರವ ಕಾಪಾಡಿಕೊಂಡು ಹೋಗ ಬೇಕು. ಸಮಾಜದ ಹಿರಿಯರು ಕಾಲಕಾ ಲಕ್ಕೆ ಭೇಟಿ ನೀಡಿ, ಮಠದ ಅಭಿವೃದ್ಧಿಗೆ ಸಹಕರಿಸಬೇಕು. ಅದರಂತೆ ನಾನೂ ಮಠದ ಏಳ್ಗೆಗೆ ಒತ್ತು ನೀಡುತ್ತೇನೆ ಎಂದರು.
ಪುನಃ ಪೂರ್ವಾಶ್ರಮಕ್ಕೆ ತೆರಳುವೆ: ಕಳಂಕದ ಆರೋಪ ಹಾಗೂ ಸಮಾಜದ ಒತ್ತಾಯದ ಹಿನ್ನೆಲೆಯಲ್ಲಿ ಪೀಠತ್ಯಾಗ ಮಾಡಿದ್ದು, ಪುನಃ ಪೂರ್ವಾಶ್ರಮಕ್ಕೆ ತೆರಳಿ ಗೃಹಸ್ಥಾಶ್ರಮ ಜೀವನ ಮುಂದುವರಿಸುತ್ತೇನೆ. ಲೌಕಿಕ ಬದುಕಿ ನೊಂದಿಗೆ ಧರ್ಮ ಕಾರ್ಯಕ್ಕೂ ಮನ್ನಣೆ ನೀಡುತ್ತೇನೆ. ಸನ್ಯಾಸ ದತ್ತ ಇನ್ನೆಂದೂ ಮುಖ ಮಾಡುವುದಿಲ್ಲ ಎಂದು ಕಣ್ವಮಠದ ನಿರ್ಗಮಿತ ಪೀಠಾ ಧಿಪತಿ ವಿದ್ಯಾವಾರಿ ಧಿ ತೀರ್ಥರು ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, “ಪೂರ್ವಾಶ್ರಮ ದಿಂದಲೇ ಸನ್ಯಾಸ ಆಶ್ರಮಕ್ಕೆ ಬಂದಿದ್ದೆ. ಕೈಲಾದ ಮಟ್ಟಿಗೆ ಸೇವೆ ಮಾಡಿದ್ದೇನೆ. ಸೇವೆ ತೃಪ್ತಿ ತಂದಿದೆ.
ಆರೋಪ ಬಂದಿರುವುದು ನನ್ನ ದುರದೃಷ್ಟ. ಅಭಿವೃದ್ಧಿ ಮಾಡುವವರಿಗೆ ವಿಘ್ನಗಳು ಹೆಚ್ಚು ಎನ್ನುವಂತೆ ನನ್ನ ಅಭಿವೃದ್ಧಿ ಸಹಿಸದ ಕೆಲವರು ಷಡ್ಯಂತ್ರ ರೂಪಿಸಿ, ಆರೋಪ ಬರುವಂತೆ ಮಾಡಿದ್ದಾರೆ. ಇದರಿಂದ ಹೊರ ಬರುವ ಭರವಸೆ ನನಗಿದೆ’ ಎಂದರು. ಪಲಾಯನ ಮಾಡುವುದಿಲ್ಲ. ಸಮಾಜದಲ್ಲಿ ಇದ್ದುಕೊಂಡು ಕೆಲಸ ಮಾಡುತ್ತೇನೆ. ಅಗತ್ಯ ಬಿದ್ದಲ್ಲಿ, ಮಠದ ನೂತನ ಯತಿಗಳು ಬಯಸಿದರೆ ಮಠದ ಅಭಿವೃದ್ಧಿಗಾಗಿ ಸೂಕ್ತ ಸಲಹೆ-ಸೂಚನೆ ನೀಡಲು ಸಿದ್ಧನಿದ್ದೇನೆ. ಸಮಾಜದ ಮಕ್ಕಳ ಅನುಕೂಲಕ್ಕಾಗಿ ಮಠದಲ್ಲಿ ವೇದಾಧ್ಯಯನ ಪಾಠಶಾಲೆ ಆರಂಭಿಸಿದ್ದೆ. ಮುಂದುವರಿಸಿಕೊಂಡು ಹೋಗುವುದು ನೂತನ ಯತಿಗಳಿಗೆ ಬಿಟ್ಟ ವಿಚಾರ ಎಂದರು.