ವರದಿ: ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೆ ಜಿಲ್ಲೆಗೆ ಆಕ್ಸಿಜನ್ ಕೊರತೆ ಎದುರಾಗುವ ಭೀತಿಯೂ ಎದುರಾಗಿದೆ. ಜಿಲ್ಲೆಯ ಜಿಲ್ಲಾ ಕೋವಿಡ್ ಆಸ್ಪತ್ರೆಯೂ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ನಗರ ಹೊರ ವಲಯದ ಕಂಠಿ ರಿಫಿಲಿಂಗ್ ಘಟಕವೇ ಆಪತ್ಭಾಂದವ ಆಗಿದೆ.
ಹೌದು, ಜಿಲ್ಲೆಯಲ್ಲಿ ಆಕ್ಸಿಜನ್ ರಿಫಿಲಿಂಗ್ ಘಟಕ ಏಕೈಕವಾಗಿದೆ. ಕಂಠಿ ರಿಫಿಲಿಂಗ್ ಘಟಕ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಬೇರ್ಯಾವ ಘಟಕವೂ ಇಲ್ಲ. ನಗರದ ಬಾದಾಮಿ ರಸ್ತೆಯ ಶಿಗಿಕೇರಿ ಕ್ರಾಸ್ ಬಳಿ ಇರುವ ಕಂಠಿ ರಿಫಿಲಿಂಗ್ ಘಟಕದಿಂದ ನಿತ್ಯವೂ 400ರಿಂದ 450 ಸಿಲಿಂಡರ್ ಹಾಗೂ ಒಂದು ಕಂಟೇನರ್ ಲಿಕ್ವಿಟ್ ಜಿಲ್ಲೆಯಾದ್ಯಂತ ಪೂರೈಕೆಯಾಗುತ್ತಿದೆ. ಆದರೆ, ಈ ಆಕ್ಸಿಜನ್ ರಿಫಿಲಿಂಗ್ ಮಾಡಿ ಪೂರೈಸುವ ಕಂಠಿ ರಿಫಿಲಿಂಗ್ ಘಟಕಕ್ಕೇ ಈಗ ಮೂಲ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎನ್ನಲಾಗಿದೆ.
ನಿತ್ಯ 13 ಕೆ.ಎಲ್ ಅಗತ್ಯ: ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ ಒಟ್ಟು 38 ಆಸ್ಪತ್ರೆಗಳಿಗೆ ನಿತ್ಯ 13 ಕೆ.ಎಲ್ (ಕಿಲೋ ಲೀಟರ್) ಆಕ್ಸಿಜನ್ ಅಗತ್ಯವಿದೆ. ಆದರೆ, ಜಿಲ್ಲೆಗೆ 16 ಕೆ.ಎಲ್ ಬೇಡಿಕೆ ಇಟ್ಟಿದ್ದು, ಇಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ. ಕಂಠಿ ರಿಫಿಲಿಂಗ್ ಘಟಕಕ್ಕೆ ಬಳ್ಳಾರಿಯ ಜಿಂದಾಲ್ ಕಂಪನಿಯಿಂದ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಅಲ್ಲಿಯೂ ಆಮ್ಲಜನ ಕೊರತೆ ಇರುವುದರಿಂದ ಜಿಲ್ಲೆಗೆ ಒಂದು ದಿನ 6 ಕೆ.ಎಲ್ ಬಂದರೆ, ಮತ್ತೂಂದು ದಿನ 10 ಕೆ.ಎಲ್. ಬರುತ್ತಿದೆ. ಹೀಗಾಗಿ ಅದರಲ್ಲಿಯೇ ನಿತ್ಯ 13 ಕೆ.ಎಲ್ ಜಿಲ್ಲೆಗೆ ಪೂರೈಸಲು ಕಂಠಿ ರಿಫಿಲಿಂಗ್ ಘಟಕದ ಸರ್ಕಸ್ ಮಾಡುತ್ತಿದೆ.
ಜಿಲ್ಲೆಯಲ್ಲಿ 382 ಆಕ್ಸಿಜನ್ ಬೆಡ್‌ಗಳು: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟಾರೆ 1595 ಬೆಡ್‌ಗಳಿವೆ. ಅದರಲ್ಲಿ 108 ಐಸಿಯು (ವೆಂಟಿಲೇಟರ್ ಸಹಿತ), 103 ಎಚ್‌ಡಿಯು ಹಾಗೂ 171 ಐಸಿಯು ಯೂನಿಟ್ ಸೇರಿದಂತೆ 382 ಆಕ್ಸಿಜನ್ ಬೆಡ್‌ಗಳಿವೆ. ಸಧ್ಯ ಜಿಲ್ಲೆಯಲ್ಲಿ 34 ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುತ್ತಿವೆ. ಅಲ್ಲದೇ 2481 ಆಕ್ಸಿವ್ ಕೇಸ್‌ಗಳಿದ್ದು, ಎಲ್ಲರೂ ಆಸ್ಪತ್ರೆಗೆ ದಾಖಲಾಗಿಲ್ಲ. 1990 ಜನರು ಹೋಂ ಐಸೋಲೇಶನ್‌ನಲ್ಲಿದ್ದು, ಉಳಿದವರು ಮಾತ್ರ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೇ ಸೋಂಕಿತರಿಗೇ ಸಧ್ಯ ಆಕ್ಸಿಜನ್ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲು ತೊಂದರೆ ಆಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿತರು ಹೆಚ್ಚಾದರೆ, ವೆಂಟಿಲೇಟರ್ ಮೂಲಕ ಚಿಕಿತ್ಸೆ ಕೊಡಬೇಕಾದರೆ ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಏನು ಎಂಬ ಭೀತಿ ಎದುರಾಗಿದೆ.
ಫಿಟ್ಟೆಡ್ ಆಂಬ್ಯುಲೆನ್ಸ್ ಇಲ್ಲವೇ ಇಲ್ಲ: ವೈದ್ಯಕೀಯ ಸೇವೆಯ ವಿಷಯದಲ್ಲಿ ಬಾಗಲಕೋಟೆಯನ್ನು 2ನೇ ಮೀರಜ್ ಎಂದು ಕರೆಯಲಾಗುತ್ತದೆ. ಕ್ಲಿನಿಕ್ ಗಳು ಸೇರಿದಂತೆ ಜಿಲ್ಲೆಯಲ್ಲಿ 817 ಆಸ್ಪತ್ರೆಗಳಿವೆ. ಬಾಗಲಕೋಟೆ ನಗರವೊಂದರಲ್ಲೇ 192 ಆಸ್ಪತ್ರೆಗಳಿದ್ದು, ಬಹುತೇಕ ಹೈಟೆಕ್ ಮತ್ತು ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಗಳಿವೆ. ಆದರೆ, ವೆಂಟಿಲೇಟರ್ ಫಿಟ್ಟೆಡ್ ಅಂಬ್ಯುಲೆನ್ಸ್ ಮಾತ್ರ ಜಿಲ್ಲೆಯಲ್ಲಿ ಒಂದೂ ಇಲ್ಲ ಎಂಬುದೇ ದೊಡ್ಡ ಕೊರಗು. ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಒಂದು ಮಾತ್ರ ಫಿಟ್ಟೆಡ್ ಅಂಬ್ಯುಲೆನ್ಸ ಇದ್ದು, ಅದು ಕಳೆದೆರಡು ದಿನಗಳಿಂದ ದುರಸ್ಥಿಗೆ ಹೋಗಿದೆ. ಹೀಗಾಗಿ ಸದ್ಯಕ್ಕೆ ಫಿಟ್ಟೆಡ್ ವೆಂಟಿಲೇಟರ್ ಇಲ್ಲ.