Advertisement

ಮಳೆ ಹೊಡೆತಕ್ಕೆ ಕೆರೆಯಂತಾಯ್ತು ಕಂಠೀರವ ಕ್ರೀಡಾಂಗಣ

10:36 AM Aug 17, 2017 | |

ಬೆಂಗಳೂರು: ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಮಳೆಗೆ ಸಿಕ್ಕಿ ಅಕ್ಷರಶಃ ಕೆರೆ ಯಂತಾಗಿದೆ. ಉದ್ಯಾನನಗರಿಯಲ್ಲಿ ಮಂಗಳವಾರ ತಡ ರಾತ್ರಿ ಸುರಿದ ಭಾರೀ ಮಳೆಗೆ ಕಂಠೀರವ ಒಳಾಂಗಣ ಹಾಗೂ ಹೊರಾಂಗಣ ತತ್ತರಿಸಿದೆ. 2 ವರ್ಷಗಳ ಹಿಂದಷ್ಟೇ ಇಂತಹ ದುಃಸ್ಥಿತಿ ಎದುರಿಸಿದ್ದರೂ ಕಂಠೀರವದ ಸ್ಥಿತಿ ಬದಲಾಗದಿರುವುದು ವಿಪರ್ಯಾಸ.

Advertisement

ಮಳೆ ನೀರಿನ ಜತೆ ರಾಜಕಾಲುವೆ ನೀರು ಕೂಡ ಸೇರಿಕೊಂಡಿದ್ದರಿಂದ ಕಂಠೀರವ ಒಳಾಂಗಣ ಕ್ರೀಡಾಂಗಣ ಅಕ್ಷರಶಃ ಜಲಾವೃತಗೊಂಡಿದೆ. ಕೆಲ ದಿನಗಳ ಹಿಂದಷ್ಟೇ 3.80 ಕೋಟಿ ರೂ. ಖರ್ಚು ಮಾಡಿ ಕಂಠೀರವ ಮೇಲ್ದರ್ಜೆಗೇರಿಸಲಾಗಿತ್ತು. ಹೊಸ ಮರದ ಹಾಸು ಗಳನ್ನು ಹಾಕಲಾಗಿತ್ತು. ಮಳೆ ನೀರಿನಿಂದ ಇವೆಲ್ಲ ಹಾನಿಗೊಳಗಾಗಿವೆ. ಅಲ್ಲದೇ ಹೊರಾಂಗಣ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೂ ತೀವ್ರ ಹಾನಿಯಾಗಿದೆ ಎನ್ನಲಾಗಿದೆ. ಮೇಲ್ದರ್ಜೆಗೇರಿಸಲ್ಪಟ್ಟ ಮೇಲೂ ಆಗಿರುವ ದುಃಸ್ಥಿತಿಗೆ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದ ತತ್‌ಕ್ಷಣ ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್‌ ಅಗರ್ವಾಲ್‌, ಉನ್ನತ ಅಧಿಕಾರಿಗಳು ಹಾಗೂ ಸಹಾಯಕ ಅಧಿಕಾರಿಗಳು ಬೆಳಗ್ಗೆಯೇ ಸ್ಥಳಕ್ಕೆ ಆಗಮಿಸಿದ್ದಾರೆ. ನೀರನ್ನು ಹೊರಹಾಕಲು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ.

ತಿಂಗಳ ಹಿಂದಷ್ಟೇ ಮೇಲ್ದರ್ಜೆಗೇರಿದ್ದ ಒಳಾಂಗಣ: ಮೊನ್ನ ತಾನೆ ಕಂಠೀರವ ಒಳಾಂಗಣ ಕ್ರೀಡಾಂಗಣ ಫಿಬಾ ಏಶ್ಯನ್‌ ಮಹಿಳಾ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಕೂಟದ  ಆತಿಥ್ಯ ವಹಿಸಿತ್ತು. ಈ ಕೂಟಕ್ಕೂ ಮೊದಲು ಕ್ರೀಡಾಂಗಣವನ್ನು 3.80 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆ
ಗೇರಿಸಲಾಗಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಂಗಣ ವೀಕ್ಷಿಸಿದ್ದರು. ಈ ಸಲ ಕಾಮಗಾರಿ ಸಂಪೂರ್ಣ ಗೊಂಡಿದೆ. ಚರಂಡಿ ನೀರು ಅಥವಾ ಮಳೆ ನೀರು ನುಗ್ಗಲು ಸಾಧ್ಯವೇ ಇಲ್ಲ. ಬಿಬಿಎಂಪಿ ಸಹಯೋಗದೊಂದಿಗೆ ಪರಿಹಾರ ಕಂಡುಕೊಂಡಿದ್ದೇವೆ ಎಂದು ಬೆನ್ನಲ್ಲೇ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೇಳಿತ್ತು. ಈಗ ಮತ್ತೆ ಮಳೆ ನೀರು ನುಗ್ಗಿ ಅನಾಹುತ ನಡೆದಿದೆ. ಈ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ.

ಹಿಂದೆಯೂ ಆಗಿತ್ತು, ಆದರೂ ಸ್ಥಿತಿ ಬದಲಾಗಿಲ್ಲ: ಕಳೆದ ಹಲವು ವರ್ಷಗಳಿಂದ ಮಳೆ ಬಂದಾಗಲೆಲ್ಲ ಕಂಠೀರವ ಕ್ರೀಡಾಂಗಣಕ್ಕೆ ನೀರು ನುಗ್ಗುತ್ತದೆ. ಅದರಲ್ಲೂ ಕಳೆದ ಎರಡು ವರ್ಷದ ಹಿಂದೆ ಕಂಠೀರವದಲ್ಲಿ ಹೀಗೆಯೇ ನೀರು ತುಂಬಿಕೊಂಡಿತ್ತು. ಆಗಿನ ಸ್ಥಿತಿ ನೋಡಿದಾಗ ಮುಂದಿನ ದಿನಗಳಲ್ಲಿ ಇದು ಸರಿಯಾಗಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಪರಿಸ್ಥಿತಿ ಬದಲಾಗಿಲ್ಲ. ಸರಕಾರ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಿಲ್ಲ.

Advertisement

ಕ್ರೀಡಾ ಹಾಸ್ಟೇಲ್‌ಗ‌ೂ ನುಗ್ಗಿದ ನೀರು: ಅನಾಹುತ ಪ್ರಮಾಣ ಎಷ್ಟಿತ್ತೇಂದರೆ ಪಕ್ಕದ ಕ್ರೀಡಾ ಹಾಸ್ಟೆಲ್‌ಗ‌ೂ ನೀರು ನುಗ್ಗಿದೆ. ಇದರಿಂದ ವಸತಿ ಶಾಲೆಯಲ್ಲಿರುವ ಕ್ರೀಡಾ ಪಟುಗಳು ಕೂಡ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ.

ಯಾಕೆ ಹೀಗೆ ನೀರು ನಿಲ್ಲುತ್ತದೆ?
ಕಂಠೀರವ ಕ್ರೀಡಾಂಗಣ ತಗ್ಗು ಪ್ರದೇಶದಲ್ಲಿದೆ. ಮಳೆ ಬಂದಾಗ ರಸ್ತೆ ನೀರು ಕ್ರೀಡಾಂಗಣಕ್ಕೆ ನುಗ್ಗುತ್ತದೆ. ಜತೆಗೆ ಅಲ್ಲೇ ಪಕ್ಕದಲ್ಲಿರುವ ರಾಜಕಾಲುವೆಯಲ್ಲಿ ನೀರು ತುಂಬಿ ತುಳುಕುತ್ತದೆ. ಹೀಗಾಗಿ ಕ್ರೀಡಾಂಗಣದಿಂದ ಹೊರ ಹೋಗುವ ನೀರಿಗೆ ಇಲ್ಲಿ ಜಾಗ ಸಿಗುವುದಿಲ್ಲ. ಇದು ಚರಂಡಿ ನೀರಿನೊಂದಿಗೆ ಸೇರಿ ತನ್ನ ಪ್ರಮಾಣ ಹೆಚ್ಚಿಸಿಕೊಂಡು ಕ್ರೀಡಾಂಗಣದೊಳಗೆ ನುಗ್ಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next